ಹಾಸನ: ‘ರಾಮನಗರಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರು ಏನೇನು ಮಾಡಿದ್ದಾರೆ ಎಂಬುದನ್ನು ದಾಖಲೆ ತೆಗೆದು ನೋಡಿದರೆ ಕಾಂಗ್ರೆಸ್‌ನವರಿಗೆ ಗೊತ್ತಾಗುತ್ತದೆ’ ಎಂದು ಶಾಸಕ ಎಚ್.ಡಿ. ರೇವಣ್ಣ ತಿರುಗೇಟು ನೀಡಿದರು.
‘ಸ್ವಹಿತಕ್ಕಾಗಿ ರಾಮನಗರ ಜಿಲ್ಲೆ ಮಾಡಿದರು’ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿಯಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ‘ರಾಮನಗರ ಜಿಲ್ಲೆ ಮಾಡಿದ್ದಲ್ಲದೇ, ₹120 ಕೋಟಿ ವೆಚ್ಚದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಿರ್ಮಿಸಿದ್ದಾರೆ. ಅದರಲ್ಲಿ ಕುಮಾರಸ್ವಾಮಿ ಮಕ್ಕಳು ಓದುತ್ತಿದ್ದಾರಾ’ ಎಂದು ಪ್ರಶ್ನಿಸಿದರು.
‘ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡಿ, ಕೆಂಪೇಗೌಡರ ಹೆಸರಿಡಬೇಕು ಎಂದು ಕುಮಾರಸ್ವಾಮಿ ತೀರ್ಮಾನ ಕೈಗೊಂಡಿದ್ದರು. ಕೆಲವರು ರಾಮನಗರ ಜಿಲ್ಲೆ ಎಂದು ಹೆಸರಿಡಬೇಕು ಎಂದು ಹೇಳಿದ್ದರಿಂದ, ಅದೇ ನಿರ್ಧಾರ ಮಾಡಿದ್ದರು’ ಎಂದರು.
‘ರಾಮನಗರದಲ್ಲಿ ವೈದ್ಯಕೀಯ ಕಾಲೇಜು, ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾಲಯ ನಿರ್ಮಾಣಕ್ಕೆ 10 ವರ್ಷದಿಂದ ಯಾರು ತಡೆಯೊಡ್ಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಲ ಬಂದಾಗ ಉತ್ತರ ನೀಡುತ್ತೇನೆ. ರಾಮನಗರ ಜಿಲ್ಲೆ ತೆಗೆಯಲಿ ನೋಡೋಣ. ಆಗ ಎಲ್ಲವನ್ನೂ ಮಾತನಾಡುತ್ತೇನೆ’ ಎಂದು ಪ್ರತಿಕ್ರಿಯೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.