ADVERTISEMENT

ಕುಂದೂರು ಮಠ: ಜಾತ್ರಾ ಮಹೋತ್ಸಕ್ಕೆ ಚಾಲನೆ

ಧರ್ಮಧ್ವಜಾರೋಹಣ ನೆರವೇರಿಸಿದ ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 14:26 IST
Last Updated 17 ಡಿಸೆಂಬರ್ 2023, 14:26 IST
ಚನ್ನರಾಯಪಟ್ಟಣ ತಾಲ್ಲೂಕು ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಠದಲ್ಲಿ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಭಾನುವಾರ ಪೂರ್ಣಾಹುತಿ ನೆರವೇರಿಸಿದರು. ಶಂಭುನಾಥಸ್ವಾಮೀಜಿ, ಡಾ. ಸೂರಜ್ ರೇವಣ್ಣ, ಶಿವಪುತ್ರಸ್ವಾಮೀಜಿ ಭಾಗವಹಿಸಿದ್ದರು
ಚನ್ನರಾಯಪಟ್ಟಣ ತಾಲ್ಲೂಕು ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಠದಲ್ಲಿ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಭಾನುವಾರ ಪೂರ್ಣಾಹುತಿ ನೆರವೇರಿಸಿದರು. ಶಂಭುನಾಥಸ್ವಾಮೀಜಿ, ಡಾ. ಸೂರಜ್ ರೇವಣ್ಣ, ಶಿವಪುತ್ರಸ್ವಾಮೀಜಿ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ಪ್ರತಿವರ್ಷದಂತೆ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಭಾನುವಾರ ಧರ್ಮಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು ಮಂಗಳವಾದ್ಯದ ನಾದದೊಂದಿಗೆ ಬರಮಾಡಿಕೊಳ್ಳಲಾಯಿತು. ಸುಬ್ರಹ್ಮಣ್ಯೇಶ್ವರ ದೇಗುಲದ ಬಳಿ ಗೋವು ಪೂಜೆ ನೆರವೇರಿಸಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ರಂಗನಾಥಸ್ವಾಮಿ, ಈಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿ ದೇಗುಲದ ಮುಂಭಾಗ ಧರ್ಮಧ್ವಜಾರೋಹಣ ನೆರವೇರಿಸಿ ರಥಕ್ಕೆ ನವಕಲಶಾರೋಹಣ ಮಾಡಿದರು.

ಕ್ಷೇತ್ರದ ಪ್ರಧಾನ ದೇವತೆ ಮೆಳೆಯಮ್ಮ, ರಂಗನಾಥಸ್ವಾಮಿ, ಈಶ್ವರಸ್ವಾಮಿ, ಸುಬ್ರಹ್ಮಣ್ಯೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳು, ಕ್ಷೇತ್ರದ ಹಿಂದಿನ ಪೀಠಾಧ್ಯಕ್ಷರುಗಳ ಸ್ಮರಣೆಯೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಯಿತು. ಕ್ಷೇತ್ರದಲ್ಲಿ ದೀಪಾವಳಿಯಿಂದ ಕಾರ್ತಿಕಮಾಸದವರಗೆ ದೀಪೋತ್ಸವ ನಡೆಯಿತು. ನಂತರ ಈಗ ಷಷ್ಠಿ ಪ್ರಾರಂಭವಾಗಿದೆ.

ADVERTISEMENT

ಮೆಳೆಯಮ್ಮ ದೇವಿಗೆ ಶ್ರೀಗಳು ಪೂಜೆ ಮಾಡಿದರು. ದೇವಿಯ ಸನ್ನಿಧಾನದಲ್ಲಿ ಗಣಪತಿ ಹೋಮ, ವಾಸ್ತು ಹೋಮ, ಮೃತ್ಯುಂಜಯ ಹೋಮ, ದುರ್ಗಾಹೋಮ, ಪೂರ್ಣಾಹುತಿ ನೆರವೇರಿಸಿದರು. ಭಕ್ತಾಧಿಗಳು ಲಲಿತಾಸಹಸ್ರನಾಮ ಪಠಿಸಿದರು. ಆದಿಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಕಬ್ಬಳಿಯ ಶಿವಪುತ್ರಸ್ವಾಮೀಜಿ ಸೇರಿ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಡಿ.18ರಂದು ಕ್ಷೇತ್ರದಲ್ಲಿ ಸಂಜೆ ಸುಬ್ರಹ್ಮಣ್ಯೇಶ್ವರಸ್ವಾಮಿಯ ರಥೋತ್ಸವ ಹಾಗು ಸರ್ಪವಾಹನೋತ್ಸವ ಜರುಗಲಿದೆ. ಉಪವಾಸ ವ್ರತ ಆಚರಿಸುವ ಸುತ್ತಲಿನ ಗ್ರಾಮಸ್ಥರು ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸುವರು. ಅದೇ ದಿನ ಸಂಜೆ 6.30ಕ್ಕೆ ಆಯೋಜಿಸಿರುವ ಧಾರ್ಮಿಕ ಸಮಾರಂಭದಲ್ಲಿ ನಿರ್ಮಲಾನಂದನಾಥಸ್ವಾಮೀಜಿ ಸಾನ್ನಿಧ್ಯವಹಿಸುವರು.

ಡಿ. 19 ರಂದು ರಂಗನಾಥಸ್ವಾಮಿಯ ರಥೋತ್ಸವ ಮತ್ತು ಗರುಡೋತ್ಸವ ಇದೆ. ಮೂರು ದಿನ ನಿತ್ಯಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಿ.20 ರಂದು ಕ್ಷೇತ್ರದ ಹಿಂದಿನ ಪೀಠಾಧ್ಯಕ್ಷರು ಪುಣ್ಯಾರಾಧನೆ ಹಾಗು ಗುರುಸಂಸ್ಮರಣೋತ್ಸವ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.