ADVERTISEMENT

ಅರಕಲಗೂಡು | ಮಳೆ ಅಭಾವ: ತೋಟಗಾರಿಕೆ ಬೆಳೆಗಳಿಗೂ ಕುತ್ತು

ಜಿ.ಚಂದ್ರಶೇಖರ್‌
Published 2 ಮೇ 2024, 5:16 IST
Last Updated 2 ಮೇ 2024, 5:16 IST
ಅರಕಲಗೂಡು ತಾಲ್ಲೂಕು ಕೆಂದಿಣ್ಣೆ ಕಾವಲು ಗ್ರಾಮದಲ್ಲಿ ಕಾಫಿ ತೋಟ ಬಿಸಿಲಿಗೆ ಸಂಪೂರ್ಣ ಒಣಗಿ ನಾಶವಾಗಿದೆ.
ಅರಕಲಗೂಡು ತಾಲ್ಲೂಕು ಕೆಂದಿಣ್ಣೆ ಕಾವಲು ಗ್ರಾಮದಲ್ಲಿ ಕಾಫಿ ತೋಟ ಬಿಸಿಲಿಗೆ ಸಂಪೂರ್ಣ ಒಣಗಿ ನಾಶವಾಗಿದೆ.   

ಅರಕಲಗೂಡು: ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ಅಂತರ್ಜಲ ಬತ್ತಿದ್ದು, ತೋಟಗಾರಿಕೆ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ರೈತರಿಗೆ ದೀರ್ಘಾವಧಿ ಆದಾಯ ತರುವ ಕಾಫಿ, ತೆಂಗು, ಅಡಿಕೆ ಹಾಗೂ ವೀಳ್ಯದೆಲೆ, ಕಾಳು ಮೆಣಸು ಸೇರಿದಂತೆ ತೋಟಗಾರಿಕೆ ಬೆಳೆಗಳು ಬರದ ಬೇಗೆಗೆ ಸಿಲುಕಿ ನಲುಗುತ್ತಿವೆ. ಮಳೆ ಇಲ್ಲದೇ ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನದಿಂದಾಗಿ ಅಂತರ್ಜಲ ಮಟ್ಟ ಪಾತಾಳ ತಲುಪಿದೆ. ಪರಿಣಾಮವಾಗಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 70 ಸಾವಿರ ಹೆಕ್ಟೇರ್‌ಗೂ ಅಧಿಕ ಕೃಷಿ ಪ್ರದೇಶವಿದ್ದು, ತಂಬಾಕು ಸೇರಿದಂತೆ ಇತರೆ ಬೆಳೆಗಳನ್ನು 50 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗಿತ್ತು. ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಈ ಬಾರಿ ಬರದ ಛಾಯೆ ಆವರಿಸಿದೆ.

ADVERTISEMENT

ಹಿಂದಿನ ಸಾಲಿನ ಮಳೆಯ ಪ್ರಮಾಣವನ್ನು ಅವಲೋಕಿಸಿದರೆ, ಸಾಮಾನ್ಯವಾಗಿ ಯುಗಾದಿ ಮುನ್ನ ಹಾಗೂ ನಂತರದ ದಿನಗಳಲ್ಲಿ ಮುಂಗಾರು ಪೂರ್ವ ಮಳೆ ಬೀಳುತ್ತಿತ್ತು. ಇದರಿಂದ ರೈತರಿಗೆ ಬೇಸಿಗೆ ಸಮಯದಲ್ಲಿ ಭೂಮಿಯ ಉಳುಮೆ ಸೇರಿದಂತೆ ದ್ವಿದಳ ಧಾನ್ಯ, ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಮಳೆ ಮಾಯವಾಗಿದ್ದು, ಬೆಳೆಗಳು ಒಣಗಲು ಕಾರಣವಾಗಿದೆ.

ತಾಲ್ಲೂಕಿನಲ್ಲಿ 4 ಸಾವಿರ ಹೆಕ್ಟೇರ್‌ನಲ್ಲಿ ಅಡಿಕೆ, 2,500 ಹೆಕ್ಟೇರ್‌ನಲ್ಲಿ ತೆಂಗು, 1,300 ಹೆಕ್ಟೇರ್‌ನಲ್ಲಿ ಶುಂಠಿ ಬೆಳೆಯನ್ನು ಬೆಳೆಯಲಾಗಿದೆ. ಇದರ ನಡುವೆ ಹಸಿ ತರಕಾರಿ ಬೆಳೆಗಳು, ಮೆಕ್ಕೆಜೋಳ ಸೇರಿದಂತೆ ಅರೆ ನೀರಾವರಿ ಬೆಳೆಗಳನ್ನು ರೈತರು ಕೈಗೊಂಡಿದ್ದಾರೆ.

ಕೆರೆಗಳಲ್ಲಿ ನೀರು ಬತ್ತುತ್ತಿರುವುದರಿಂದ ಅಚ್ಚುಕಟ್ಟಿನ ತೋಟಗಾರಿಕೆ ಬೆಳೆಗಳಿಗೆ ನೀರು ಒದಗಿಸುತ್ತಿದ್ದ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಇಳಿಮುಖವಾಗಿದೆ. ಹಲವು ಕೊಳವೆಬಾವಿಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿದ್ದು, ಪರಿಣಾಮ ಬೆಳೆಗಳನ್ನು ಉಳಿಸಿಕೊಳ್ಳಲು ಹೊಸ ಕೊಳವೆಬಾವಿ ಕೊರೆಸಲು ರೈತರು ಮುಂದಾಗುತ್ತಿರುವುದು ಕಂಡುಬಂದಿದೆ. ಇದರಿಂದ ಅಕ್ಕಪಕ್ಕದಲ್ಲಿನ ಕೊಳವೆ ಬಾವಿಗಳಲ್ಲಿಯೂ ನೀರು ಕಡಿಮೆಯಾಗುತ್ತಿದ್ದು, ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ.

ಒಣಗಿ ನಾಶವಾಗುತ್ತಿರುವ ಬೆಳೆಗಳು: ತಾಲ್ಲೂಕಿನ ಗಡಿಭಾಗ ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಫಿ, ಏಲಕ್ಕಿ, ಕಾಳುಮೆಣಸು ಹಾಗೂ ಅಡಿಕೆ ತೋಟ ಕೃಷಿಯನ್ನು ರೈತರು ಕೈಗೊಂಡಿದ್ದಾರೆ.

ಕೊಣನೂರು, ರಾಮನಾಥಪುರ, ದೊಡ್ಡಮಗ್ಗೆ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿಯೂ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ರೇಷ್ಮೆ ಬೆಳೆಗಳನ್ನು ಬೆಳೆಯಲಾಗಿದೆ. ಈ ಬೆಳೆಗಳು ಹೆಚ್ಚಾಗಿ ನೀರನ್ನು ಅವಲಂಬಿತವಾಗಿವೆ. ಕೆರೆ, ಕೊಳವೆಬಾವಿಗಳಲ್ಲಿ ನೀರು ಇಲ್ಲದ ಪರಿಣಾಮ ಬೆಳೆಗಳು ಒಣಗುತ್ತಿವೆ.

ಹೊಸ ಕೊಳವೆಬಾವಿ ಕೊರೆಸಲು ಮುಂದಾದರೂ ಸಮರ್ಪಕವಾಗಿ ನೀರು ಸಿಗದೇ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಸಿಲಿನ ತಾಪಮಾನಕ್ಕೆ ಈಗಾಗಲೇ ಹತ್ತಾರು ಕಾಫಿ, ಅಡಿಕೆ ತೋಟಗಳು ಒಣಗತೊಡಗುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಬೀಳದೇ ಹೋದರೆ ಮತ್ತಷ್ಟು ಅಡಿಕೆ, ಕಾಫಿ ತೋಟಗಳು ಬಿಸಿಲಿನ ತಾಪಕ್ಕೆ ನಾಶವಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಅರಕಲಗೂಡು ತಾಲ್ಲೂಕು ಮುದಗನೂರು ಗ್ರಾಮದ ಬರಡು ಭೂಮಿಯಲ್ಲಿ ಶುಂಠಿ ಬೇಸಾಯ ಕೈಗೊಂಡಿದ್ದು ನೀರಿನ ಅಭಾವ ತಲೆದೋರಿದೆ.
ಅರಕಲಗೂಡು ತಾಲ್ಲೂಕು ಹುಲಿಕಲ್ ಗ್ರಾಮದಲ್ಲಿ ರೈತರೊಬ್ಬರ ಅಡಿಕೆ ತೋಟದಲ್ಲಿನ ಬೆಳೆಗಳು ನೀರಿಲ್ಲದೇ ಒಣಗಿವೆ.
ತಾಲ್ಲೂಕಿನಲ್ಲಿ ಬರದ ಛಾಯೆ ಎದುರಾಗಿದ್ದು ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದಿನ ಅವಧಿಯಲ್ಲಿ ಹಿಂಗಾರು ಮಳೆ ಅಬ್ಬರ ಕಂಡು ಬರುತ್ತಿತ್ತು.
ರಾಜೇಶ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಡಿಕೆ ತೆಂಗು ಸೇರಿದಂತೆ ತೋಟಗಾರಿಕೆ ಬೆಳೆಗಳು ಒಣಗಿ ನೆಲ ಕಚ್ಚುತ್ತಿವೆ. ಬಿಸಿಲಿನ ತಾಪಕ್ಕೆ ಅಂತರ್ಜಲ ಕುಸಿದಿದೆ. ಹೊಸ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ದಿಕ್ಕು ತೋಚದಾಗಿದೆ.
- ಅಶ್ರೀರಾಂಪುರ ವೆಂಕಟೇಶ್ ರೈತ

ಶುಂಠಿ ಬೆಳೆಯತ್ತ ರೈತರು

ಶುಂಠಿಗೆ ಉತ್ತಮ ದರ ದೊರಕಿದ್ದರಿಂದ ಈ ಬಾರಿ ತಾಲ್ಲೂಕಿನಲ್ಲಿ ಶುಂಠಿ ಬಿತ್ತನೆ ಪ್ರಮಾಣ ಅಧಿಕವಾಗಿ ವಿಸ್ತರಣೆಗೊಂಡಿದೆ. ಆದರೆ ಮಳೆಯ ಮುನಿಸು ಶುಂಠಿ ಬೆಳೆ ಬೆಳವಣಿಗೆಗೆ ಕುತ್ತಾಗಿ ಪರಿಣಮಿಸಿದೆ. ಕಳೆದ 4–5 ವರ್ಷಗಳ ಹಿಂದೆ ಶುಂಠಿಗೆ ಬೆಲೆ ಕುಸಿತಗೊಂಡ ಪರಿಣಾಮ ತಾಲ್ಲೂಕಿನಲ್ಲಿ ಶುಂಠಿ ಬೆಳೆ ಪ್ರದೇಶ ಕುಂಠಿತಗೊಂಡಿತ್ತು.

ಎರಡು ವರ್ಷಗಳಿಂದ ನಿರೀಕ್ಷೆಗೂ ಮೀರಿ ಬೆಲೆ ದೊರೆಯುತ್ತಿರುವುದರಿಂದ ಶುಂಠಿ ಬೆಳೆ ಪ್ರದೇಶ ಸಾವಿರ ಹೆಕ್ಟೇರ್‌ ಗಡಿಯನ್ನು ದಾಟಿದೆ. ಇದರಿಂದ ಕೊಳವೆಬಾವಿಗಳನ್ನು ಹೊಸದಾಗಿ ಕೊರೆಸುವುದು ನಿತ್ಯ ಕಂಡುಬರುತ್ತಿದೆ. ವಿಶೇಷವಾಗಿ ರೈತರು ಶುಂಠಿ ಬೆಳೆ ಕೈಗೊಳ್ಳುವ ವೇಳೆ ಅಂತರ ಬೇಸಾಯವಾಗಿ ಅಡಿಕೆ ತೆಂಗು ಕೃಷಿಯನ್ನು ಕೈಗೊಳ್ಳುವುದು ವಾಡಿಕೆ. ಮಳೆ ಆಶ್ರಯದ ಭೂಮಿ ಈಗ ಶುಂಠಿ ಬೆಳೆಯನ್ನು ಕೈಗೊಳ್ಳುವ ಚಿನ್ನದ ಭೂಮಿಯಾಗಿ ಪರಿವರ್ತನೆಗೊಂಡಿದೆ.

ಆದರೆ ರೈತರ ಆಸೆಯ ಬೆಳೆ ಶುಂಠಿಗೆ ಮಳೆ ಕೈಕೊಟ್ಟಿದ್ದು ಇತ್ತ ಅಂತರ್ಜಲವೂ ಬತ್ತಿರುವುದರಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲಾರದೇ ಹೈರಾಣಾಗಿದ್ದಾರೆ. ಸದ್ಯದಲ್ಲೇ ಮಳೆ ಬಾರದಿದ್ದರೆ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟಕರವಾಗಲಿದೆ ಎನ್ನುತ್ತಾರೆ ಅನ್ನದಾತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.