ADVERTISEMENT

ಮಳೆ ಕೊರತೆ: ತರಕಾರಿ ಬೆಲೆ ಗಗನಕ್ಕೆ

ಹಿರೀಸಾವೆ ವಾರದ ಸಂತೆಯಲ್ಲಿ ಗ್ರಾಹಕರ ಜೇಬಿಗೆ ಹೊರೆ

ಹಿ.ಕೃ.ಚಂದ್ರು
Published 13 ಮೇ 2024, 5:04 IST
Last Updated 13 ಮೇ 2024, 5:04 IST
ಹಿರೀಸಾವೆಯಲ್ಲಿ ಭಾನುವಾರದ ಸಂತೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಿದ್ದು, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು
ಹಿರೀಸಾವೆಯಲ್ಲಿ ಭಾನುವಾರದ ಸಂತೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಿದ್ದು, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು    

ಹಿರೀಸಾವೆ: ಹೋಬಳಿಯಲ್ಲಿ ಮಳೆಯ ಕೊರತೆ, ಹೆಚ್ಚುತ್ತಿರುವ ಉಷ್ಣಾಂಶ, ನೀರಿಲ್ಲದೇ ತರಕಾರಿ ಫಸಲು ಕುಂಠಿತವಾಗಿದ್ದು, ಭಾನುವಾರದ ಸಂತೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೆ ಏರಿದ್ದವು.

ಬೀನ್ಸ್ ಮತ್ತು ಹಸಿ ಶುಂಠಿ ಕೆ.ಜಿ.ಗೆ ₹ 180 ರಿಂದ ₹ 200 ದಾಟಿತ್ತು. ಹೆಚ್ಚಾದ ಬೆಲೆಯಿಂದ ಒಂದು ಕೆ.ಜಿ. ಕೊಳ್ಳುವ ಗ್ರಾಹಕರು ಕಾಲು ಕೆ.ಜಿ. ಕೊಳ್ಳುವಂತಾಗಿತ್ತು. ಟೊಮ್ಯಾಟೊ ಮತ್ತು ಈರುಳ್ಳಿ ಕೆ.ಜಿ.ಗೆ ₹ 15 ರಿಂದ ₹ 30 ಇದ್ದರೆ, ಉಳಿದ ತರಕಾರಿಗಳ ಬೆಲೆ ₹ 40ಕ್ಕಿಂತ ಹೆಚ್ಚಾಗಿದೆ. ನಾಟಿ ಬೆಳ್ಳುಳ್ಳಿ ಸಹ ₹ 260 ರಿಂದ ₹ 280 ಆಗಿದೆ. ಬಹುತೇಕ ಎಲ್ಲ ರೀತಿಯ ಸೊಪ್ಪುಗಳು ₹ 10ಕ್ಕೆ ಒಂದು ಕಂತೆಯಾದರೆ, ನುಗ್ಗೆಕಾಯಿ ಕೆಜಿಗೆ ₹ 80, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ, ಗೆಡ್ಡೆಕೋಸುಗಳು ₹ 100 ರಿಂದ ₹ 120, ಆಲೂಗಡ್ಡೆ, ಬದನೆಕಾಯಿ ₹ 40, ಕ್ಯಾರೆಟ್, ಬೀಟ್‌ರೂಟ್‌ ಸೇರಿದಂತೆ ಇತರೆ ತರಕಾರಿಗಳು ಕೆಜಿಗೆ ₹ 50 ರಿಂದ ₹ 60 ಇತ್ತು.

ಪಚ್ಚೆ ಬಾಳೆಹಣ್ಣು ಕೆ.ಜಿ. ₹30 ರಿಂದ ₹ 40 ಮತ್ತು ಪುಟ್ಟ ಬಾಳೆಹಣ್ಣು ₹ 50 ರಿಂದ ₹ 60 ಇತ್ತು. ಸೌತೆಕಾಯಿ ₹ 50 ಕ್ಕೆ ಮೂರರಿಂದ ನಾಲ್ಕು, ನಿಂಬೆಹಣ್ಣು ₹ 20 ಕ್ಕೆ 3 ಅಥವಾ 4 ಇತ್ತು. ಸಣ್ಣ ಈರುಳ್ಳಿ ₹ 100 ಕ್ಕೆ 5 ರಿಂದ 6 ಕೆ.ಜಿ., ಉತ್ತಮ ಈರುಳ್ಳಿ ₹100ಕ್ಕೆ 4 ಕೆಜಿ ಆಗಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳು.

ADVERTISEMENT

ಹಣ್ಣುಗಳ ಬೆಲೆಯೂ ಹೆಚ್ಚಾಗಿದ್ದು, ಸೇಬು ಕೆ.ಜಿ.ಗೆ ₹ 200, ದ್ರಾಕ್ಷಿ ₹ 80, ಕರ್ಬುಜ ₹ 50, ಮೊಸಂಬಿ ₹ 50 ರಿಂದ ₹ 60, ವಿದೇಶದ ಡ್ಯ್ರಾಗನ್ ಫ್ರೂಟ್ ಒಂದಕ್ಕೆ ₹ 100 ಎಂದು ಹಣ್ಣಿನ ವ್ಯಾಪಾರಿ ತಿಪಟೂರಿನ ಇಮ್ರಾನ್ ತಿಳಿಸಿದರು.

ನೀರಿನ ಕೊರತೆ ಮತ್ತು ಬಿಸಿಲಿನ ತಾಪದಿಂದಾಗಿ ತರಕಾರಿ ಫಸಲು ಉತ್ತಮವಾಗಿಲ್ಲ. ಇದರಿಂದ ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದೆ ಅರಕೆರೆ

–ಮಂಜು ತರಕಾರಿ ವ್ಯಾಪಾರಿ

ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೋಲ್‌ಸೇಲ್ ದರವು ಒಂದು ಮೊಟ್ಟೆಗೆ ₹ 6 ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು

–ಪ್ರಗತಿ ವಾಸು ಮೊಟ್ಟೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.