ADVERTISEMENT

ಹಾಸನ | ಸಿಬ್ಬಂದಿ, ಅನುದಾನದ ಕೊರತೆ; ಸೊರಗಿದ ಉದ್ಯಾನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 6:05 IST
Last Updated 8 ಜುಲೈ 2024, 6:05 IST
<div class="paragraphs"><p>ಹಾಸನದ ಮಹಾರಾಜ ಪಾರ್ಕ್‌ ಎದುರು ನಿರ್ಮಿಸಿರುವ ಹೇಮಾವತಿ ಪ್ರತಿಮೆ.</p></div>

ಹಾಸನದ ಮಹಾರಾಜ ಪಾರ್ಕ್‌ ಎದುರು ನಿರ್ಮಿಸಿರುವ ಹೇಮಾವತಿ ಪ್ರತಿಮೆ.

   

ಹಾಸನ: ಜಿಲ್ಲಾ ಕೇಂದ್ರವೂ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಪ್ರಮುಖ ಉದ್ಯಾನಗಳು ಇವೆಯಾದರೂ, ಸಮರ್ಪಕವಾದ ನಿರ್ವಹಣೆ ಕೊರತೆಯಿಂದ ಸೊರಗುತ್ತಿವೆ ಎನ್ನುವ ದೂರುಗಳು ವ್ಯಾಪಕವಾಗುತ್ತಿವೆ.

ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಉಸ್ತುವಾರಿ ವಹಿಸಿಕೊಂಡು ನಿರ್ವಹಣೆ ಮಾಡುತ್ತಿದ್ದರೆ, ತಾಲ್ಲೂಕಿನಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿಗಳು ನಿರ್ವಹಣೆಯನ್ನು ಮಾಡುತ್ತಿವೆ. ಅನುದಾನ ಮತ್ತು ಕಾರ್ಮಿಕರ ಕೊರತೆಯಿಂದಾಗಿ ಉದ್ಯಾನಗಳು ನಿರ್ವಹಣೆ ಕಾಣದಾಗಿದೆ.

ADVERTISEMENT

ಪ್ರಮುಖ ಉದ್ಯಾನಗಳಲ್ಲಿ ಇಂದಿಗೂ ಪರಿಸರ ಪ್ರಿಯರು ಹಾಗೂ ನಾಗರಿಕರು ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಹಾಸನ ನಗರದ ಹೃದಯ ಭಾಗದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ ಉದ್ಘಾಟನೆ ಆಯಿತು ಎಂಬ ಐತಿಹ್ಯ ಹೊಂದಿರುವ ಮಹಾರಾಜ ಪಾರ್ಕ್ ವಿಶಾಲವಾಗಿದೆ. ಕಾಲ ಕಳೆದಂತೆ ಒತ್ತುವರಿ ಸೇರಿದಂತೆ ಇತರೆ ಕಾರಣಗಳಿಂದ ವಿಸ್ತೀರ್ಣ ಕಡಿಮೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ನಗರದ ಅತ್ಯಂತ ದೊಡ್ಡ ಉದ್ಯಾನವೆಂದರೆ ಮಹಾರಾಜ ಪಾರ್ಕ್ ಆಗಿದ್ದು, ಹಸಿರು ಹುಲ್ಲು ಮತ್ತು ದೊಡ್ಡ ಮರಗಳಿಂದ ಸುತ್ತುವರೆದಿವೆ. ಈ ಪಾರ್ಕ್‌ನಲ್ಲಿ ಜನರು ನಿಸರ್ಗ ಸೌಂದರ್ಯ ಸವಿಯುತ್ತ ಓಡಾಡಲೆಂದು ಕಾಲುದಾರಿಗಳನ್ನು ಮಾಡಲಾಗಿದೆ. ನಗರದೊಳಗೆ ಸಣ್ಣ ವಿಹಾರ ಮಾಡಬೇಕು ಎಂದರೆ ಇದು ಸೂಕ್ತ ಸ್ಥಳ ಎನ್ನಬಹುದು.

ಇಲ್ಲಿ ಈಜುಕೊಳದಿಂದ ಹಿಡಿದು ಮಕ್ಕಳಿಗೆ ಆಟವಾಡುವುದಕ್ಕೆ ಸಾಮಗ್ರಿಗಳನ್ನು ಇರಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಸಾವಿರಾರು ಮಂದಿ ಈ ಪಾರ್ಕ್‌ನಲ್ಲಿ ವಾಯು ವಿಹಾರಕ್ಕೆ ಬರುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಸುತ್ತಲಿನ ಕಾಲೇಜು ವಿದ್ಯಾರ್ಥಿಗಳು ಪಾಠ ಪ್ರವಚನಕ್ಕಿಂತ ಪಾರ್ಕ್‌ನಲ್ಲಿಯೇ ಕಾಲ ಕಳೆಯುವುದು ಹೆಚ್ಚು ಎಂದು ಇಲ್ಲಿ ವಾಯುವಿಹಾರಕ್ಕೆ ಬರುವ ಹಲವು ಹಿರಿಯರು ಆರೋಪಿಸಿದ್ದಾರೆ.

ಕಾಲೇಜಿನ ತರಗತಿ ಅವಧಿ ಮುಗಿದ ನಂತರ ಸಂಜೆವರೆಗೂ ಪಾರ್ಕ್‌ನಲ್ಲಿ ಕಾಲ ಕಳೆಯುವ ಯುವ ವಿದ್ಯಾರ್ಥಿಗಳ ಬೇಕಾಬಿಟ್ಟಿ ವರ್ತನೆ, ವಾಯು ವಿಹಾರಿಗಳಿಗೆ ಇರುಸು ಮುರಿಸು ಉಂಟು ಮಾಡುತ್ತಿದೆ ಎನ್ನುತ್ತಾರೆ ಹಿರಿಯರಾದ ಗೋಪಾಲ್.

ಪಾರ್ಕ್‌ನಲ್ಲಿ ಪುರಸಭೆಯಿಂದ ಪ್ರತಿದಿನ ಸ್ವಚ್ಛತೆ ಕಾರ್ಯ ನಡೆಯುತ್ತಿದ್ದು, ಗೃಹರಕ್ಷಕದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿದಿನ ಸಂಜೆ ಹಾಗೂ ಬೆಳಿಗ್ಗೆ ಪಾರ್ಕ್‌ನಲ್ಲಿ ಹಾಕಲಾಗುತ್ತಿದ್ದ ಆಕಾಶವಾಣಿ ರೇಡಿಯೋ ಮಾಹಿತಿಯನ್ನು ಕೆಲ ತಿಂಗಳಿಂದ ನಿಲ್ಲಿಸಲಾಗಿದ್ದು, ಮತ್ತೆ ಪುನರಾರಂಭ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಸ್ತು ಸಂಗ್ರಾಲಯವನ್ನು ಕೇಂದ್ರ ಗ್ರಂಥಾಲಯದ ಪಕ್ಕಕ್ಕೆ ವರ್ಗಾಯಿಸಲಾಗಿದ್ದು, ಸಂಗ್ರಹಾಲ ಯದಲ್ಲಿ ಇಡಲಾಗಿದ್ದ ಆಂಜನೇಯ ಮೂರ್ತಿಯನ್ನು ಪಾರ್ಕ್‌ನಲ್ಲಿ ಹೊಸ ದಾಗಿ ಪ್ರತಿಷ್ಠಾಪನೆ ಮಾಡ ಲಾಗಿದೆ. ನಿತ್ಯ ಪೂಜೆ ಮಾಡಲು ಅರ್ಚಕರನ್ನು ನೇಮಿಸಲಾಗಿದ್ದು, ವಿಶೇಷ ದಿನಗಳಲ್ಲಿ ಪೂಜೆ ವಿಧಿ ವಿಧಾನಗಳನ್ನು ಇಲ್ಲಿನ ಯುವಕರ ಸಂಘ ನಡೆಸಿಕೊಂಡು ಬರು ತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಬೆಳಕು– ಸಂಗೀತದೊಂದಿಗೆ ಕಾರಂಜಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಶನಿವಾರ ಹಾಗೂ ಭಾನುವಾರ ರಾತ್ರಿ 7 ರಿಂದ 8 ಗಂಟೆ ಸಮಯದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಇದರಿಂದ ಜನರು ಮತ್ತಷ್ಟು ಆಕರ್ಷಿತರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ರಮೇಶ್.

ನಗರದ ಅರ್.ಸಿ. ರಸ್ತೆ ಪಕ್ಕದಲ್ಲಿ ಹೊಸದಾಗಿ ಉದ್ಯಾನ ನಿರ್ಮಾಣ ಮಾಡಲಾಗಿದ್ದು, ಅಚ್ಚುಕಟ್ಟಾಗಿದೆ‌. ಸಂಜೆ 5 ಗಂಟೆಯ ನಂತರ ಮಾತ್ರ ಇಲ್ಲಿ ಪ್ರವೇಶ ಇರುವುದರಿಂದ ಹೆಚ್ಚು ಜನರು ಬರುತ್ತಾರೆ. ವಾಯುವಿಹಾರಕ್ಕೆ ಸೂಕ್ತ ಸ್ಥಳವಾಗಿದೆ. ಇಲ್ಲಿ ಯೋಗಾಭ್ಯಾಸ ಸೇರಿದಂತೆ ಅನೇಕ ಚಟುವಟಿಕೆಗಳು ನಡೆಯುತ್ತವೆ.

ವಿಶ್ವ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿರುವ ಶ್ರವಣಬೆಳಗೊಳದ ಬಾಹುಬಲಿ ಕ್ಷೇತ್ರದಲ್ಲಿ ಇರುವ ಉದ್ಯಾನ ಉಪಯೋಗಕ್ಕೆ ಬಾರದಂತಾಗಿದೆ. ವಾಯು ವಿಹಾರದ ಪಾದಚಾರಿ ಮಾರ್ಗ ನಿರ್ವಹಣೆ ಇಲ್ಲದೇ ಸಂಪೂರ್ಣವಾಗಿ ಗಿಡ ಗಂಟೆ ಮರಗಳಿಂದ ಕೂಡಿದ್ದು, ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

2018ರ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತವು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಅತಿ ಗಣ್ಯರ ಅತಿಥಿ ನಿವಾಸಕ್ಕೆ ಹೊಂದಿಕೊಂಡಿರುವ 15 ಎಕರೆ ವಿಸ್ತೀರ್ಣದ ರಾಚೇನಹಳ್ಳಿ ಕೆರೆಯ ಎರಡೂ ಭಾಗಗಳಲ್ಲಿ ವಾಯು ವಿಹಾರದ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು. ಈ ವಾಯು ವಿಹಾರದ ಪಾದಚಾರಿ ಮಾರ್ಗಕ್ಕೆ ಸುಂದರವಾದ ಬಿಲ್ಲೆಗಳನ್ನು ಜೋಡಿಸಲಾಗಿದ್ದು, ಒಂದು ಬದಿಯಲ್ಲಿ ಕಬ್ಬಿಣದ ಪೈಪ್‌ನಿಂದ ಜಾಲರಿ ಅಳವಡಿಸಲಾಗಿತ್ತು. ಈ ಕೆರೆಗೆ ಪಟ್ಟಣದ ತ್ಯಾಜ್ಯ ನೀರೂ ಬರುತ್ತಿದ್ದು, ದುರ್ವಾಸನೆ ಹೆಚ್ಚಾಗುತ್ತಿದೆ  ಎನ್ನುತ್ತಾರೆ ಇಲ್ಲಿನ ಎಚ್. ಶಿವಣ್ಣ, ಎಚ್. ನಾಗರಾಜ.

2018 ರ ಮಹಾಮಸ್ತಕಾಭಿಷೇಕ ದಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ರೋಹಿಣಿ ಸಿಂಧೂರಿ ದಾಸರಿ ಅವರು, ಈ ಉದ್ಯಾನ ನಿರ್ಮಾಣ ಹಾಗೂ ಕೆರೆ ಹೂಳೆತ್ತುವುದಕ್ಕೆ ₹ 60 ಲಕ್ಷ ಒದಗಿಸಿದ್ದರು.

1996ರಲ್ಲಿ ಎಚ್‌.ಡಿ.ರೇವಣ್ಣ ಮೊದಲ ಬಾರಿ ಸಚಿವರಾದಾಗ ಹೊಳೆನರಸೀಪುರದಲ್ಲಿ ನಿರ್ಮಾಣ ಆರಂಭವಾದ ಉದ್ಯಾನ 1998 ರಲ್ಲಿ ಉದ್ಘಾಟನೆ ಆಯಿತು. 2004 ರಲ್ಲಿ ಮುಖ್ಯಾಧಿಕಾರಿ ಆಗಿದ್ದ ಶಾಂತಾ ಶೆಟ್ಟಿ ಅವರು, ರೇವಣ್ಣ ಅವರಿಂದ ಹೆಚ್ಚಿನ ಅನುದಾನ ಪಡೆದು ಉದ್ಯಾನಕ್ಕೆ ಕಾರಂಜಿ, ಬಣ್ಣದ ದೀಪಗಳು, ಮಕ್ಕಳ ಆಟಿಕೆ ಅಳವಡಿಸಿ ಆಕರ್ಷಣೆ ತಂದು ಕೊಟ್ಟಿದ್ದರು. ನಿತ್ಯ ನೂರಾರು ಜನರು, ಮಕ್ಕಳು, ಮಹಿಳೆಯರು ಉದ್ಯಾನಕ್ಕೆ ಬರುವಂತಾಯಿತು.

ಶಾಂತಾಶೆಟ್ಟಿ ಸೇವೆಯಿಂದ ನಿವೃತ್ತರೂ ಆದರು. ಕೆಲವು ವರ್ಷಗಳ ನಂತರ ಅಳವಡಿಸಿದ್ದ ದೀಪಗಳು, ಕಾರಂಜಿಗಳು ಕೆಟ್ಟು ಹೋದವು. ಮತ್ತೆ ಅವುಗಳು ದುರಸ್ತಿ ಆಗಲಿಲ್ಲ. ಸಂಜೆಯಾದರೆ ಯಾರೂ ಉದ್ಯಾನಕ್ಕೆ ಹೋಗಲು ಸಾಧ್ಯ ಇಲ್ಲದಂತಾಯಿತು.

ಈ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿದ ನಂತರ ಈಗಿನ ಮುಖ್ಯಾಧಿಕಾರಿ ಮಹೇಂದ್ರ ಉದ್ಯಾನಕ್ಕೆ ಒಂದು ಹೈಮಾಸ್ಕ್‌ ದೀಪ ಹಾಕಿಸಿದರು. ಬಣ್ಣದ ವಿದ್ಯುತ್‌ ದೀಪಗಳಾಗಲಿ, ನೀರಿನ ಕಾರಂಜಿಗಳಾಗಲಿ ಇದುವರೆಗೂ ಸರಿ ಆಗಲಿಲ್ಲ. ಕೆಟ್ಟು ಹೋಗಿರುವ ದೀಪಗಳನ್ನು ಹಾಕಿಸಿ, ನೀರಿನ ಕಾರಂಜಿಗಳನ್ನು ಸರಿಪಡಿಸಿ ಉದ್ಯಾನಕ್ಕೆ ಮತ್ತೆ ಕಾಯಕಲ್ಪ ಕಲ್ಪಿಸಬೇಕಿದೆ ಎನ್ನುತ್ತಾರೆ ಜನರು.

ನಿತ್ಯ ಬೆಳಿಗ್ಗೆ ಮತ್ತು ಸಂಜೆ ಇಲ್ಲಿಗೆ ನೂರಾರು ಜನರು ವಾಯುವಿಹಾರಕ್ಕೆ ಬರುತ್ತಾರೆ. ನಿವೃತ್ತ ಹಿರಿಯ ನಾಗರಿಕರು ಸಂಜೆಯಿಂದ ರಾತ್ರಿಯವರೆಗೆ ಉದ್ಯಾನದಲ್ಲಿ ಕುಳಿತು ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾರೆ.

ಪಟ್ಟಣದಲ್ಲಿ ನಿಲ್ದಾಣ ಇಲ್ಲದೇ ಬೈಕ್‌ಗಳು, ಕಾರುಗಳು ಎಲ್ಲೆಂದರಲ್ಲಿ ನಿಲ್ಲುತ್ತಿದ್ದು, ಪುರಸಭೆ ಮುಂಭಾಗದಲ್ಲಿ ಕಾರುಗಳು, ಬೈಕ್‌ಗಳು ನಿಲ್ಲುತ್ತಿವೆ. ಸಂಜೆ ವೇಳೆ ಇಲ್ಲಿನ ಫುಟ್‌ಪಾತ್‌ನಲ್ಲಿ ಕ್ಯಾಂಟೀನ್‌ ತೆರೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ದಯವಿಟ್ಟು ತಪ್ಪಿಸಿ ಎಂದು ಸಾರ್ವಜನಿಕರು ಪೊಲೀಸರಲ್ಲಿ ವಿನಂತಿಸಿದ್ದಾರೆ.

ನಿರ್ವಹಣೆ ಅಗತ್ಯ

ಹಲವು ವರ್ಷಗಳಿಂದ ಇಲ್ಲಿ ವಾಯುವಿಹಾರ ಮಾಡುತ್ತಿದ್ದು ಸ್ವಲ್ಪಮಟ್ಟಿಗೆ ನಿರ್ವಹಣೆ ಕೊರತೆ ಇದೆ. ಮತ್ತಷ್ಟು ಗಿಡ- ಮರಗಳನ್ನು ಬೆಳೆದು ನಿರ್ವಹಣೆ ಮಾಡಿದರೆ ಹೆಚ್ಚು ಅನುಕೂಲ. ಕಾಲೇಜು ವಿದ್ಯಾರ್ಥಿಗಳ ಬೇಕಾಬಿಟ್ಟಿ ವರ್ತನೆ ತಡೆಯಬೇಕಿದ್ದು, ಪೊಲೀಸ್ ಬೀಟ್ ಹೆಚ್ಚಿಸಿದರೆ ಒಳಿತು.

ಈಶ್ವರ್, ಖಾಸಗಿ ಉದ್ಯೋಗಿ, ಹಾಸನ

‘ಯುವಕರ ಬೇಕಾಬಿಟ್ಟಿ ವರ್ತನೆ’

ಪಾರ್ಕ್ ನಿರ್ವಹಣೆ ಸಮರ್ಪಕವಾಗಿದೆ. ನಗರಸಭೆಯಿಂದ ಪ್ರತಿ ದಿನ ಸ್ವಚ್ಛತೆ ಮಾಡಲಾಗುತ್ತಿದೆ. ಗೃಹರಕ್ಷಕರನ್ನು ನಿಯೋಜಿಸಲಾಗಿದ್ದರೂ, ಯುವ ವಿದ್ಯಾರ್ಥಿಗಳ ಬೇಕಾಬಿಟ್ಟಿ ವರ್ತನೆ  ಇರಿಸುಮುರುಸು ಉಂಟು ಮಾಡುತ್ತಿದೆ - ಅಪ್ಪಣ್ಣ ಗೌಡ, ನಿವೃತ್ತ ಪಿಡಿಒ

ಅನುದಾನ ಬಂದ ನಂತರ ಅಭಿವೃದ್ಧಿ

ಉದ್ಯಾನನದ ಅಭಿವೃದ್ದಿಗೆ ₹ 50 ಲಕ್ಷ ವೆಚ್ಚದ ಕ್ರಿಯಾ ಯೋಜನೆ ಸಿದ್ದ ಪಡಿಸಿದ್ದೇವೆ. ಅನುದಾನ ಬಂದ ತಕ್ಷಣ ಅತ್ಯುತ್ತಮವಾಗಿ ಅಭಿವೃದ್ಧಿ ಪಡಿಸುತ್ತೇವೆ - ಮಹೇಂದ್ರ, ಹೊಳೆನರಸೀಪುರ ಪುರಸಭೆ ಮುಖ್ಯಾಧಿಕಾರಿ

ಉತ್ತಮ ವಾತಾವರಣವಿದೆ

ನಾನು ಕೆಲವು ವರ್ಷಗಳಿಂದ ಇಲ್ಲಿಗೆ ವಾಕಿಂಗ್‌ ಬರುತ್ತೇನೆ. ವಾತಾವರಣ ಚೆನ್ನಾಗಿದೆ. ವಾಕಿಂಗ್‌ ಪ್ರಾರಂಭಿಸಿದ ನಂತರ ಆರೋಗ್ಯ ಉತ್ತಮವಾಗಿದೆ. ತೂಕ ಕಡಿಮೆ ಆಗಿದೆ - ಲಕ್ಷೀನಾಗೇಂದ್ರ. ಗೃಹಿಣಿ, ಹೊಳೆನರಸೀಪುರ

ಸೌಂದರ್ಯ ವೃದ್ಧಿ

ಹೊಳೆನರಸೀಪುರ ಹೃದಯಭಾಗದಲ್ಲಿರುವ ಮಹಾತ್ಮಗಾಂಧಿ ಉದ್ಯಾನವು ನಮ್ಮ ಊರಿನ ಸೌಂದರ್ಯವನ್ನು ಹೆಚ್ಚಿಸಿದೆ - ರಶ್ಮೀ ಸಂತೋಷ್‌, ಬ್ಯಾಂಕ್‌ ಉದ್ಯೋಗಿ, ಹೊಳೆನರಸೀಪುರ

ದೂರು ಸಲ್ಲಿಸಿದರೂ ಕ್ರಮವಿಲ್ಲ

ಈ ಸುಂದರ ಉದ್ಯಾನ ಹಾಗೂ ವಾಯು ವಿಹಾರ ತಾಣದ ನಿರ್ವಹಣೆ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ - ಭಾರತಿ ಚಂದ್ರೇಗೌಡ, ಶ್ರವಣಬೆಳಗೊಳ ಗ್ರಾ.ಪಂ. ಅಧ್ಯಕ್ಷೆ

ಉಪಯೋಗಕ್ಕೆ ಬಾರದಂತಾಗಿದೆ

ಉದ್ಯಾನ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ. ನೆಲದ ಬಿಲ್ಲೆಗಳೂ ಕಾಣದೇ, ಜಾಲರಿಯೂ ಹಸಿರು ಬಳ್ಳಿಗಳಿಂದ ಆವೃತ್ತವಾಗಿವೆ. ಹಸಿರು ಹಾವುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ - ಎಸ್.ಆರ್. ರಮೇಶ್, ಶ್ರವಣಬೆಳಗೊಳದ ವಾಯುವಿಹಾರಿ

ನಿರ್ವಹಣೆ: ಚಿದಂಬರಪ್ರಸಾದ

ಪೂರಕ ಮಾಹಿತಿ: ಸಂತೋಷ್‌ ಸಿ.ಬಿ., ಬಿ.ಪಿ.ಜಯಕುಮಾರ್‌, ಎಚ್‌.ವಿ. ಸುರೇಶ್‌ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.