ಸಕಲೇಶಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು ₹ 10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ತಾಲ್ಲೂಕಿನ ಮಳಲಿ ಗ್ರಾಮದ ಹೊಸಕೆರೆ ಈಗ ನಳನಳಿಸುತ್ತಿದೆ. ಹೂಳು ತೆಗೆದ ಕೆರೆಯಲ್ಲಿ ನೀರು ತುಂಬಿದ್ದು, ಗ್ರಾಮಸ್ಥರಲ್ಲಿ ಹೊಸ ಭರವಸೆ ಮೂಡಿಸಿದೆ.
ಊರಿನ ಮಧ್ಯದಲ್ಲಿ ಹಲವು ದಶಕಗಳಿಂದ ಹೂಳು ತುಂಬಿಕೊಂಡು ಹಾಳು ಬಿದ್ದಿದ್ದ ಕೆರೆಯನ್ನು ಇದೀಗ ಪುನಶ್ಚೇತನಗೊಳಿಸಲಾಗಿದೆ. ಕೆರೆಯಲ್ಲಿ ನೀರು ತುಂಬಿರುವುದರಿಂದ ಸುತ್ತಲಿನ ಅಂತರ್ಜಲ ಹೆಚ್ಚಳವಾಗಲಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
‘ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ನೀರಾವರಿ ಇಲಾಖೆ, ಶಾಸಕರ ಯಾವುದಾದರೂ ಒಂದು ಅನುದಾನದಲ್ಲಿ ಈ ಕೆರೆಯ ಹೂಳು ತೆಗೆದು ಅಭಿವೃದ್ಧಿಗೊಳಿಸುವಂತೆ ಹಲವು ದಶಕಗಳಿಂದಲೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಸಹ ಯಾರೂ ಗಮನ ಹರಿಸಿರಲಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.
‘ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಮಾರು ಕೆರೆಯ ಸಂಪೂರ್ಣ ಹೂಳು ತೆಗೆಯಲಾಗಿದೆ. ಹೂಳು ತೆಗೆದ ಬೆನ್ನಲ್ಲೇ ಕೆರೆಯಲ್ಲಿ ನೀರು ತುಂಬಿಕೊಂಡು ಊರಿಗೆ ಹೊಸ ಕಳೆ ಬಂದಂತಾಗಿದೆ’ ಎಂದು ಖುಷಿ ಹಂಚಿಕೊಂಡರು.
‘ಸುಮಾರು 75 ವರ್ಷಗಳಿಂದ ಹೂಳು ತೆಗೆಯದೇ ಮುಚ್ಚಿಕೊಂಡು ನೀರು ಶೇಖರಣೆ ಆಗುತ್ತಿರಲಿಲ್ಲ. ಇದರಿಂದಾಗಿ ಸುತ್ತಮುತ್ತಲಿನ ತೆರೆದ ಹಾಗೂ ಕೊಳವೆಬಾವಿಗಳಲ್ಲಿ ಅಂರ್ತಜಲ ಕಡಿಮೆ ಆಗಿತ್ತು’ ಎಂದು ಮಳಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ. ಯೋಗೇಶ್ ಹೇಳಿದರು.
ಹೊಸಕೆರೆಗೆ ಯೋಜನೆಯ ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ್ ನೆಲ್ಲಿತಾಯ ಬಾಗಿನ ಅರ್ಪಿಸಿದರು, ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಭಾ ಮಂಜುನಾಥ್ ನಾಮಫಲಕ ಅನಾವರಣಗೊಳಿಸಿದರು. ಮಳಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿ, ಉಪಾಧ್ಯಕ್ಷ ಎಂ.ಪಿ. ಯೋಗೇಶ್, ಎಸ್‌ಕೆಡಿಆರ್‌ಡಿಪಿ ನಿರ್ದೇಶಕಿ ಮಮತಾ ಹರೀಶ್‌ರಾವ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ನವೀನ್‌ಚಂದ್ರಶೆಟ್ಟಿ ಇದ್ದರು.
ಕೆರೆಗಳ ಹೂಳು ತೆಗೆದು ಅಂತರ್ಜಲ ಮಟ್ಟ ಹೆಚ್ಚು ಮಾಡುವುದು ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದುಪುರುಷೋತ್ತಮ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ
ತಾಲ್ಲೂಕಿನ ಹಾಲೇಬೇಲೂರು ಗ್ರಾಮದ ಸರ್ಕಾರಿ ಕೆರೆಯ ಹೂಳು ತೆಗೆಯುವ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭ ಮಾಡಲಾಗುವುದು.ಎಸ್. ಪರಮೇಶ್, ಎಕೆಡಿಆರ್‌ಡಿಪಿ, ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.