ADVERTISEMENT

ಆಲೂರು | 2 ವರ್ಷಗಳ ಹಿಂದೆ ಒಡೆದಿದ್ದ ಹುಣಸೆ ದೊಡ್ಡಕೆರೆಗೆ ದುರಸ್ತಿ ಭಾಗ್ಯ

ನೀರಿಲ್ಲದೆ ಕೃಷಿ ಚಟುವಟಿಕೆ ಸ್ಥಗಿತ– ರೈತರಿಗೆ ನಷ್ಟ

ಎಂ.ಪಿ.ಹರೀಶ್
Published 5 ಜುಲೈ 2024, 6:52 IST
Last Updated 5 ಜುಲೈ 2024, 6:52 IST
ಎರಡು ವರ್ಷಗಳ ಹಿಂದೆ ಭಾರಿ ಮಳೆಯಿಂದ ಹುಣಸೆ ಕೆರೆ ಏರಿ ಒಡೆದಿತ್ತು.
ಎರಡು ವರ್ಷಗಳ ಹಿಂದೆ ಭಾರಿ ಮಳೆಯಿಂದ ಹುಣಸೆ ಕೆರೆ ಏರಿ ಒಡೆದಿತ್ತು.   

ಆಲೂರು: ಎರಡು ವರ್ಷಗಳ ಹಿಂದೆ ಬಿದ್ದ ಭಾರಿ ಮಳೆಯಿಂದ ಏರಿ ಒಡೆದಿದ್ದ ಪಾಳ್ಯ ಹೋಬಳಿ ಹುಣಸೆ ಗ್ರಾಮದ ದೊಡ್ಡಕೆರೆಯ ದುರಸ್ತಿ ಕಾಮಗಾರಿಗೆ ಈಗ ಕಾಲ ಕೂಡಿ ಬಂದಿದೆ. ತಾಳೂರು ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ.

2022 ರ ಜುಲೈ 13ರಂದು ಬಿದ್ದ ಭಾರಿ ಮಳೆಯಿಂದ ನೀರಿನ ಒತ್ತಡ ತಾಳಲಾರದೇ, ಮಧ್ಯರಾತ್ರಿ ಏರಿ ಮಧ್ಯಭಾಗಕ್ಕೆ ಒಡೆದು ಹೋಗಿತ್ತು. ಕೆರೆಯಲ್ಲಿದ್ದ ಸಂಪೂರ್ಣ ನೀರು ಗದ್ದೆಗಳ ಮೇಲೆ ಹರಿದು, ಬದುಗಳು ಒಡೆದು ಕೆರೆ ಆಶ್ರಯ ಪಡೆದಿದ್ದ ಸುಮಾರು 200 ಎಕರೆ ಗದ್ದೆ ಪ್ರದೇಶ ಹಾನಿಗೆ ಒಳಗಾಗಿತ್ತು.

ಈ ಸಂದರ್ಭದಲ್ಲಿ ಕೆಲ ರೈತರು ಭತ್ತ ನಾಟಿ ಮಾಡಲು ಸಸಿ ಮಡಿ ಮಾಡಿದ್ದರು. ಕೆಲ ರೈತರು ಭೂಮಿ ಉಳುಮೆ ಮಾಡಿ ನಾಟಿ ಮಾಡಲು ಸಿದ್ಧತೆ ನಡೆಸಿದ್ದರು. ಬೆಳಗಾಗುವ ವೇಳೆಗೆ ಕೆರೆ ಒಡೆದು ಸುಮಾರು 200 ಕ್ಕೂ ಹೆಚ್ಚು ಕುಟುಂಬಗಳು ನಷ್ಟಕ್ಕೆ ಸಿಲುಕಿದವು. ಭತ್ತವಲ್ಲದೇ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಬೆಳೆಗೂ ಹಾನಿಯಾಗಿತ್ತು.

ADVERTISEMENT

ಈ ಕೆರೆ ನೀರನ್ನು ಬಳಸಿಕೊಂಡು ಸುಮಾರು 150-200 ಎಕರೆ ಪ್ರದೇಶದಲ್ಲಿ ಭತ್ತ ಮತ್ತು ಅಡಿಕೆ ಕೃಷಿ ಮಾಡಲಾಗುತ್ತಿದೆ. ಎರಡು ವರ್ಷ ಏರಿ ದುರಸ್ತಿ ಮಾಡದೇ ಇದ್ದುದರಿಂದ ಮಳೆ ನೀರು ಹರಿದು ಪೋಲಾಗುತ್ತಿದ್ದು, ಬೆಳೆಗೆ ಉಪಯೋಗವಾಗದೇ ನಷ್ಟವಾಗುತ್ತಿತ್ತು. ಕೆರೆ ಅಚ್ಚುಕಟ್ಟಿನಲ್ಲಿದ್ದ ಬೆಳೆಗಾರರು ವಾರ್ಷಿಕ ಸುಮಾರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದರು. ಎರಡು ವರ್ಷಗಳಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ, ಸರ್ಕಾರ ಈವರೆಗೂ ಕನಿಷ್ಠ ಪರಿಹಾರ ನೀಡಿಲ್ಲ ಎಂದು ರೈತರು ದೂರಿದ್ದಾರೆ.

ಕೆರೆ ಒಡೆದು ಹಾನಿಯಾದ ಪ್ರದೇಶಕ್ಕೆ ಅಂದು ಶಾಸಕರಾದ ಎಚ್. ಕೆ. ಕುಮಾರಸ್ವಾಮಿ, ತಹಶೀಲ್ದಾರ್, ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಏರಿ ದುರಸ್ತಿಗೆ ₹ 30 ಲಕ್ಷ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಊರಿಗೊಂದು ದೊಡ್ಡ ಕೆರೆ ಇದ್ದು, ಸ್ಥಳೀಯ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಮತ್ತು ಕೊಳವೆಬಾವಿ ನೀರಿನ ಕೇಂದ್ರವಾಗಿತ್ತು. ಎರಡು ವರ್ಷದಿಂದ ಕೆರೆಯಲ್ಲಿ ನೀರಿಲ್ಲದೆ ಕುಡಿಯುವ ನೀರಿಗೆ ತೊಂದರೆ ಒಂದೆಡೆಯಾದರೆ, ಎರಡು ವರ್ಷಗಳಿಂದ ಗದ್ದೆ ಕೃಷಿ ಮಾಡದೆ ಬಹುತೇಕ ಎಲ್ಲ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಎರಡು ಬಾರಿ ವರದಿ ಪ್ರಕಟವಾಗಿತ್ತು.

ಇದೀಗ ನರೇಗಾ ಯೋಜನೆಯಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ರಿವೆಟ್‍ಮೆಂಟ್, ಸಿಮೆಂಟ್ ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.

ಹುಣಸೆ ದೊಡ್ಡಕೆರೆ ದುರಸ್ತಿ ಕಾಮಗಾರಿ ನಡೆಯುತ್ತಿದೆ.

2 ತಿಂಗಳಲ್ಲಿ ಕಾಮಗಾರಿ ಪೂರ್ಣ

ಕೆರೆ ಏರಿ ಒಡೆದ ಮೂರು ದಿನಗಳಲ್ಲಿ ದುರಸ್ತಿಗಾಗಿ ₹ 30 ಲಕ್ಷ. ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ನರೇಗಾ ಯೋಜನೆಯಲ್ಲಿ ಕೆರೆ ಅಭಿವೃದ್ಧಿಗೆ ಅವಕಾಶವಿತ್ತು. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯರ ಕೋರಿಕೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಶಾಸಕ ಸಿಮೆಂಟ್ ಮಂಜು ಅವರ ಗಮನಕ್ಕೆ ತರಲಾಗಿದೆ. ಮಳೆ ಬಿಡುವು ನೋಡಿಕೊಂಡು ಒಂದೆರಡು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಾಳೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

2 ವರ್ಷಗಳಿಂದ ನಷ್ಟ ಅನುಭವಿಸಿದ್ದೇವೆ. ಸರ್ಕಾರ ಕನಿಷ್ಠ ಪರಿಹಾರ ನೀಡಿಲ್ಲ. ಈಗ ದುರಸ್ತಿ ಮಾಡುತ್ತಿದ್ದು ಮುಂದಿನ ವರ್ಷದಿಂದ ಅಚ್ಚುಕಟ್ಟಿನಲ್ಲಿ ಕೃಷಿ ಚಟುವಟಿಕೆ ಪ್ರಾರಂಭ ಆಗಲಿದೆ.
- ರವಿ ಹುಣಸೆ, ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.