ADVERTISEMENT

ಹಿರೀಸಾವೆ | ಅಪಘಾತದ ತಾಣವಾದ ಕೆರೆ ಏರಿ

ರಸ್ತೆಯ ತಿರುವುಗಳಲ್ಲಿ ಗಿಡಗಂಟೆ: ಆತಂಕದಲ್ಲೇ ವಾಹನ ಚಾಲನೆ

ಹಿ.ಕೃ.ಚಂದ್ರು
Published 26 ಅಕ್ಟೋಬರ್ 2024, 6:57 IST
Last Updated 26 ಅಕ್ಟೋಬರ್ 2024, 6:57 IST
ಹಿರೀಸಾವೆ ಕೆರೆ ಏರಿಯ ರಸ್ತೆಯ ತಿರುವಿನಲ್ಲಿ ಎತ್ತರಕ್ಕೆ ಗಿಡಗಂಟೆಗಳು ಬೆಳೆದು, ಎದುರಿಗೆ ಬರುವ ವಾಹನಗಳು ಕಾಣದಾಗಿದೆ.
ಹಿರೀಸಾವೆ ಕೆರೆ ಏರಿಯ ರಸ್ತೆಯ ತಿರುವಿನಲ್ಲಿ ಎತ್ತರಕ್ಕೆ ಗಿಡಗಂಟೆಗಳು ಬೆಳೆದು, ಎದುರಿಗೆ ಬರುವ ವಾಹನಗಳು ಕಾಣದಾಗಿದೆ.   

ಹಿರೀಸಾವೆ: ಇಲ್ಲಿನ ದೊಡ್ಡ ಕೆರೆ ಏರಿಯ ಮೇಲಿನ ರಸ್ತೆಯ ಎರಡು ಕಡೆ ಗಿಡಗಂಟೆಗಳು ಎತ್ತರಕ್ಕೆ ಬೆಳೆದು, ತಿರುವುಗಳಲ್ಲಿ ಎದುರಿನ ರಸ್ತೆ ಕಾಣದೇ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.

ಇದು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಾಗಿದ್ದು, ಹೋಬಳಿ ಕೇಂದ್ರದಿಂದ ಕೊಳ್ಳೇನಹಳ್ಳಿ, ಕೊತ್ತನಹಳ್ಳಿ, ತೂಬಿನಕೆರೆ ಮತ್ತು ಮಂಡ್ಯ ಜಿಲ್ಲೆಯ ಬಿಂಡಿಗನವಿಲೆ ಹೋಬಳಿಯ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದೆ. ನಿತ್ಯ ಕಾರುಗಳು, ಶಾಲಾ ಬಸ್‌ಗಳು, ಆಟೋ, ಟ್ರ್ಯಾಕ್ಟರ್, ಬೈಕ್ ಸೇರಿದಂತೆ ಹಲವಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.

ಒಂದು ತಿಂಗಳಿನಿಂದ ಈ ಭಾಗದಲ್ಲಿ ಮಳೆಯಾಗಿದ್ದು, ಈ ಮಾರ್ಗದ ಎರಡು ಕಡೆ ಗಿಡಗಂಟೆಗಳು ಬೆಳೆದು ರಸ್ತೆಗೆ ಚಾಚಿಕೊಂಡಿವೆ. ರಸ್ತೆಯ ಎಲ್ಲ ತಿರುವಿನಲ್ಲಿ ಹೆಚ್ಚು ಗಿಡಗಳು ಬೆಳೆದಿದ್ದು, ಐದು ಅಡಿ ದೂರದಿಂದ ಬರುವ ವಾಹನಗಳು ಕಾಣುವುದಿಲ್ಲ. ರಸ್ತೆ ಕಿರಿದಾಗಿದ್ದು, ಎರಡು ವಾಹನ ಒಟ್ಟಿಗೆ ಬಂದರೆ, ರಸ್ತೆ ಪಕ್ಕ ಇಳಿಸಲು ಸ್ಥಳವಿಲ್ಲ. ಸಂಬಂಧಿಸಿದವರು ಗಿಡಗಳನ್ನು ತೆರವುಗೊಳಿಸಬೇಕು ಎನ್ನುತ್ತಾರೆ ಈ ಮಾರ್ಗದಲ್ಲಿ ಓಡಾಡುವ ವಾಹನ ಚಾಲಕರು ಮತ್ತು ಸಾರ್ವಜನಿಕರು.

ADVERTISEMENT

‘ಈಗಾಗಲೇ ಈ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸಿದ್ದು, ಈಗಲಾದರೂ ಸಂಬಂಧಿಸಿದವರು ಕ್ರಮ ಕೈಗೊಳ್ಳದಿದ್ದರೆ, ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಲಿದೆ’ ಎನ್ನುತ್ತಾರೆ ಜನ.

‘ಉತ್ತಮ ಮಳೆ ಆಗಿರುವುದರಿಂದ ಏರಿ ಮೇಲೆ ಯಂತ್ರಗಳ ಮೂಲಕ ಗಿಡಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ. ವಾರದಲ್ಲಿ ಕೆರೆ ಏರಿ ರಸ್ತೆ ಪಕ್ಕದ ಗಿಡಗಳನ್ನು ಕೈ ಕೆಲಸಗಾರರ ಮೂಲಕ ಸ್ವಚ್ಛ ಮಾಡಿಸುವುದಾಗಿ’ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಂಜಣ್ಣಗೌಡ ತಿಳಿಸಿದರು.

ಹಿರೀಸಾವೆ ಕೆರೆ ಏರಿಯ ರಸ್ತೆಯ ಕೆಲವು ಕಡೆ ಮಣ್ಣು ಕುಸಿದಿದೆ.

ಗಿಡಗಳು ಹೆಚ್ಚು ಬೆಳೆದಿರುವುದರಿಂದ ರಾತ್ರಿ ಸಮಯಕ್ಕಿಂತ ಹಗಲಿನ ವೇಳೆಯಲ್ಲಿ ಎಚ್ಚರಿಕೆಯಿಂದ ವಾಹನ ಓಡಿಸಬೇಕಾಗಿದೆ.

- ಬಾಬು ಕೊಳ್ಳೇನಹಳ್ಳಿ ಗ್ರಾಮಸ್ಥ

ಏರಿ ಮೇಲಿನ ರಸ್ತೆ ಕಿರಿದಾಗಿದ್ದು ಅಲ್ಲಿಲ್ಲಿ ಮಣ್ಣು ಕುಸಿದಿದೆ. ಎದುರಿಗೆ ಬರುವ ವಾಹನ ಕಾಣುವುದಿಲ್ಲ. ಗಿಡ ಗಂಟೆಗಳನ್ನು ತೆರವುಗೊಳಿಸಬೇಕು.

-ಮಂಜುನಾಥ್ ಕೊತ್ತನಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.