ADVERTISEMENT

ಪುಷ್ಪಗಿರಿ ಮಠದಲ್ಲಿ ಲಕ್ಷ ದೀಪೋತ್ಸವ, ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:29 IST
Last Updated 11 ಡಿಸೆಂಬರ್ 2023, 14:29 IST
ಹಳೇಬೀಡು ಸಮೀಪದ ಪುಷ್ಪಗಿರಿ ಮಠದ ಗುರು ಕರಿಬಸವೇಶ್ವರ ಅಜ್ಜಯ್ಯ
ಹಳೇಬೀಡು ಸಮೀಪದ ಪುಷ್ಪಗಿರಿ ಮಠದ ಗುರು ಕರಿಬಸವೇಶ್ವರ ಅಜ್ಜಯ್ಯ   

ಹಳೇಬೀಡು: ಪುಷ್ಪಗಿರಿ ಮಠದ 108 ಶಿವಲಿಂಗ ಮಂದಿರ ಹಾಗೂ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ಮಂದಿರದಲ್ಲಿ ಡಿಸೆಂಬರ್‌ 12 ರಂದು ರಾತ್ರಿ ಲಕ್ಷ ದೀಪೋತ್ಸವ ನಡೆಯಲಿದೆ. ವಿವಿಧ ಊರಿನಿಂದ ಆಗಮಿಸಿದ ಭಕ್ತರು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ದೀಪ ಹೊತ್ತಿಸಿ ಭಕ್ತಿ ಸಮರ್ಪಿಸುತ್ತಾರೆ.

ಕಾರ್ತೀಕೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ಆಗಮಿಸುವ ಸ್ವಾಮೀಜಿ 108 ಶಿವಲಿಂಗ ಹಾಗೂ ಗುರು ಕರಿಬಸವೇಶ್ವರ ಅಜ್ಜಯ್ಯನವರಿಗೆ ಪೂಜೆ ಸಲ್ಲಿಸುತ್ತಾರೆ.

ಚಿಲ್ಕೂರು-ಪುಷ್ಪಗಿರಿ ಮಹಾಸಂಸ್ಥಾನವನ್ನು ಅಭಿವೃದ್ದಿಯತ್ತ ಕೊಂಡೊಯ್ಡ ಹಿಂದಿನ ಪೀಠಾಧ್ಯಕ್ಷ ಬಸವರಾಜೇಂದ್ರ ದೇಶಿಕೇಂದ್ರ ಸ್ವಾಮಿಜಿ ಅವರ ಅಮೃತ ಶಿಲೆಯ ಮೂರ್ತಿ ಹಾಗೂ ವಿವಿಧ ಲೋಹದಿಂದ ನಿರ್ಮಿಸಿದ ಆದಿಯೋಗಿ ಶಿವನ ಮೂರ್ತಿಯನ್ನು ಸಹ ಪ್ರತಿಷ್ಟಾಪಿಸಲಾಗುತ್ತಿದೆ.
ನಂತರ ಬೃಹತ್ ಕಲಾ ಮಂದಿರದಲ್ಲಿ ರಾತ್ರಿ ಇಡೀ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಭರತ ನಾಟ್ಯ ಸುಗಮ ಸಂಗೀತ ಹಾಗೂ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದ ಹಾಡು ನೃತ್ಯಗಳ ಪ್ರದರ್ಶನ ನಡೆಯುತ್ತದೆ.

ADVERTISEMENT

13 ರಂದು ಮುಂಜಾನೆಯಿಂದಲೇ ನಾಟಕೋತ್ಸವ ನಡೆಯುತ್ತದೆ. ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ಪ್ರದರ್ಶನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯುತ್ತದೆ. ಹಾಸನದ ಹಿರಿಯ ನಾಗರಿಕರ ಕಲಾ ಸಂಘದಿಂದ ನಡೆಯುವ ‘ಬಾಡಿದ ಬದುಕು’ ನಾಟಕವನ್ನು ಗ್ಯಾರಂಟಿ ರಾಮಣ್ಣ ನಿರ್ದೇಶಿಸುತ್ತಾರೆ. ಗೋವಿಂದೇಗೌಡರ ಅಧ್ಯಕ್ಷತೆಯಲ್ಲಿ ನಾಟಕ ಪ್ರದರ್ಶನ ನಡೆಯುತ್ತದೆ. ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣ ಸಮಿತಿಯವರು ವೀರಭದ್ರಚಾರ್ ನಿರ್ದೇಶನದಲ್ಲಿ ‘ಕೃಷ್ಣ ಸಂಧಾನ’ ನಾಟಕವನ್ನು ಬಿದರೆ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಿರ್ವಹಿಸುತ್ತಾರೆ.

ಹಾಸನದ ಅನ್ನಪೂರ್ಣೇಶ್ವರಿ ಕಲಾ ಸಂಘ ಪ್ರದರ್ಶಿಸುವ ನಾಟಕವನ್ನು ಪುಟ್ಟರಾಜು ನಿರ್ದೇಶಿಸುತ್ತಾರೆ. ನಾಗಮೋಹನ್ ಅಧ್ಯಕ್ಷತೆಯಲ್ಲಿ ನಾಟಕ ಪ್ರದರ್ಶನ ನಡೆಯುತ್ತದೆ. ಹಾಸನದ ಕರ್ಪೂರ ಜ್ಯೋತಿಕಲಾಸಂಘ ಪ್ರದರ್ಶಿಸುವ ಭೂಕೈಲಾಸ ನಾಟಕ ಪ್ರದರ್ಶನ ಹೇಮಂತ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸೋಮಣ್ಣ ನಿರ್ದೇಶಿಸುತ್ತಾರೆ. ರಂಗಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.