ADVERTISEMENT

ದುರ್ಗಮ ಪ್ರದೇಶದಲ್ಲಿ ಭೂಕುಸಿತ: 800 ಕಾರ್ಮಿಕರಿಂದ ನಿರಂತರ ದುರಸ್ತಿ

ದುರ್ಗಮ ಪ್ರದೇಶದಲ್ಲಿ ಭೂಕುಸಿತ: ಸವಾಲಾದ ದುರಸ್ತಿ ಕಾರ್ಯ; ತಡೆಗೋಡೆ ನಿರ್ಮಾಣ

ಜಾನೆಕೆರೆ ಆರ್‌.ಪರಮೇಶ್‌
Published 1 ಆಗಸ್ಟ್ 2024, 6:18 IST
Last Updated 1 ಆಗಸ್ಟ್ 2024, 6:18 IST
ಸಕಲೇಶಪುರ ತಾಲ್ಲೂಕಿನ ಯಡಕುಮೇರಿ–ಕಡಗರವಳ್ಳಿ ನಡುವಿನ ಭೂಕುಸಿತದ ಸ್ಥಳದಲ್ಲಿ ಕಾರ್ಮಿಕರಿಂದ ದುರಸ್ತಿ ಕಾರ್ಯ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಯಡಕುಮೇರಿ–ಕಡಗರವಳ್ಳಿ ನಡುವಿನ ಭೂಕುಸಿತದ ಸ್ಥಳದಲ್ಲಿ ಕಾರ್ಮಿಕರಿಂದ ದುರಸ್ತಿ ಕಾರ್ಯ ನಡೆದಿದೆ.   

ಸಕಲೇಶಪುರ: ಪಶ್ಚಿಮಘಟ್ಟದ ಸೌಂದರ್ಯ ಸವಿಯುವ ಏಕೈಕ ಮಾರ್ಗವಾಗಿದ್ದ ಬೆಂಗಳೂರು–ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತದ ಆತಂಕ ಹೆಚ್ಚುತ್ತಲೇ ಇದೆ. ಈ ಮಾರ್ಗದ ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗದ ನಡುವಿನ ಕಡಗರವಳ್ಳಿ–ಯಡಕುಮೇರಿ ಮಧ್ಯೆ ಭಾರಿ ಪ್ರಮಾಣದ ಭೂಕುಸಿತ ಮರುಕಳಿಸುತ್ತಲೇ ಇದೆ.

ದುರ್ಗಮ ಪ್ರದೇಶದಲ್ಲಿ ಅಧಿಕಾರಿಗಳು, ಎಂಜಿನಿಯರ್‌ಗಳು ಸೇರಿದಂತೆ 800ಕ್ಕೂ ಹೆಚ್ಚು ಮಂದಿ, ಸರದಿಯಂತೆ ನಿರಂತರವಾಗಿ ಕಲ್ಲಿನ ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಒಂದು ತಿಂಗಳಿಂದ ಈ ಭಾಗದಲ್ಲಿ 140 ಸೆಂ.ಮೀ.ಗೂ ಹೆಚ್ಚು ಮಳೆಯಾಗಿದ್ದು, ಜುಲೈ 26ರಂದು ಸುಮಾರು 500 ಮೀಟರ್‌ಗೂ ಹೆಚ್ಚು ಅಗಲ ಹಾಗೂ 200 ಅಡಿಗೂ ಹೆಚ್ಚು ಆಳಕ್ಕೆ ಭೂಕುಸಿತವಾಗಿದೆ.

ADVERTISEMENT

ರೈಲ್ವೆ ಹಳಿಯ ಬಲಭಾಗದಲ್ಲಿ ಸುಮಾರು 200 ಅಡಿಗೂ ಹೆಚ್ಚು ಆಳದ ಪ್ರಪಾತವಿದೆ. ಹಳಿಗಳ ತಳಭಾಗದ ಮಣ್ಣು ಕೊಚ್ಚಿ ಹೋಗಿದೆ. ಎಡಭಾಗ ಬೆಟ್ಟದ ಮೇಲಿಂದ ಮಳೆ ನೀರು ವೇಗವಾಗಿ ಝರಿಯಂತೆ ಹರಿಯುತ್ತಿದ್ದು, ಇಳಿಜಾರಿನ ಪ್ರಪಾತದಲ್ಲಿ ನಿಂತು ದುರಸ್ತಿ ಕಾಮಗಾರಿ ಮಾಡುವುದು ರೈಲ್ವೆ ಇಲಾಖೆಗೆ ದೊಡ್ಡ ಸವಾಲಾಗಿದೆ.

ಅಧಿಕ ಮಳೆ ಬೀಳುವ ಪಶ್ಚಿಮಘಟ್ಟದ ಯಡಕುಮೇರಿ ಹಾಗೂ ಕೆಂಪುಹೊಳೆ ರಕ್ಷಿತ ಅರಣ್ಯದ ನಡುವೆ ದುರಸ್ತಿ ಮಾಡುವುದಿರಲಿ, ನಿಲ್ಲುವುದಕ್ಕೂ ಧೈರ್ಯಬೇಕು. ರಕ್ಷಿತಾರಣ್ಯ, ಬೆಟ್ಟದ ಇಳಿಜಾರಿನಲ್ಲಿ ನಡೆದುಕೊಂಡು ಹೋಗುವುದೇ ಕಷ್ಟ. ಇನ್ನು ವಾಹನಗಳು ಅಲ್ಲಿಗೆ ಹೋಗಲು ಆಗದು.

ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಅರಸೀಕೆರೆ ಸೇರಿದಂತೆ ಹಲವೆಡೆಗಳಿಂದ ರೈಲ್ವೆ ಗುತ್ತಿಗೆದಾರರ ಕಡೆಯ ಕೆಲಸಗಾರರು ಹಾಗೂ ರೈಲ್ವೆ ಇಲಾಖೆಯ ಸಿಬ್ಬಂದಿ ನಿರಂತರ ಶ್ರಮ ವಹಿಸುತ್ತಿದ್ದಾರೆ.

ಸಕಲೇಶಪುರ ನಿಲ್ದಾಣದಿಂದ ಜಲ್ಲಿ ಕಲ್ಲು, ಮಣ್ಣು, ಸಿಮೆಂಟ್‌ ಸೇರಿದಂತೆ ಸಾಮಗ್ರಿಗಳನ್ನು ಗೂಡ್ಸ್ ರೈಲಿನ ಮೂಲಕ ಕಳಿಸಲಾಗುತ್ತಿದೆ. ದುರಸ್ತಿ ಕಾರ್ಯದಲ್ಲಿ ತೊಡಗಿರುವವರಿಗೆ ಸ್ಥಳದಲ್ಲಿಯೇ ಊಟ, ತಿಂಡಿ ವ್ಯವಸ್ಥೆ ಮಾಡಲಾಗುತ್ತಿದೆ. ರೈಲ್ವೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಕ್ಷತಾ ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.

ಕಲ್ಲು ಸಿಮೆಂಟ್ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಗೂಡ್ಸ್‌ ರೈಲಿನ ಮೂಲಕ ಸಾಗಿಸಲಾಗುತ್ತಿದೆ.
ಸ್ಥಳದಲ್ಲಿಯೇ ಕಾರ್ಮಿಕರಿಗೆ ಊಟ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
ತಾಂತ್ರಿಕ ಏಜೆನ್ಸಿಗಳ ಸಹಾಯ ಪಡೆದಿದ್ದು ರೈಲುಗಳ ಸಂಚಾರಕ್ಕೆ ಯೋಗ್ಯವಾಗುವ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಲಾಗುತ್ತಿದೆ.
ಅರವಿಂದ ಶ್ರೀವಾತ್ಸವ ನೈರುತ್ಯ ರೈಲ್ವೆ ಮಹಾಪ್ರಬಂಧಕ

ರೈಲ್ವೆಗೆ ಹೆಮ್ಮೆಯ ಮಾರ್ಗ ‘ದಕ್ಷಿಣ ಭಾರತದಲ್ಲಿಯೇ ರೈಲ್ವೆ ಇಲಾಖೆಗೆ ಸವಾಲಾಗಿರುವ ಮಾರ್ಗ ಇದು. ಸಮುದ್ರ ಮಟ್ಟದಿಂದ ಸುಮಾರು 3ಸಾವಿರ ಅಡಿಗೂ ಎತ್ತರದಲ್ಲಿರುವ ಬೆಟ್ಟಗಳ ಇಳಿಜಾರು ಸೀಳಿ ಹಳಿಗಳನ್ನು ಅಳವಡಿಸಲಾಗಿದೆ. ಬೆಟ್ಟಗಳನ್ನು ಕೊರೆದು ಸುರಂಗ ನಿರ್ಮಿಸಲಾಗಿದೆ. 1950 ರಿಂದ 1975ರ ನಡುವೆ ಯಾವುದೇ ಯಂತ್ರಗಳಿಲ್ಲದೇ ಮಾನವ ಶಕ್ತಿಯಿಂದಲೇ ಮಾರ್ಗ ನಿರ್ಮಾಣವಾಗಿದೆ. ರೈಲ್ವೆ ಇಲಾಖೆಗೆ ಇದೊಂದು ಹೆಮ್ಮೆಯ ಮಾರ್ಗ’ ಎನ್ನುತ್ತಾರೆ ರೈಲ್ವೆ ಮಂಡಳಿ ಮಾಜಿ ಸದಸ್ಯ ವೈ.ಎಸ್‌. ಗಿರೀಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.