ಜಾವಗಲ್: ಇಲ್ಲಿನ ದೊಡ್ಡಘಟ್ಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ನಾಗಲಾಪುರ ಕಟ್ಟೆ ಬಳಿ ಬುಧವಾರ ಮಧ್ಯಾಹ್ನ ಚಿರತೆ ದಾಳಿ ಮಾಡಿ ಮೇಕೆಮರಿಯನ್ನು ಕೊಂದು ಹಾಕಿದೆ.
ಗ್ರಾಮದ ಉಮೇಶ್ ಎಂಬುವರು ಎಂದಿನಂತೆ ಮೇಕೆಗಳನ್ನು ಮೇಯಿಸುವ ಸಲುವಾಗಿ ನಾಗಲಾಪುರ ಕಟ್ಟೆ ಬಳಿ ತೆರಳಿದ್ದಾಗ ಚಿರತೆ ಏಕಾಏಕಿ ಮೇಕೆಮರಿಯೊಂದರ ಮೇಲೆ ದಾಳಿ ಮಾಡಿದೆ.
ಬೆದರಿದ ಮೇಕೆಗಳ ಸದ್ದನ್ನು ಆಲಿಸಿ ಸ್ಥಳಕ್ಕೆ ಧಾವಿಸಿದ ಉಮೇಶ್ ಹಾಗೂ ಅವರ ತಾಯಿ ಗಂಗಮ್ಮ ತಮ್ಮ ಬಳಿ ಇರುವ ವಸ್ತುಗಳಿಂದ ಜೋರಾಗಿ ಶಬ್ದ ಮಾಡಿದ್ದಾರೆ. ಚಿರತೆಯು ಮೇಕೆ ಮರಿಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದೆ.
‘ಈ ಭಾಗದಲ್ಲಿ ಚಿರತೆ ಹಾವಳಿ ವಿಪರೀತವಾಗಿದ್ದು, ಕಳೆದ ಐದು ತಿಂಗಳ ಅವಧಿಯಲ್ಲಿ ಎರಡು ಮೇಕೆಗಳನ್ನು ಚಿರತೆ ಕೊಂದು ಹಾಕಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೆ ಕುರಿಗಾಹಿಗಳ ಮೇಲೂ ಚಿರತೆಗಳು ದಾಳಿ ಮಾಡುವ ಆತಂಕವಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಉಮೇಶ್ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.