ADVERTISEMENT

ಲೋಕಸಭೆ ಚುನಾವಣೆ | ಹಾಸನ: ಮೂರನೇ ತಲೆಮಾರಿನ ಮಧ್ಯೆ ಪೈಪೋಟಿ

ಚಿದಂಬರಪ್ರಸಾದ್
Published 11 ಮಾರ್ಚ್ 2024, 0:25 IST
Last Updated 11 ಮಾರ್ಚ್ 2024, 0:25 IST
ಸಿದ್ದೇಶ್ ನಾಗೇಂದ್ರ
ಸಿದ್ದೇಶ್ ನಾಗೇಂದ್ರ   

ಹಾಸನ: ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಹಾಸನ ಕ್ಷೇತ್ರದಲ್ಲಿ ಈ ಬಾರಿ, ಬದ್ಧ ಎದುರಾಳಿಗಳಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮಾಜಿ ಸಚಿವ ದಿ.ಪುಟ್ಟಸ್ವಾಮಿಗೌಡರ ಕುಟುಂಬದ 3ನೇ ತಲೆಮಾರಿನ ನಡುವೆ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ. ಆದರೆ, ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅನರ್ಹತೆಯ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಆಧಾರದಲ್ಲಿ ಇದು ನಿರ್ಧಾರ ಆಗಲಿದೆ.

ಎಚ್‌.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಮತ್ತು ಮಾಜಿ ಸಚಿವ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ ಪಟೇಲ್‌ ಎದುರಾಳಿಗಳಾಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.

ದೇವೇಗೌಡರ ಜೊತೆಗಿನ ಆರಂಭದ ಸ್ನೇಹವನ್ನು ಕಡಿದುಕೊಂಡು ಹೊರಬಂದಿದ್ದ ಪುಟ್ಟಸ್ವಾಮಿಗೌಡರು, ಪ್ರತಿ ಚುನಾವಣೆಯಲ್ಲೂ ದೇವೇಗೌಡರಿಗೆ ಸ್ಪರ್ಧೆ ಒಡ್ಡುತ್ತಲೇ ಬಂದಿದ್ದರು. ಅವರ ನಂತರವೂ ಹೊಳೆನರಸೀಪುರದಲ್ಲಿ ಎಚ್‌.ಡಿ. ರೇವಣ್ಣ ಅವರ ವಿರುದ್ಧ 2 ಬಾರಿ ಸ್ಪರ್ಧಿಸಿದ್ದ ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಸೋಲು ಅನುಭವಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ. ರೇವಣ್ಣ ಅವರ ವಿರುದ್ಧ ಸ್ಪರ್ಧಿಸಿದ್ದ ಶ್ರೇಯಸ್‌ ಪಟೇಲ್‌ 3,500 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ADVERTISEMENT

‘ದೇವೇಗೌಡರ ಕುಟುಂಬಕ್ಕೆ ಪೈಪೋಟಿ ನೀಡಲು ಶ್ರೇಯಸ್‌ ಅವರನ್ನೇ ಕಣಕ್ಕೆ ಇಳಿಸಬೇಕು. ಮತದಾರರ ಅನುಕಂಪವೂ ಕೈಹಿಡಿಯಲಿದೆ’ ಎನ್ನುವ ಲೆಕ್ಕಾಚಾರ ಅಂದಿನಿಂದಲೇ ಕಾಂಗ್ರೆಸ್‌ನಲ್ಲಿ ಆರಂಭವಾಗಿತ್ತು. ಇದೀಗ ಅದನ್ನೇ ಕಾಂಗ್ರೆಸ್‌ ಹೈಕಮಾಂಡ್‌ ಬಳಸಿಕೊಂಡು ‘ಲಾಭ’ದ ನಿರೀಕ್ಷೆಯಲ್ಲಿದೆ.

ಮುಗಿಯದ ಹಗ್ಗಜಗ್ಗಾಟ: ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದರೂ, ಬಿಜೆಪಿ–ಜೆಡಿಎಸ್ ನಾಯಕರ ಮಧ್ಯೆ ಇನ್ನೂ ಹಗ್ಗಜಗ್ಗಾಟ ಮುಂದುವರಿದಿದೆ.

ಒಂದೆಡೆ ಪ್ರಜ್ವಲ್‌ ರೇವಣ್ಣ, ‘ಬಿಜೆಪಿ ನಾಯಕರ ಜೊತೆಗೆ ಮಾತನಾಡುತ್ತಿದ್ದೇನೆ. ಪ್ರೀತಂ ಗೌಡ ಜೊತೆಗೂ ಮಾತನಾಡುತ್ತೇನೆ’ ಎಂದು ಸ್ನೇಹದ ಹಸ್ತ ಚಾಚಿದ್ದು, ಬಿಜೆಪಿ ನಾಯಕರು ಮಾತ್ರ, ‘ಮೈತ್ರಿಯ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ’ ಎನ್ನುತ್ತಿದ್ದಾರೆ.

ಬಿಜೆಪಿಯ ಬಹುತೇಕ ನಾಯಕರಿಗೆ ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಮನಸ್ಸಿಲ್ಲ. ಆದರೆ, ಬಿಜೆಪಿ ವರಿಷ್ಠರ ಜೊತೆಗೆ ದೇವೇಗೌಡರು ಹೊಂದಿರುವ ಉತ್ತಮ ಬಾಂಧವ್ಯದಿಂದಾಗಿ ಏನೂ ಮಾಡಲು ಆಗುತ್ತಿಲ್ಲ.

‘ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಎ.ಟಿ. ರಾಮಸ್ವಾಮಿ ಸಮರ್ಥ ಅಭ್ಯರ್ಥಿ ಆಗಲಿದ್ದಾರೆ. ಅವರಿಗೆ ಟಿಕೆಟ್‌ ನೀಡಿದರೂ ಒಳ್ಳೆಯದು ಎಂಬ ಮಾತನ್ನು ವರಿಷ್ಠರ ಬಳಿ ಹೇಳಿದ್ದೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ತಿಳಿಸಿದ್ದಾರೆ.ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಸಾಕಷ್ಟು ಅಧಿಕಾರ ನೀಡಿದ್ದೀರಿ. ನಿಮ್ಮ ಸೇವೆ ಸಲ್ಲಿಸಲು ನನಗೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಶ್ರೇಯಸ್‌ ಪಟೇಲ್‌ ಕಾಂಗ್ರೆಸ್‌ ಅಭ್ಯರ್ಥಿ

ಪ್ರಜ್ವಲ್‌ ರೇವಣ್ಣ
ಶ್ರೇಯಸ್ ಪಟೇಲ್‌
ಟಿಕೆಟ್ ಘೋಷಣೆ ಆದ ಮೇಲೆ ಎರಡೂ ಪಕ್ಷದವರು ಸೇರಿ ಎಲ್ಲ ಭಾಗಗಳಲ್ಲೂ ಸಭೆ ನಡೆಸುತ್ತೇವೆ. ಯಾವುದೇ ಗೊಂದಲಗಳಿದ್ದರೂ ಬಗೆಹರಿಸಿಕೊಳ್ಳುತ್ತೇವೆ.
ಪ್ರಜ್ವಲ್‌ ರೇವಣ್ಣ ಸಂಸದ
ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿದ್ದು ಪಕ್ಷದ ಅಭ್ಯರ್ಥಿ ಹಾಕಲು ವರಿಷ್ಠರನ್ನು ಕೇಳಿದ್ದೇವೆ. ಮೈತ್ರಿ ಬಗ್ಗೆ ನಮ್ಮ ನಾಯಕರು ಯಾವುದೇ ಸೂಚನೆ ನೀಡಿಲ್ಲ.
ಸಿದ್ಧೇಶ್‌ ನಾಗೇಂದ್ರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಸಾಕಷ್ಟು ಅಧಿಕಾರ ನೀಡಿದ್ದೀರಿ. ನಿಮ್ಮ ಸೇವೆ ಸಲ್ಲಿಸಲು ನನಗೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ.
ಶ್ರೇಯಸ್‌ ಪಟೇಲ್‌ ಕಾಂಗ್ರೆಸ್‌ ಅಭ್ಯರ್ಥಿ
ಓಡಾಟ ಚುರುಕು
ಟಿಕೆಟ್‌ ಘೋಷಣೆ ಆಗುತ್ತಿದ್ದಂತೆಯೇ ಕಾಂಗ್ರೆಸ್‌ ನಾಯಕರು ಕ್ಷೇತ್ರದಲ್ಲಿ ಚುರುಕಿನ ಓಡಾಟ ಆರಂಭಿಸಿದ್ದಾರೆ. ಶ್ರೇಯಸ್‌ ಪಟೇಲ್‌ ಅವರು ಶನಿವಾರ ಚನ್ನರಾಯಪಟ್ಟಣಕ್ಕೆ ಭೇಟಿ ನೀಡಿ ಪ್ರಮುಖ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದರು. ಅರಸೀಕೆರೆ ಕ್ಷೇತ್ರಕ್ಕೂ ಭೇಟಿ ನೀಡಿದ ಶ್ರೇಯಸ್‌ ಪಟೇಲ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ ಬೆಂಬಲ ಕೋರಿದ್ದಲ್ಲದೇ ಮತಯಾಚನೆಯನ್ನೂ ಆರಂಭಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.