ADVERTISEMENT

ಹಾಸನದಲ್ಲೂ ಜೆಡಿಎಸ್‌ ಗೆಲ್ಲುತ್ತದೆ: ಎಚ್‌.ಡಿ. ದೇವೇಗೌಡ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 13:48 IST
Last Updated 26 ಏಪ್ರಿಲ್ 2024, 13:48 IST
ಹೊಳೆನರಸೀಪುರ ತಾಲ್ಲೂಕಿನ ಪಡವಲಹಿಪ್ಪೆಯಲ್ಲಿ ಜೆಡಿಎಸ್‌ ವರಿಷ್ಟ ಎಚ್‌.ಡಿ. ದೇವೇಗೌಡ ಕಾಂಗ್ರೆಸ್‌ ಪಕ್ಷದ ಬಿತ್ತಿಪತ್ರ ಪ್ರದರ್ಶಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಪಡವಲಹಿಪ್ಪೆಯಲ್ಲಿ ಜೆಡಿಎಸ್‌ ವರಿಷ್ಟ ಎಚ್‌.ಡಿ. ದೇವೇಗೌಡ ಕಾಂಗ್ರೆಸ್‌ ಪಕ್ಷದ ಬಿತ್ತಿಪತ್ರ ಪ್ರದರ್ಶಿಸಿದರು.   

ಹೊಳೆನರಸೀಪುರ: ರಾಜ್ಯದಲ್ಲಿ ಎನ್‌ಡಿಎ ಮಿತ್ರಕೂಟಕ್ಕೆ ಉತ್ತಮ ವಾತಾವರಣ ಇದೆ. ಹಾಸನದಲ್ಲೂ ಜೆಡಿಎಸ್‌ ಗೆಲ್ಲುತ್ತದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಪಡವಲಹಿಪ್ಪೆ ಮತಗಟ್ಟೆಯಲ್ಲಿ ಪತ್ನಿ ಚನ್ನಮ್ಮ  ಜೊತೆ ಬಂದು ಮತಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸುಳ್ಳು ಭರವಸೆ: ಸಂವಿಧಾನದತ್ತ ಯಾವುದೇ ಆಡಳಿತಾತ್ಮಕ ಅಧಿಕಾರ ಹೊಂದಿಲ್ಲದ ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿದ್ಯಾವಂತ ಯುವಕರಿಗೆ 1ಲಕ್ಷ, ಬಡಕುಟುಂಬದ ಮಹಿಳೆಗೆ 1ಲಕ್ಷ, ದಿನಕ್ಕೆ 400 ಕನಿಷ್ಠ ವೇತನ ನೀಡುವುದಾಗಿ ಸುಳ್ಳು ಭರವಸೆಯ ಬಿತ್ತಿ ಪತ್ರ ಹಂಚುತ್ತಿದ್ದಾರೆ. ಅವರ ಪ್ರಯತ್ನ ಫಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇಂತಹ ಭರವಸೆ ನೀಡಿರುವ ಇವರು ತಮಿಳುನಾಡು, ಕೇರಳ ಹಾಗೂ ಇನ್ನಿತರ ರಾಜ್ಯಗಳ ಜನರಿಗೆ ಈ ಭರವಸೆ ನೀಡಿಲ್ಲ. ಈ ಬಗ್ಗೆ ನಾನು ಆಯಾಯ ರಾಜ್ಯಗಳಿಗೆ ಕರೆ ಮಾಡಿ ದೃಢಪಡಿಸಿಕೊಂಡಿದ್ದೇನೆ. ಜನರಿಗೆ ಸುಳ್ಳಿಹೇಳುತ್ತಿದ್ದಾರೆ ಎಂದೇ ಅರ್ಥ ಎಂದು ವ್ಯಾಖ್ಯಾನಿಸಿದರು.

ರಾಹುಲ್‌ ಗಾಂಧಿ ಉತ್ತರ ಪ್ರದೇಶದಲ್ಲಿ ಗೆಲ್ಲಲು ಸಾಧ್ಯ ಇಲ್ಲದ ಕಾರಣ ಕೇರಳದಿಂದ ಸ್ಪರ್ಧಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹತಾಶರಾಗಿ ನಮ್ಮ ಪಕ್ಷಕ್ಕೆ ಮತ ನೀಡದವರು ನಾನು ಸತ್ತಾಗ ಮಣ್ಣನ್ನಾದರು ಹಾಕಿ ಎಂದು ಹತಾಶ ಭಾಷಣ ಮಾಡಿದವರು ಈಗ ಸುಳ್ಳು ಬಿತ್ತಿಪತ್ರ ಹಂಚುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ಪ್ರಜ್ವಲ್‌ ರೇವಣ್ಣ, ಶಾಸಕ ಎಚ್‌.ಡಿ. ರೇವಣ್ಣ, ಭವಾನಿ ರೇವಣ್ಣ, ಸೂರಜ್‌ ರೇವಣ್ಣ ಪಡವಲಹಿಪ್ಪೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇದಕ್ಕೂ ಮುನ್ನ ದೇವೇಗೌಡರು ಹರದನಹಳ್ಳಿಯ ಶಿವನದೇವಾಲಯ, ಪಡವಲಹಿಪ್ಪೆಯ ಕೋದಂಡರಾಮ ಹಾಗೂ ಈಶ್ವರನ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.