ಹಾಸನ: ‘ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ತಾಯಿ ಅನುಪಮಾ ಮಹೇಶ್ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪೆನ್ ಡ್ರೈವ್ ಹಂಚಿಕೆಯಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬ ವಕೀಲ ಜಿ. ದೇವರಾಜೇಗೌಡ ಆರೋಪ ಸತ್ಯಕ್ಕೆ ದೂರವಾಗಿದೆ. ಈ ಹಿಂದೆ ಪೆನ್ ಡ್ರೈವ್ ತಮ್ಮ ಬಳಿ ಇದೆ. ಅದನ್ನು ಬಿಡುಗಡೆ ಮಾಡುವುದಾಗಿಯೂ ದೇವರಾಜೇಗೌಡ ಅವರು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು. ಅವರೇ ಏಕೆ ಈ ಕೆಲಸ ಮಾಡಿಸಿರಬಾರದು’ ಎಂದು ಅನುಮಾನ ವ್ಯಕ್ತಪಡಿಸಿದರು.
‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ನಮ್ಮ ಕುಟುಂಬದ ಮೇಲಿನ ಅನುಕಂಪದ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಹೆಚ್ಚಿನ ಮತಗಳು ಬರಲಿವೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿಯೇ 20 ಸಾವಿರ ಲೀಡ್ ಬರಲಿದ್ದು, ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.