ADVERTISEMENT

ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ: ಕೈಲಾಸ ಪರ್ವತ ಮಾದರಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:21 IST
Last Updated 8 ಮಾರ್ಚ್ 2024, 15:21 IST
   

ಅರಸೀಕೆರೆ: ನಗರದ ಹುಳಿಯಾರು ರಸ್ತೆಯಲ್ಲಿರುವ ಹೊಯ್ಸಳರ ಕಾಲದ ಐತಿಹಾಸಿಕ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಚಂದ್ರಮೌಳೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ, ವಿವಿಧ ರೀತಿಯ ಅಭಿಷೇಕ ನಡೆಯಿತು. ಬಾಳೆದಿಂಡು ಮತ್ತು ಹತ್ತಿಯಿಂದ ನಿರ್ಮಿಸಿದ್ದ ಕೈಲಾಸ ಪರ್ವತದ ಮಾದರಿಯ ವಿಶೇಷ ಅಲಂಕಾರ ಸೇವೆ ಗಮನ ಸೆಳೆಯಿತು.

ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಪೂಜೆ ಸೇರಿದಂತೆ ಅಭಿಷೇಕ ಪ್ರಿಯನಾದ ಶಿವನಿಗೆ ವಿವಿಧ ರೀತಿಯ ಅಭಿಷೇಕಗಳು ನೆರವೇರಿದವು. ಭಕ್ತರು ಬಿಲ್ವಾ ಪತ್ರೆ , ತುಂಬೇ ಹೂವು, ಘಂಟೆ ಹೂವು, ಹಿರೇಕಲ್ಲು ಗುಡ್ಡದಲ್ಲಿ ವರ್ಷಕ್ಕೊಮ್ಮೆ ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾತ್ರ ದೊರಕುವ ಜಾಲದ ಹೂವು, ಸೇರಿದಂತೆ ಭಗವಂತ ಈಶ್ವರನಿಗೆ ಪ್ರಿಯವಾದ ಎಲ್ಲ ಬಗೆಯ ಹೂವುಗಳು ಮತ್ತು ಪತ್ರೆಗಳನ್ನು ಅರ್ಪಿಸಿದರು.

ಎರಡು ದಿನಗಳ ಹಿಂದಿನಿಂದಲೇ ದೇವಾಲಯದಲ್ಲಿ ಸಕಲ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದ್ದವು, ಹಸಿರು ತಳಿರು ತೋರಣಗಳ ಜತೆಗೆ ದೇವಾಲಯಕ್ಕೆ ಅಳವಡಿಸಿದ್ದ ಹೂವಿನ ಅಲಂಕಾರ ಹಾಗೂ ವಿಶೇಷವಾದ ವಿದ್ಯುತ್ ಅಲಂಕಾರ ಎಲ್ಲರ ಗಮನ ಸೆಳೆಯಿತು, ಸಂಜೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ADVERTISEMENT

ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ದೊಡ್ಡಣ್ಣ ಹಾಗೂ ಅರಸೀಕೆರೆ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಅನಿತಾ ದೇವರ ಅಭಿಷೇಕದಲ್ಲಿ ಪಾಲ್ಗೊಂಡರು.

ದೇವಾಲಯದ ಅರ್ಚಕ ಶಂಕರ್ ಆರಾಧ್ಯ ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಮಹಾ ಶಿವರಾತ್ರಿ ಹಬ್ಬದ ದಿನದಂದು ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ, ಈ ನಿಟ್ಟಿನಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ದೇವಾಲಯದ ಆಡಳಿತ ಮಂಡಳಿ ನಿರ್ವಹಿಸುತ್ತಿದೆ. ಮಹಾ ಶಿವರಾತ್ರಿ ಹಬ್ಬದ ದಿನ ಉಪವಾಸ ವ್ರತ ಆಚರಿಸಿ ಶಿವನಿಗೆ ಪೂಜೆ ಸಲ್ಲಿಸಿದರೆ ಸಕಲ ದೋಷಗಳು ನಿವಾರಣೆಯಾಗುತ್ತವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.