ಹಾಸನ: ‘ಹೊಳೆನರಸೀಪುರದ ಶಾಸಕ ಎಚ್.ಡಿ. ರೇವಣ್ಣ ಅವರ ಮನೆಯಲ್ಲಿ ಕಾನೂನು ಪ್ರಕಾರ ಸ್ಥಳದ ಮಹಜರು ಮಾಡಿಲ್ಲ. ಏಕಪಕ್ಷೀಯವಾಗಿ, ಪ್ರಭಾವಿ ವ್ಯಕ್ತಿಯ ಆದೇಶದಂತೆ ಮಹಜರು ಮಾಡಿದ್ದಾರೆ’ ಎಂದು ಎಚ್.ಡಿ. ರೇವಣ್ಣ ಪರ ವಕೀಲ ಗೋಪಾಲ ಆರೋಪಿಸಿದ್ದಾರೆ.
ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ಥಳದ ಮಹಜರು ನಡೆಸಿದ ನಂತರ ಅಂತಿಮ ವರದಿಯನ್ನು ಅಲ್ಲಿದ್ದವರಿಗೆ ಓದಿ ಹೇಳಬೇಕು. ವಿದ್ಯಾವಂತರಿದ್ದರೆ, ಓದಲು ಅವಕಾಶ ಕೊಡಬೇಕು. ನಂತರ ಸಹಿ ಪಡೆಯಬೇಕು. ಆದರೆ, ಎಸ್‌ಐಟಿ ಅಧಿಕಾರಿಗಳು ಕೇವಲ ಮನೆಯಲ್ಲಿ ಕುಳಿತು ಏಕಪಕ್ಷೀಯವಾಗಿ ಮಹಜರು ವರದಿಯನ್ನು ತಯಾರಿಸಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘3 ಪುಟದ ಮಹಜರು ವರದಿ ತಯಾರಿಸಿದ್ದಾರೆ. ಸ್ಥಳದಲ್ಲಿದ್ದ ಮಹಜರು ಸಾಕ್ಷಿಗಳ ಹೇಳಿಕೆಯನ್ನು ಪಡೆದಿದ್ದು, ಅದನ್ನು ತನಿಖಾಧಿಕಾರಿಗಳು ಸಾಕ್ಷಿಗಳಿಗೆ ಓದಿ ಹೇಳಬೇಕು. ಆದರೆ, ಕೇವಲ 3 ಸಾಲು ಓದಿ ಹೇಳಿದ್ದಾರೆ’ ಎಂದು ದೂರಿದರು.
‘ಮಹಜರು ನೋಟಿಸ್‌ಗೆ ಅನುಗುಣವಾಗಿ ನಾನು ಮತ್ತು ಭವಾನಿ ರೇವಣ್ಣ ಸಹಕಾರ ನೀಡಿದ್ದೇವೆ. ಆದರೆ, ಎಸ್‌ಐಟಿ ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ಮಹಜರು ನಡೆಸಿದ್ದಾರೆ. ಆ ಬಗ್ಗೆ ಅವರನ್ನು ಪ್ರಶ್ನಿಸಿದ್ದೇನೆ. ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.