ಹಳೇಬೀಡು: ತೀರ್ಥಂಕರರಲ್ಲಿ ಒಬ್ಬರಾದ 1008 ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ ಮಹೋತ್ಸವ, ಬಸ್ತಿಹಳ್ಳಿಯ ಜಿನಮಂದಿರದಲ್ಲಿ ಭಾನುವಾರ ವೈಭವದಿಂದ ನಡೆಯಿತು.
ತೀರ್ಥಂಕರರ ಮೂರ್ತಿಯು ಬಣ್ಣದೋಕುಳಿಯಲ್ಲಿ ಮಿಂದ ಸಂಭ್ರಮವನ್ನು ನಾಡಿನ ವಿವಿಧೆಡೆಯಿಂದ ಬಂದಿದ್ದ ಜನರು ಭಕ್ತಿಯಿಂದ ಕಣ್ತುಂಬಿಕೊಂಡರು. ಹಾಸನದ ದಿಗಂಬರ ಜೈನ ಯುವಕ ಸಂಘ ಆಯೋಜಿಸಿದ್ದ ವರ್ಣಮಯ ಅಭಿಷೇಕಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಜೈನ ಬಸದಿಗಳ ಸಂಕೀರ್ಣದ ಭವ್ಯ ಮಂದಿರದಲ್ಲಿರುವ 18 ಅಡಿ ಎತ್ತರದ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕ ನಡೆಯಿತು. ಶ್ರವಣಬೆಳಗೂಳ ಜೈನಮಠದ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಸ್ವಾಮೀಜಿ ಪ್ರಾರ್ಥನೆ ಸಲ್ಲಿಸಿದ ನಂತರ ಮಸ್ತಕಾಭಿಷೇಕ್ಕೆ ಚಾಲನೆ ನೀಡಲಾಯಿತು. ಪ್ರತಿಷ್ಠಾಚಾರ್ಯರ ನೇತೃತ್ವದಲ್ಲಿ ಪುರೋಹಿತರ ಮಂತ್ರಘೋಷದೊಂದಿಗೆ ವಿವಿಧ ಪೂಜೆ ನಡೆದವು.
ತೀರ್ಥಂಕರ ಮೂರ್ತಿಗೆ ಅಭಿಷೇಕ ನೆರವೇರಿದಾಗಶಾಂತಿನಾಥ ಭಗವಾನ್ ಕೀ ಜೈ, ವಿಶ್ವಧೃಮಕೀ ಜೈ, ಅಹಿಂಸಾ ಪರಮೋ ಧರ್ಮಕೀ ಜೈ ಎಂಬ ಭಕ್ತರ ಘೋಷಣೆ ಮುಗಿಲು ಮುಟ್ಟಿತ್ತು. ಮಹಿಳೆಯರು ಸುಶ್ರಾವ್ಯವಾಗಿ ಜಿನ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು.
108 ಕಳಸಗಳಿಂದ ಜಲಾಭಿಷೇಕದಿಂದ ಮೂರ್ತಿಯು ವಿವಿಧ ಭಂಗಿಯಲ್ಲಿ ಕಂಗೊಳಿಸಿತು. ಎಳನೀರು, ಹಾಲು, ಕಬ್ಬಿನಹಾಲು, ಚತುಷ್ಕೋನ ಕಳಸ, ಶ್ರೀಗಂಧ, ಅರಿಸಿನ, ಕಲ್ಕಚೂರ್ಣ, ಚಂದನ, ಕಷಾಯಗಳಿಂದ ಅಭಿಷೇಕ ನೆರವೇರಿಸಲಾಯಿತು.
ಮಹಾಶಾಂತಿ ಮಂತ್ರದೊಂದಿಗೆ ಶಾಂತಿನಾಥ ಮೂರ್ತಿಗೆ ಶಾಂತಿಧಾರೆ ನೆರವೇರಿತು. ಪುಷ್ಪವೃಷ್ಟಿಯೊಂದಿಗೆ ಕನಕಾಭೀಷೇಕ (ನಾಣ್ಯ) ನಡೆಯಿತು.
ಪುರೋಹಿತ ಜೀನರಾಜೇಂದ್ರ, ಚಂದ್ರಪ್ರಸಾದ್, ಪದ್ಮಪ್ರಸಾದ್, ಜಯಕುಮಾರ್ ಬಾಬು ಪೂಜಾ ವಿಧಾನ ನೆರವೇರಿಸಿದರು. ಹಾಸನ ದಿಗಂಬರ ಜೈನ ಯವಕ ಸಂಘದ ಅಧ್ಯಕ್ಷ ನಾಗರಾಜು ಎಚ್.ಪಿ., ಕಾರ್ಯದರ್ಶಿ ದೇವನಾಗು, ಸದಸ್ಯರಾದ ಅಮೃತ್ ಎ., ಧನುಶ್, ಸಮಂತ್, ಶ್ರೇಯಸ್, ಸನ್ಮತಿ, ಸ್ಥವನ್ ನೇತೃತ್ವದಲ್ಲಿ ಮಸ್ತಕಾಭಿಷೇಕ ನಡೆಯಿತು.
ಹಾಸನ ಜೈನ ಸಮಾಜ ಅಧ್ಯಕ್ಷ ಶಾಂತೀಶ್, ರಾಜೀವ್ ಅಯುರ್ವೇದ ವೈದ್ಯಕೀಯ ವಿದ್ಯಾಲಯದ ಪ್ರಾಂಶುಪಾಲ ಎಸ್.ಎ.ನಿತಿನ್, ಪ್ರಮುಖರಾದ ಎಂ.ಅಜಿತ್ ಕುಮಾರ್, ಜೈನ ವಿದ್ವಾಂಸ ವೀರೇಂದ್ರ ಬೇಗೂರು, ಶ್ರುತಿ ಧನುಷ್ ಭಾಗವಹಿಸಿದ್ದರು.
ಶಾಂತಿನಾಥ ತೀರ್ಥಂಕರರನ್ನು ಆರಾದಿಸುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ. ಮುಂದಿನ ವರ್ಷ ಬಸ್ತಿಹಳ್ಳಿ ಮಸ್ತಕಾಭಿಷೇಕ ವೈಭವ ಹೆಚ್ಚಿಸಲು ಕೈಜೋಡಿಸುತ್ತೇವೆ.ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರವಣಬೆಳಗೊಳ ಮಠ
ಶಾಂತಿ ಬೀಜ ಬಿತ್ತುವುದರೊಂದಿಗೆ ಪ್ರೀತಿ ವಿಶ್ವಾಸ ಸಾಮಾಜಿಕ ಸಾಮಾರಸ್ಯ ಮೂಡಿಸುವುದು ತೀರ್ಥಂಕರರ ಮಸ್ತಕಾಭಿಷೇಕದ ಉದ್ದೇಶ.ನಾಗರಾಜು ಎಚ್.ಪಿ. ಹಾಸನ ದಿಗಂಬರ ಜೈನ ಯುವಕ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.