ಆಲೂರು: ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಲ್ಲಿ ಮಗ್ನರಾಗಿ, ನಿರಂತರ ಸಭೆ, ಪ್ರಗತಿ ಪರಿಶೀಲನೆ, ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿದ್ದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ತಾಲ್ಲೂಕಿನ ಗಂಜಿಗೆರೆ ಗ್ರಾಮದ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರ ಗಮನ ಸೆಳೆದರು.
ಭೇಟಿ ಸಂದರ್ಭ ವಿದ್ಯಾರ್ಥಿಗಳೊಡನೆ ಬೆರೆತು ಗಣಿತ ಶಿಕ್ಷಕಿಯಾಗಿ ಪಾಠ ಮಾಡಿದರು.
ಮಕ್ಕಳ ನೋಟ್ ಬುಕ್ ಹಿಡಿದು ಗಣಿತ ಲೆಕ್ಕಗಳ ಕುರಿತು ಪ್ರಶ್ನೆ ಕೇಳಿದರು. ವಿದ್ಯಾರ್ಥಿಗಳು ಉತ್ತರಿಸಲು ತಡವರಿಸಿದರು. ಕೂಡಲೆ ಒಬ್ಬ ಶಿಕ್ಷಕಿಯಂತೆ ಸಲಹೆ ನೀಡಿದಾಗ ವಿದ್ಯಾರ್ಥಿಗಳು ಸಂತಸಗೊಂಡರು.
ಶಾಲೆ ಶಿಕ್ಷಕರನ್ನು ಉದ್ದೇಶಿಸಿ, ‘ಗಣಿತ ವಿಷಯ ಬೋಧಕರು ಇನ್ನಷ್ಟು ಪರಿಣಾಮಕಾರಿಯಾಗಿ ಪಾಠ ಮಾಡಬೇಕು. ಶಾಲೆ, ಆಟದ ಮೈದಾನ ಬಳಸಿಕೊಂಡು ಮಕ್ಕಳು ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಿಗೊಳಿಸಬೇಕು. ಶಾಲೆಯಲ್ಲಿ ಅಡುಗೆ ಕೆಲಸದವರನ್ನು ಕೂಡಲೆ ನೇಮಕ ಮಾಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಶಾಲೆ ಕಾಂಪೌಂಡ್ ಅರ್ಧಕ್ಕೆ ನಿಂತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಕೂಡಲೆ ಕಾಮಗಾರಿ ಪೂರ್ಣಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗೆ ನಿರ್ದೇಶನ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.