ಹಿರೀಸಾವೆ: ಹೋಬಳಿಯಲ್ಲಿ ಉತ್ತಮವಾಗಿ ಬೆಳೆದ್ದಿದ ರಾಗಿ ಬೆಳೆಯೂ ಕಳೆದ 15 ದಿನಗಳಿಂದ ಸುರಿದ ಮಳೆಗೆ ಪೈರು ನೆಲಕ್ಕೆ ಉರುಳಿ ಬಿದ್ದರೆ, ಕೆಲವು ಕಡೆ ಕಟಾವಿಗೆ ಬಂದಿದ್ದ ರಾಗಿ ಉದುರಿದೆ. ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ.
ಎರಡು ತಿಂಗಳ ಹಿಂದೆ ಮಳೆಯಾಗದೇ ಬಿಸಿಲಿನ ತಾಪಕ್ಕೆ ರಾಗಿ ಪೈರು ಒಣಗಲು ಆರಂಭಿಸಿತ್ತು. ಆದರೆ ಅಕ್ಟೋಬರ್‌ನಲ್ಲಿ ಹದವಾಗಿ ಸುರಿದ ಮಳೆಯಿಂದ ರಾಗಿ ಹುಲುಸಾಗಿ ಎತ್ತರಕ್ಕೆ ಬೆಳೆದು, ಇದೀಗ ತೆನೆ ಕಟ್ಟಿತ್ತು.
10 ದಿನಗಳ ಹಿಂದೆ ಸುರಿದ ಮಳೆಗೆ ರಾಗಿ ಬೆಳೆ ನೆಲ ಕಚ್ಚಿದೆ. ಜುಲೈ ಕೊನೆ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ದೀರ್ಘಾವಧಿಯ ರಾಗಿ ಬಿತ್ತನೆ ಮಾಡಿದ್ದರು. ಈಗ ಕಟಾವಿಗೆ ಬಂದಿದೆ. ಆದರೆ ಮಳೆ ಹೊಡೆತಕ್ಕೆ ರಾಗಿ ಕಾಳು ಉದುರಿ, ಭೂಮಿ ಸೇರುತ್ತಿದೆ.
ಆಗಸ್ಟ್ ಕೊನೆಯ ವಾರದಲ್ಲಿ ಅಲ್ಪಾವಧಿ ರಾಗಿ ಬಿತ್ತನೆಯಾಗಿದ್ದು, ಕಳೆದ ತಿಂಗಳ ಮಳೆಯಿಂದ ಉತ್ತಮ ರೀತಿಯಲ್ಲಿ ಕಾಳು ಕಟ್ಟಿ, ಪೈರು ಎತ್ತರಕ್ಕೆ ಬೆಳೆದಿತ್ತು. ಆದರೆ, ಈಗ ಸುರಿದ ಮಳೆಯಿಂದ ಹೊಲದಲ್ಲಿ ಫಸಲೆಲ್ಲ ಮಲಗಿದೆ. ಕೆರೆಗಳು ತುಂಬಿರುವ ಕೆಲವು ಕಡೆ ಗದ್ದೆ, ಹೊಲದಲ್ಲಿ ನೀರು ನಿಂತು, ರಾಗಿ ಕೊಳೆಯುತ್ತಿದೆ.
ಈಗಾಗಲೇ ಮಳೆಯಿಂದ ರಾಗಿ ಕಾಳು ಭೂಮಿಗೆ ಉದುರಿದೆ. ಮುಂದಿನ ದಿನಗಳಲ್ಲಿ ಮೊಳಕೆ ಬರುತ್ತದೆ. ಮಳೆ ಮುಂದುವರಿದರೆ ಫಸಲು ಸಿಗುವುದಿಲ್ಲ. ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಹೋಬಳಿಯ ರೈತರು.
ಈಗಾಗಲೇ ರಾಗಿ ಬಿತ್ತನೆ ಸೇರಿದಂತೆ ಸಾಕಷ್ಟು ಖರ್ಚು ಮಾಡಲಾಗಿದೆ. ಈಗ ಮಳೆಯಿಂದಾಗಿ ರಾಗಿ ಕೈಗೆ ಸಿಗದಂತಾಗಿದೆ. ಹಾಕಿದ ಹಣವೂ ಸಿಗದ ಆತಂಕ ಎದುರಾಗಿದೆ ಎನ್ನುತ್ತಾರೆ ರೈತರು.
ಕಾಳು ಕಟ್ಟಿದ ರಾಗಿ ಪೈರು ನೆಲ ಕಚ್ಚಿದೆ. ಕೈ ಅಥವಾ ಯಂತ್ರಗಳ ಮೂಲಕ ಕಟಾವು ಮಾಡಿಸಲು ಕಷ್ಟವಾಗುತ್ತದೆ. ಖರ್ಚು ಹೆಚ್ಚಾಗುತ್ತದೆ.–ಗೋವಿಂದರಾಜು, ಹೊಸಹಳ್ಳಿ ಗ್ರಾಮದ ರೈತ
ಹೋಬಳಿಯ 3900 ಹೆಕ್ಟೇರ್‌ನಲ್ಲಿ ರಾಗಿ ಮತ್ತು 300 ಹೆಕ್ಟೇರ್ ಜಮೀನಿನಲ್ಲಿ ಜೋಳವನ್ನು ರೈತರು ಬಿತ್ತನೆ ಮಾಡಿದ್ದಾರೆ.–ಜಾನ್ ತಾಜ್, ರೈತ ಸಂಪರ್ಕ ಕೇಂದ್ರದ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.