ಹಾಸನ: ‘ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ, ತಮ್ಮ ಸಂಪುಟದಲ್ಲಿ ಸಿ.ಎಂ. ಇಬ್ರಾಹಿಂ ಅವರನ್ನು ವಿಮಾನಯಾನ ಸಚಿವರನ್ನಾಗಿ ನೇಮಿಸಿದ್ದರು. ಆಗ ಯಾರ ಮನೆ ಉದ್ಧಾರವಾಗಿತ್ತು’ ಎಂದು ಶಾಸಕ ಎ.ಮಂಜು ಪ್ರಶ್ನಿಸಿದರು.
‘ಮಗನನ್ನು ಬೆಳೆಸಲು ದೇವೇಗೌಡರು ನನ್ನ ಮನೆ ಹಾಳು ಮಾಡಿದರು’ ಎಂಬ ಇಬ್ರಾಹಿಂ ಅವರ ಆರೋಪಕ್ಕೆ ಅವರು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಈ ರೀತಿ ಪ್ರತಿಕ್ರಿಯಿಸಿದರು.
‘ರಾಜಕೀಯದಲ್ಲಿ ಯಾರೂ ಶತ್ರುವಲ್ಲ, ಮಿತ್ರರೂ ಅಲ್ಲ. ಹೊಂದಾಣಿಕೆ ರಾಜಕೀಯ ಇಂದು ನಿನ್ನೆಯದಲ್ಲ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಜೆಡಿಎಸ್ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬರುತ್ತಿದೆ. ದೇಶದ ಹಿತದೃಷ್ಟಿಯಿಂದ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ’ ಎಂದರು.
‘ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕೆ ಜೆಡಿಎಸ್ ತನ್ನ ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿ ವರ್ತಿಸುವುದಿಲ್ಲ. ಪಕ್ಷದ ಸಂಘಟನೆ ಹಾಗೂ ಶಕ್ತಿ ಹೆಚ್ಚಿಸಲೆಂದೇ ಅಧ್ಯಕ್ಷರನ್ನು ಬದಲಾಯಿಸಲಾಗಿದೆ’ ಎಂದರು.
‘ಮೈತ್ರಿ ಸಂಬಂಧ ನಡೆದಿರುವ ಮೂರು ಸಭೆಗಳಲ್ಲೂ ಇಬ್ರಾಹಿಂ ಭಾಷಣವನ್ನೂ ಮಾಡಿದ್ದರು. ಬಳಿಕ ಕುಳಿತು ಮಾತನಾಡುವ ಬದಲು, ಪಕ್ಷ ವಿರೋಧಿಯಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.