ADVERTISEMENT

ಲೋಕಸಭೆ ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಹರಿದಾಡಿದ ಆಡಿಯೊ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 1:05 IST
Last Updated 18 ಅಕ್ಟೋಬರ್ 2024, 1:05 IST
<div class="paragraphs"><p>ಆಡಿಯೊ</p></div>

ಆಡಿಯೊ

   

ಹಾಸನ: ‘ಸಿಎಂ, ಡಿಸಿಎಂ ಸೂಚನೆಯಂತೆ ಹಣ ಹಂಚಬೇಕು. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ₹5 ಕೋಟಿ ಕೊಡುತ್ತಾರೆ. ಮಾಜಿ ಎಂಎಲ್​ಸಿ ಗೋಪಾಲಸ್ವಾಮಿ ₹1 ಕೋಟಿ, ನಾನು ₹ 1 ಕೋಟಿ ಕೊಡುತ್ತೇನೆ. ಒಟ್ಟು ₹7 ಕೋಟಿ ಹಂಚಿಕೆಯಾಗಬೇಕು’ – ಜಿಲ್ಲೆಯ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರದ್ದು ಎನ್ನಲಾದ ಈ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಗುರುವಾರ ಹರಿದಾಡಿತ್ತು. ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಹಂಚಿಕೆ ಮಾಡಿರುವ ಬಗ್ಗೆ 17 ನಿಮಿಷ 16 ಸೆಕೆಂಡ್‌ನ ಆಡಿಯೋದಲ್ಲಿ ಪ್ರಸ್ತಾಪವಾಗಿದೆ.

‘ಪ್ರತಿ ವೋಟಿಗೆ ₹500 ಕೊಡಬೇಕು. ಶೇ 68 ರಿಂದ ಶೇ 70 ರಷ್ಟು ಜನರಿಗೆ ಹಣ ಕೊಡಿ. ಯಾರು ನಮಗೆ ವೋಟು ಹಾಕುತ್ತಾರೆ ಎಂಬುದು ಗೊತ್ತಿರುತ್ತೆ. ಅವರಿಗೆ ಕೊಡಿ. ಪ್ರತಿಪಕ್ಷದವರು ಶೇ 30 ಮತ ತೆಗೆದುಕೊಳ್ತಾರೆ, ಅವರಿಗೆ ಮತ ಹಾಕುವವರಿಗೆ ಕೊಡೋದು ಬೇಡ. ಸಿಎಂ, ಡಿಸಿಎಂ, ಉಸ್ತುವಾರಿ ಅವರೇ ತೀರ್ಮಾನ ಮಾಡಿದ್ದಾರೆ. ಅದರಂತೆ ಹಂಚಲಿ’ ಎಂದು ಶಿವಲಿಂಗೇಗೌಡ ಹೇಳಿರುವುದು ಅಡಿಯೊದಲ್ಲಿದೆ.

ADVERTISEMENT

ಮಾಜಿ ಸಚಿವ ಬಿ. ಶಿವರಾಂ ಬಗ್ಗೆಯೂ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿರುವುದು ಆಡಿಯೊದಲ್ಲಿದೆ. ‘500 ಹಂಚಬೇಕೆಂದು ತೀರ್ಮಾನವಾಗಿದೆ. ಅಷ್ಟು ಹಂಚದಿದ್ದರೆ ಚೆನ್ನಾಗಿರಲ್ಲ’ ಎಂಬ ಮಾತು ಅಡಿಯೊದಲ್ಲಿದೆ.

ಪೆನ್ ಡ್ರೈವ್ ಪ್ರಕರಣ ಹಾಗೂ ಅಶ್ಲೀಲ ವಿಡಿಯೊ ಬಗ್ಗೆಯೂ ಮಾತು ಸಾಗಿದೆ. ‘ಇಂತಹ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ವಿಡಿಯೋ ಲೀಕ್ ಆದ ನಂತರ ಕುಮಾರಸ್ವಾಮಿ ಅವರೇ ಪ್ರಚಾರಕ್ಕೆ ಬರಲಿಲ್ಲ. ದೇವೇಗೌಡರು ಅಂತಹ ವಯಸ್ಸಲ್ಲಿ ಬಂದು ಪ್ರಚಾರ ಮಾಡಬೇಕಾ? ಬೇರೆ ಯಾರೂ ಇರಲಿಲ್ಲವೇ? ಬಿಜೆಪಿ ನಾಯಕರು ಕೆಲಸ ಮಾಡುತ್ತಿಲ್ಲ’ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

‘ಬೇಲೂರು ಶಾಸಕ ಸುರೇಶ್ ಕೆಲಸ ಮಾಡುತ್ತಿಲ್ಲ. ಬೇಲೂರಿನಲ್ಲಿ ಶಿವರಾಂ ಸರಿಯಾಗಿ ಪ್ರಚಾರ ಮಾಡುತ್ತಿಲ್ಲ. ಶಿವರಾಂ ಬಂದ ನಂತರ ರೌಡಿಗಳು ಚಿಗುರಿಕೊಂಡಿದ್ದಾರೆ. ಹಿಂದೆ‌ ಬೇಲೂರಿನಲ್ಲಿ ರುದ್ರೇಶ್‌ಗೌಡ ಇದ್ದಾಗ ಅವರನ್ನು ದೂರ ಇಟ್ಟಿದ್ದರು. ರೌಡಿಗಳನ್ನು ಜೊತೆಯಲ್ಲಿಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಹೀಗಾದ್ರೆ ಯಾರು ಓಟು ಹಾಕುತ್ತಾರೆ’ ಎಂದು ಶಿವಲಿಂಗೇಗೌಡ ಮಾತನಾಡಿದ್ದಾರೆ. ಆಡಿಯೊದಲ್ಲಿ ಕೆಲವು ಬೆಂಬಲಿಗರೊಂದಿಗೆ ಅವರು ಚರ್ಚಿಸಿರುವುದು ಕೇಳಿ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.