ADVERTISEMENT

Muda Scam |ಕಾಂಗ್ರೆಸ್ಸಿಗರಿಂದಲೇ ಷಡ್ಯಂತ್ರ; ತಳ್ಳಿ ಹಾಕುವಂತಿಲ್ಲ: ಸಚಿವ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 14:35 IST
Last Updated 30 ಸೆಪ್ಟೆಂಬರ್ 2024, 14:35 IST
ಹಾಸನ ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಸೋಮವಾರ ಬಾಗಿನ ಅರ್ಪಿಸಿದರು. ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಶಾಸಕ ಸಿಮೆಂಟ್‌ ಮಂಜು, ಸಂಸದ ಶ್ರೇಯಸ್ ಪಟೇಲ್‌ ಪಾಲ್ಗೊಂಡಿದ್ದರು
ಹಾಸನ ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಸೋಮವಾರ ಬಾಗಿನ ಅರ್ಪಿಸಿದರು. ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಶಾಸಕ ಸಿಮೆಂಟ್‌ ಮಂಜು, ಸಂಸದ ಶ್ರೇಯಸ್ ಪಟೇಲ್‌ ಪಾಲ್ಗೊಂಡಿದ್ದರು   

ಹಾಸನ: ‘ಮುಡಾಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಮ್ಮ ಪಕ್ಷದವರು ಕೊಟ್ಟಿದ್ದಾರೋ, ಅವರ ಪಕ್ಷದವರು ಕೊಟ್ಟಿದ್ದಾರೋ ನಮಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ. ಕೊಡುವಂಥದ್ದು, ತೆಗೆದುಕೊಳ್ಳುವಂಥದ್ದು ಏನೂ ಇರಲ್ಲ. ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತವೆ ಎನ್ನುವುದನ್ನು ನಾವು ತಳ್ಳಿ ಹಾಕುವಂತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

‘ಮುಡಾ ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್‌ನವರು’ ಎಂಬ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ತಾಲ್ಲೂಕಿನ ಗೊರೂರಿನಲ್ಲಿ ಸೋಮವಾರ ಪ್ರತಿಕ್ರಿಯಿಸಿ, ‘ಬಿಜೆಪಿಯಲ್ಲಿ ಷಡ್ಯಂತ್ರ ನಡೆಯಲ್ಲ ಎಂದು ಹೇಳುವುದಕ್ಕೂ ಆಗಲ್ಲ. ರಾಜಕಾರಣದಲ್ಲಿ ಇವೆಲ್ಲ ಇದ್ದದ್ದೆ. ಅಧಿಕಾರ ಪಡೆಯಲು ಎಲ್ಲ ಪಕ್ಷದವರು ಪ್ರಯತ್ನಿಸುತ್ತಾರೆ. ತಪ್ಪೇನಿಲ್ಲ’ ಎಂದರು.

‘ಸಿಬಿಐ ತನಿಖೆಗೆ ಅಧಿಕಾರ ಮೊಟಕುಗೊಳಿಸುವುದು ಇದೇ ಮೊದಲಲ್ಲ. ಎಲ್ಲ ಪಕ್ಷಗಳ ಅಧಿಕಾರಾವಧಿಯಲ್ಲೂ ನಡೆದಿದೆ. ಅಗತ್ಯ ಬಿದ್ದರೆ ಮುಂದೆ ಮತ್ತೆ ತನಿಖೆ ಮಾಡಲು ಅವಕಾಶ ಕೊಡಬಹುದು. ಬಿಜೆಪಿ ಅಧಿಕಾರದಲ್ಲಿರುವ ಎಷ್ಟೋ ಕಡೆ ಇಂಥ ಪ್ರಕ್ರಿಯೆ ನಡೆದಿದೆ. ಇಲ್ಲಿ ಮಾಡಿದರೆ ಮಾತ್ರ ದೊಡ್ಡದು ಎಂದು ಪ್ರಧಾನಿ ಮೋದಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಮಹಾ ತಪ್ಪು ಮಾಡಿದ್ದಾರೆ ಎಂದು ಹರಿಯಾಣ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಂಬಿಸಿರುವುದು ಸರಿಯಲ್ಲ’ ಎಂದರು.

ADVERTISEMENT

‘ಜಾತಿಗಣತಿ ವರದಿ ಜಾರಿ ಕುರಿತು ಮುಖ್ಯಮಂತ್ರಿ ಹೇಳಿಕೆಗೆ ನಾವು ಭಿನ್ನ ಅಭಿಪ್ರಾಯ ಹೇಳುವುದಿಲ್ಲ. ಸಂಪುಟದ ಮುಂದೆ ತಂದು ಒಪ್ಪಬಹುದು ಅಂದುಕೊಂಡಿದ್ದೇನೆ. ಇನ್ನೂ ವಿಳಂಬ ಆಗದಂತೆ ನಿರ್ಣಯಿಸುತ್ತಾರೆ’ ಎಂದರು.

‘ಐಪಿಎಸ್ ಅಧಿಕಾರಿ ಚಂದ್ರಶೇಖರ್‌ ರಾವ್‌ ಅವರು ಜಾರ್ಜ್‌ ಬರ್ನಾಡ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆಯೇ ಹೊರತು, ಕುಮಾರಸ್ವಾಮಿ ಅವರಿಗೆ ಹೇಳಿಲ್ಲ. ಯಾವುದಕ್ಕೂ ಹೆದರದೇ ನಿಷ್ಪಕ್ಷಪಾತ ತನಿಖೆ ಮಾಡಿ ಎಂದು ತಮ್ಮ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.