ಹಾಸನ: ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಮಲೆನಾಡಿನ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ, ಅಡಿಕೆ ತೋಟಗಳು ಅಕ್ಷರಶಃ ಜಲಾವೃತವಾಗಿವೆ. ಫಸಲಿಗೆ ಬಂದಿದ್ದ ಮೆಕ್ಕೆಜೋಳ ಮಳೆ, ಗಾಳಿಯ ರಭಸಕ್ಕೆ ನೆಲಕಚ್ಚಿದೆ. ಒಂದೆಡೆ ಭತ್ತದ ಗದ್ದೆಗೆ ನೀರು ತುಂಬಿಕೊಂಡಿದ್ದರೆ, ಮತ್ತೊಂದೆಡೆ ನಾಟಿ ಮಾಡಿದ್ದ ಭತ್ತ ಕೊಚ್ಚಿ ಹೋಗಿದೆ.
ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡು ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಏಲಕ್ಕಿ, ಮೆಣಸು ನಾಶಗೊಂಡಿವೆ. ಹಲವೆಡೆ ಭಾರಿ ಗಾತ್ರದ ಮರಗಳು ಮನೆ ಹಾಗೂ ರಸ್ತೆ ಮೇಲೆ ಬಿದ್ದು ಹಾನಿಯಾಗಿದೆ. ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡು, ವಿದ್ಯುತ್ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ಹೊಗೆಸೊಪ್ಪು ಬೆಳೆ ನೀರಿನಲ್ಲಿ ಮುಳುಗಿ ಕೊಳೆಯುತ್ತಿದೆ. ಕಟಾವಿನ ಹಂತಕ್ಕೆ ಬಂದಿದ್ದ ಗಿಡಗಳು ಪ್ರವಾಹಕ್ಕೆ ಸಿಲುಕಿ ಅಪಾರ ಪ್ರಮಾಣದಲ್ಲಿ ನಷ್ಟಕ್ಕೀಡಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಆಲೂರು, ಅರಕಲಗೂಡು, ಬೇಲೂರು, ಸಕಲೇಶಪುರ ತಾಲ್ಲೂಕಿನ ಜನರು ಧಾರಕಾರ ಮಳೆಯಿಂದ ಅತಿವೃಷ್ಟಿಗೆ ಸಿಲುಕಿದ್ದರೆ ಅರಸೀಕೆರೆ ತಾಲ್ಲೂಕಿನಲ್ಲಿ ಬರ ಎದುರಾಗಿದೆ. ಬಯಲು ಸೀಮೆ ಪ್ರದೇಶದಲ್ಲಿ ಮಳೆ ಇಲ್ಲವಾಗಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಈ ಎರಡೂ ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಪರದಾಟ ಮುಂದುವರಿದಿದೆ.
‘ಐದು ಎಕರೆ ಮೆಕ್ಕೆಜೋಳ ಫಸಲು ನೆಲಕಚ್ಚಿದೆ. ಗೊಬ್ಬರ, ಬೀಜ, ಕೂಲಿ ಕೆಲಸಕ್ಕಾಗಿ ₹5 ಲಕ್ಷ ಖರ್ಚು ಮಾಡಿದ್ದೇನೆ. ಬೆಳೆ ಕಳೆದುಕೊಂಡುಜೀವನ ನಡೆಸುವುದು ಕಷ್ಟವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸರ್ವೆ ನಡೆಸಿ, ಸರ್ಕಾರಕ್ಕೆ ವರದಿ ಕೊಡಬೇಕು. ಕನಿಷ್ಠ ಎಕರೆಗೆ ₹ 25 ಸಾವಿರ ಪರಿಹಾರ ನೀಡಬೇಕು’ಎಂದು ರೈತ ಪಿ.ಡಿ.ನಂಜೇಗೌಡ ಆಗ್ರಹಿಸಿದರು.
‘ಮೂರು ವರ್ಷದಿಂದ ಸತತ ಮಳೆಯಿಂದ ಕಾಫಿ, ಅಡಿಕೆ, ಮೆಣಸು, ಏಲಕ್ಕಿ, ಭತ್ತ, ಶುಂಠಿ ಹಾಳಾಗುತ್ತಿದೆ. ಭಾರಿ ಗಾಳಿ, ಮಳೆಗೆ ಫಸಲು ನೆಲಕಚ್ಚುತ್ತಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಬೇಸಿಗೆಯಲ್ಲಿ ಬೆಳೆದ ಬೆಳೆಗೂ ಮಾರುಕಟ್ಟೆ ಸಿಗದೆ ರೈತರು ನಷ್ಟ ಅನುಭವಿಸಬೇಕಾಯಿತು. ಈಗ ಅತಿವೃಷ್ಟಿಗೆ ಸಕಲೇಶಪುರ ತಾಲ್ಲೂಕಿನಲ್ಲಿ ಶೇಕಡಾ 75ರಷ್ಟು ಭತ್ತದ ಗದ್ದೆ ಜಲಾವೃತಗೊಂಡಿದೆ. ಶೇಕಡಾ 60ರಷ್ಟು ಕಾಫಿ, ಕಾಳು ಮೆಣಸು, ಏಲಕ್ಕಿ ಹಾಳಾಗಿದೆ. ಎಕರೆಗೆ ₹30 ರಿಂದ ₹ 40 ಸಾವಿರ ಪರಿಹಾರ ನೀಡಬೇಕು’ ಎಂದು ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಜೆ.ಸಚಿನ್ ಸರ್ಕಾರಕ್ಕೆ ಮನವಿ ಮಾಡಿದರು.
ತಗ್ಗಿದ ಮಳೆ ಅಬ್ಬರ:ಜಿಲ್ಲೆಯಲ್ಲಿ ಶನಿವಾರ ಮಳೆ ಅಬ್ಬರ ಕೊಂಚ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಶುಕ್ರವಾರ ರಾತ್ರಿಯಿಂದ ಗಾಳಿ ಹಾಗೂ ಮಳೆ ತೀವ್ರತೆ ತಗ್ಗಿರುವುದರಿಂದ ಜನರು ನಿಟ್ಟಿಸಿರು ಬಿಡುವಂತಾಗಿದೆ. ಆದರೆ, ಸಕಲೇಶಪುರ, ಬೇಲೂರು, ಆಲೂರು ಭಾಗದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಆತಂಕ ಮುಂದುವರಿದಿದೆ.
ಸಕಲೇಶಪುರ ತಾಲ್ಲೂಕಿನ ಹಲವೆಡೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಳೆ ಅಬ್ಬರಕ್ಕೆ ತಾಲ್ಲೂಕಿನ ಮಠಸಾಗರ ವ್ಯಾಪ್ತಿ, ಹಾನುಬಳು, ಹೆತ್ತೂರು ಹೋಬಳಿಯಲ್ಲಿ ಕಾಫಿ, ಬಾಳೆ, ಅಡಿಕೆ ತೋಟಗಳು ನೀರಿನಲ್ಲಿ ಮುಳುಗಿವೆ.
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೆಳೆ ನಾಶವಾಗಿದ್ದು, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾಫಿ ತೋಟದಲ್ಲಿ ಮರಗಳು ಮುರಿದು ಬಿದ್ದು ಬೆಳೆ ನಷ್ಟವಾಗಿದೆ. ಸಂಕೇನಹಳ್ಳಿಯಲ್ಲಿ ಮೆಕ್ಕೆಜೋಳದ ಫಸಲು ನೆಲಕಚ್ಚಿದೆ.
ಮೂಡಿಗೆರೆ ಭಾಗದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳ ಹರಿವು ಏರಿಕೆ ಆಗಿದೆ. 2,922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 2015.67 ಅಡಿ ನೀರು ಸಂಗಹ್ರವಾಗಿದ್ದು, ಭರ್ತಿಗೆ ಕೇವಲ ಆರು ಅಡಿ ಬಾಕಿ ಇದೆ. ಒಳ ಹರಿವು 50,036 ಕ್ಯುಸೆಕ್ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ, ನಾಲೆಗೆ ಶುಕ್ರವಾರ ರಾತ್ರಿಯಿಂದಲೇ 20 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಜಲಾನಯನ ಭಾಗದಲ್ಲಿ ಮಳೆ ತಗ್ಗಿದ್ದರಿಂದ ಹೊರ ಹರಿವು 11,560 ಕ್ಯುಸೆಕ್ ಗೆ ಇಳಿಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.