ಚನ್ನರಾಯಪಟ್ಟಣ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ 73ನೇ ಗಣಪತಿ ಮಹೋತ್ಸವದಲ್ಲಿ ಮುಸ್ಲಿಂ ಮುಖಂಡರು ಭಾಗವಹಿಸಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಭಾವೈಕ್ಯ ಮೆರೆದರು.
ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಮುಖಂಡ ಅಬ್ದುಲ್ ರಬ್ಬಿ ಕುಟುಂಬದವರು ಸೋಮವಾರ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಿದರು. ಸ್ವತಃ ತಾವೇ ಭಕ್ತಾದಿಗಳಿಗೆ ಊಟ ಬಡಿಸಿದರು. ಮುಖಂಡರು ಪೂಜೆಯಲ್ಲಿ ಭಾಗವಹಿಸಿದ್ದರು.
‘ಕಳೆದ ವರ್ಷ ಮುಸ್ಲಿಮರು ಅನ್ನಸಂತರ್ಪಣೆ ಮಾಡಿದ್ದರು. ಈ ವರ್ಷವೂ ಮುಂದುವರಿದಿದೆ. ಮುಂದಿನ ವಾರದಲ್ಲಿ ಇನ್ನೂ ಎರಡು ದಿನ ಮುಸ್ಲಿಮರು ದಾಸೋಹ ನೆರವೇರಿಸುವರು. ಇದು ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್. ಅಶೋಕ್ ತಿಳಿಸಿದರು.
ಕಾರ್ಯದರ್ಶಿ ಸಿ.ವೈ. ಸತ್ಯನಾರಾಯಣ್, ನಿರ್ದೇಶಕ ಸಿ.ಎನ್. ವೆಂಕಟೇಶ್, ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.