ಆಲೂರು: ನಂಜುಂಡಪ್ಪ ವರದಿಯಲ್ಲಿ ಸರಿಯಾದ ಮಾನದಂಡ ಅಳವಡಿಸದಿರುವುದರಿಂದ ಹಿಂದುಳಿದ ತಾಲ್ಲೂಕುಗಳಿಗೆ ಅನ್ಯಾಯವಾಗಿದೆ. ಬೇರೆ ಆಯೋಗವನ್ನು ರಚಿಸಿ ವರದಿ ತಯಾರಿಸಲು ಸರ್ಕಾರ ಮುಂದಾಗಬೇಕು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕು ಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಆಲೂರು, ಸಕಲೇಶಪುರ ತಾಲ್ಲೂಕುಗಳು ಶೈಕ್ಷಣಿಕವಾಗಿ, ಭೌಗೋಳಿಕವಾಗಿ ಹಿಂದುಳಿದಿದ್ದರೂ ಅಭಿವೃದ್ಧಿ ಹೊಂದಿದ ಪಟ್ಟಿಯಲ್ಲಿರುವುದು ಜಿಜ್ಞಾಸೆಯನ್ನು ಮೂಡಿಸಿದೆ. ಕಾಲ ಬದಲಾದಂತೆ ಸಾಹಿತ್ಯ ಕ್ಷೇತ್ರದಲ್ಲೂ ಬದಲಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಮೊದಲು ಗ್ರಾಮೀಣ ಜನರಲ್ಲಿ ಸಾಹಿತ್ಯ ಮನೆ ಮಾತಾಗಿತ್ತು. ಆದರೆ ಇತ್ತೀಚೆಗೆ ಅದು ಮರೆಯಾಗಿ ಹೋಗುತ್ತಿದೆ. ಆಧುನಿಕತೆ, ಅಭಿವೃದ್ಧಿ ಹೆಸರಿನಲ್ಲಿ ಗಟ್ಟಿ ಸಾಹಿತ್ಯ ರೂಪಗೊಳ್ಳದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಹೋಬಳಿ ಘಟಕದ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ ಬೆಂಗಳೂರಿನಲ್ಲಿ ನೆಲೆಸಿರುವ ಸ್ಥಳೀಯ ಸಾಹಿತಿ ಕೆಂಪೇಗೌಡರ ಚರಿತ್ರೆಯನ್ನು ಪ್ರಕಟಿಸಿರುವುದು ಶ್ಲಾಘನೀಯ. ಸಾಹಿತ್ಯ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಯುವಜನತೆ ಪ್ರಯತ್ನಿಸಬೇಕಾಗಿದೆ ಎಂದು ತಿಳಿಸಿದರು.
ಪಾಳ್ಯ ಪಿಡಿಒ ರಂಗನಾಥ್, ರಾಷ್ಟ್ರಧ್ವಜ, ಕಸಾಪ ಪಾಳ್ಯ ಹೋಬಳಿ ಘಟಕದ ಅಧ್ಯಕ್ಷ ಕೆ.ಎಸ್ ಮಂಜೇಗೌಡ ನಾಡಧ್ವಜ ಮತ್ತು ಕಸಾಪ ಧ್ವಜವನ್ನು ತಾಲ್ಲೂಕು ಘಟಕದ ಅಧ್ಯಕ್ಷ ಗಂಗರ ಶ್ರೀಕಾಂತ್ ನೆರವೇರಿಸಿದರು.
ಬೆಳ್ಳಿ ಮಾದರಿ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷ ಪರಮೇಶ್ ಮಡಬಲು ಅವರನ್ನೊಳಗೊಂಡಂತೆ ತಾಲ್ಲೂಕು ಘಟಕದ ಅಧ್ಯಕ್ಷ ಗಂಗರ ಶ್ರೀಕಾಂತ್, ಹೋಬಳಿ ಘಟಕದ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ವಾದ್ಯವೃಂದ, ಕಂಸಾಳೆ ಹಾಘೂ ಹಲವು ಕಲಾ ತಂಡಗಳು ನೃತ್ಯ ತಂಡಗಳು ಮೆರವಣಿಗೆಗೆ ಮೆರುಗು ತಂದವು.
ಕ.ಸಾ.ಪ ಜಿಲ್ಲಾ ಘಟಕದ ಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜನೆ ಮಾಡುವುದರ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಇಂದಿನ ಜನತೆಗೆ ಪರಿಚಯಿಸುತ್ತಿರುವುದು ಉತ್ತಮ ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಕಸಾಪ ಜಿಲ್ಲಾ ಘಟಕದ ಗೌರವಾಧ್ಯಕ್ಷ ರವಿ ನಾಕಲಗೂಡು, ಇಲ್ಲಿ ಆಯೋಜಿಸಿರುವ ಸಮ್ಮೇಳನ ಜಿಲ್ಲಾಮಟ್ಟದ ಸಮ್ಮೇಳನಕ್ಕಿಂತ ಸುಂದರವಾಗಿದೆ. ಗ್ರಾಮೀಣ ಭಾಗದ ಶಿಕ್ಷಕ ವೃತ್ತಿಯಲ್ಲಿರುವ ಸಾಹಿತಿಯನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ಪ್ರಶಂಸನೀಯ, ಶಿಕ್ಷಣ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ಕೆ ಶಾರದಾಂಬಾ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮದನಗೌಡ, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜ್ ನಾಕಲಗೂಡು, ಸಣ್ಣ ಪತ್ರಿಕೆಯ ರಾಜ್ಯಾಧ್ಯಕ್ಷ ಜಿ.ಆರ್. ಕೆಂಚೇಗೌಡ, ತಾ.ಪಂ ಸದಸ್ಯರಾದ ಸಿ.ವಿ ಲಿಂಗರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಂದೀಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲೇಶಪ್ಪ, ಬಿಇಒ ಹೊನ್ನೇಶ್ ಕುಮಾರ್, ಪಾಳ್ಯ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಶಿಕ್ಷಕರಾದ ವೇದಾವತಿ, ಶೋಭಾ, ಮಧುರ, ಸೋಮನಾಯಕ್, ಫಾತೀಮಾ ಬೇಗಂ, ಕದಾಳು ರಾಜಪ್ಪಗೌಡ, ಅಜ್ಜೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.