ADVERTISEMENT

ಸಕಲೇಶಪುರ | ಅವೈಜ್ಞಾನಿಕ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗಿಯದ ಆತಂಕ

ಜಾನೆಕೆರೆ ಆರ್‌.ಪರಮೇಶ್‌
Published 1 ಜುಲೈ 2024, 7:31 IST
Last Updated 1 ಜುಲೈ 2024, 7:31 IST
ಸಕಲೇಶಪುರ ಹೊರ ವರ್ತುಲದ ಬೆಂಗಳೂರು -ಮಂಗಳೂರು ಚತುಷ್ಪಥ ಹೆದ್ದಾರಿಯ ತಳಭಾಗದ ಮಣ್ಣು ಮಳೆ ನೀರಿನೊಂದಿಗೆ ಕೊಚ್ಚಿ ಹೋಗಿದೆ.
ಸಕಲೇಶಪುರ ಹೊರ ವರ್ತುಲದ ಬೆಂಗಳೂರು -ಮಂಗಳೂರು ಚತುಷ್ಪಥ ಹೆದ್ದಾರಿಯ ತಳಭಾಗದ ಮಣ್ಣು ಮಳೆ ನೀರಿನೊಂದಿಗೆ ಕೊಚ್ಚಿ ಹೋಗಿದೆ.   

ಸಕಲೇಶಪುರ (ಹಾಸನ): ತಾಲ್ಲೂಕಿನ ಬಾಳ್ಳುಪೇಟೆಯಿಂದ–ಮಾರನಹಳ್ಳಿವರೆಗಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75 ರಲ್ಲಿ ಪ್ರತಿ ಮಳೆಗಾಲದಲ್ಲೂ ಆತಂಕ ಸಾಮಾನ್ಯ ಎಂಬಂತಾಗಿದೆ.

ಹೆದ್ದಾರಿಯಲ್ಲಿ ರಸ್ತೆ ಕುಸಿತ, ಗುಡ್ಡ ಕುಸಿದು ರಸ್ತೆ ಮೇಲೆ ಬೀಳುವ ಸಾಧ್ಯತೆಗಳು ಹೆಚ್ಚಾಗಿದ್ದು, ವಾಹನಗಳ ಚಾಲಕರು ಹಾಗೂ ಪ್ರಯಾಣಿಕರು ಆತಂಕದಲ್ಲಿಯೇ ಸಂಚರಿಸುವಂತಾಗಿದೆ.

ತಾಲ್ಲೂಕಿನಲ್ಲಿ ಇನ್ನೂ ಮಳೆ ಸರಿಯಾಗಿ ಪ್ರಾರಂಭವೇ ಆಗಿಲ್ಲ. ಎರಡು ದಿನ ಸುರಿದ ಮಳೆಗೆ ಪಟ್ಟಣದ ಹೊರವರ್ತುಲ ರಸ್ತೆಯ ಹಲವೆಡೆ, ಮಳೆ ನೀರಿನೊಂದಿಗೆ ಮಣ್ಣು ಕೊಚ್ಚಿ ಹೋಗಿ ಕಾಂಕ್ರೀಟ್ ರಸ್ತೆಯ ತಳಭಾಗ ಕಾಣುತ್ತಿದೆ.

ADVERTISEMENT

ಬೈಪಾಸ್‌ನಿಂದ ಮಳಲಿ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕಿಸುವ ತಿರುವಿನಲ್ಲಿ ರಸ್ತೆಗೆ ಹಾಕಿರುವ ಮಣ್ಣು ಕೊಚ್ಚಿ ಹೋಗಿದೆ. ರಸ್ತೆಯ ಒಳಭಾಗದಲ್ಲೂ ಮಣ್ಣು ಕುಸಿಯುತ್ತಲೇ ಇದೆ. ‘ಈ ಜಾಗದಲ್ಲಿ ಭಾರೀ ವಾಹನಗಳು ಸಂಚರಿಸಿದರೆ, ಅಪಘಾತ ಸಂವಿಸುವ ಸಾಧ್ಯತೆಗಳು ದಟ್ಟವಾಗಿವೆ’ ಎನ್ನುತ್ತಾರೆ ಸ್ಥಳೀಯರು.

ಈ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಿಲ್ಲ. ಗೇಬಿಯನ್‌ ವಾಲ್‌ಗಳನ್ನು ಮಾಡಿ, ತರಾತುರಿಯಲ್ಲಿ ಮಣ್ಣು ಸುರಿದು,  ಕಾಂಕ್ರೀಟ್‌ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬುಲೆಟ್‌ ಟ್ಯಾಂಕರ್‌ಗಳು, 60 ರಿಂದ 70 ಟನ್ ಭಾರ ಹೊತ್ತ ವಾಹನಗಳು ಸೇರಿ ನಿತ್ಯ ಸಾವಿರಾರು ವಾಹನಗಳ ಸಂಚರಿಸುತ್ತಿವೆ. ರಸ್ತೆ ಕೊಚ್ಚಿ ಹೋಗುತ್ತಲೇ ಇದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ ಕರೆ ಸ್ವೀಕರಿಸಲಿಲ್ಲ.

ಬೆಂಗಳೂರು– ಮಂಗಳೂರು ಚತುಷ್ಟಥ ಹೆದ್ದಾರಿಯ ಸಕಲೇಶಪುರ ಹೊರ ವರ್ತುಲ ರಸ್ತೆಯ ಬದಿಯಲ್ಲಿ ಗೇಬಿಯನ್ ವಾಲ್‌ ಬಿರುಕು ಬಿಟ್ಟು ರಸ್ತೆಯೇ ಕುಸಿಯುವ ಹಂತದಲ್ಲಿದೆ.
ಕಳೆದ ವರ್ಷದ ತಡೆಗೋಡೆಗಳು ಕುಸಿದು ಸಮಸ್ಯೆ ಉಂಟಾಗಿತ್ತು. ಗೇಬಿಯನ್‌ ವಾಲ್‌ಗಳನ್ನು ಮಾಡಿರುವುದು ಅವೈಜ್ಞಾನಿಕ. ಇದು ಹೆದ್ದಾರಿ ಎಂಜಿನಿಯರ್‌ಗಳ ಉಡಾಫೆಗೆ ಸಾಕ್ಷಿಯಾಗಿದೆ.
ಎಚ್‌.ಎಂ. ವಿಶ್ವನಾಥ್ ಮಾಜಿ ಶಾಸಕ
ಒಂದೇ ಮಳೆಗೆ ಸಮಸ್ಯೆ ಉಂಟಾದರೆ ಮಳೆ ಮುಗಿಯುವುದರೊಳಗೆ ಏನೆಲ್ಲ ಅವಘಡ ಸಂಭವಿಸಬಹುದು? ಹೆದ್ದಾರಿ ಎಂಜಿನಿಯರ್‌ಗಳು ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಸಿಮೆಂಟ್ ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.