ಸಕಲೇಶಪುರ: ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆಂದು, ಮಳೆಯಲ್ಲೇ ಡಾಂಬರ್ ರಸ್ತೆ ಅಗೆದ ಪರಿಣಾಮ, ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೆಸರುಮಯವಾಗಿದ್ದು, ಮಂಗಳವಾರ ರಾತ್ರಿಯಿಂದಲೇ ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಬುಧವಾರ ಆನೇಮಹಲ್‌ನಿಂದ ಸಕಲೇಶಪುರ ಕಡೆ ಹಾಗೂ ಆನೇಮಹಲ್‌ನಿಂದ ದೋಣಿಗಾಲ್ ಕಡೆಗೆ 5–6 ಕಿ.ಮೀ.ಉದ್ದಕ್ಕೆ ಸಾವಿರಾರು ವಾಹನಗಳು ಗಂಟೆಗಟ್ಟಲೆ ನಿಂತಿದ್ದವು. ಹಾಸನದಿಂದ ಮಂಗಳೂರಿಗೆ ಹೋಗುತ್ತಿದ್ದ ಆಂಬುಲೆನ್ಸ್ ಕೂಡ ಮಾರ್ಗದ ಮಧ್ಯದಲ್ಲಿಯೇ ನಿಲ್ಲಬೇಕಾಯಿತು.
ಬುಧವಾರ ಬೆಳಿಗ್ಗೆ 9.30ಕ್ಕೆ ವಿದ್ಯಾರ್ಥಿಗಳು ಮಧ್ಯ ವಾರ್ಷಿಕ ಪರೀಕ್ಷೆಗೆ ಹಾಜರಾಗಬೇಕಾಗಿತ್ತು. ಆನೇಮಹಲ್‌ನಲ್ಲಿ ರಸ್ತೆ ಅವ್ಯವಸ್ಥೆಯಿಂದಾಗಿ ವಾಹನಗಳು ಮಾರ್ಗದ ಮಧ್ಯದಲ್ಲಿ ಸಾಲುಗಟ್ಟಿ ನಿಂತಿದ್ದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿತ್ತು. 9.30ಕ್ಕೆ ಶಾಲೆಗೆ ಹೋಗಬೇಕಾದ ಮಕ್ಕಳು, ಮಧ್ಯಾಹ್ನ 12 ಗಂಟೆಗೆ ತಲುಪಿದರು. ಅವ್ಯವಸ್ಥೆಯ ಬಗ್ಗೆ ಗೊತ್ತಿದ್ದರಿಂದ ತಡವಾಗಿ ಬಂದ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿ, ಪರೀಕ್ಷೆ ಬರೆಸಿದ್ದಾಗಿ ತಿಳಿದು ಬಂದಿದೆ.
ಹಾಸನ–ಮಾರನಹಳ್ಳಿ ನಡುವೆ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಆನೇಮಹಲ್ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನದಿಂದ ಹೆದ್ದಾರಿಯನ್ನು ದೊಡ್ಡ ಯಂತ್ರಗಳಿಂದ ಬಗೆಯಲಾಗಿತ್ತು. ಒಂದು ಬದಿಯಲ್ಲಿ ರಸ್ತೆ ನಿರ್ಮಿಸಿ, ಮತ್ತೊಂದು ಬದಿಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡದೆ, ಇಡೀ ರಸ್ತೆಯನ್ನೇ ಅಗೆದಿರುವುದರಿಂದ ಮಳೆ ನೀರು ಸೇರಿ ಸಮಸ್ಯೆ ಉಂಟಾಗಿದೆ.
‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿಯ ಗುತ್ತಿಗೆ ಪಡೆದಿರುವ ರಾಜ್‌ಕಮಲ್ ಬಿಲ್ಡರ್ಸ್‌ನವರ ಅವೈಜ್ಞಾನಿಕ ಕಾಮಗಾರಿಯೇ ಕಾರಣ’ ಎಂದು ವಾಹನ ಸವಾರರು ದೂರಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ತೊಂದರೆ ನೀಡಿದ ಎಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ ಎಸ್ಪಿಗೆ ಒತ್ತಾಯ ಮಾಡಿದ್ದೇನೆ.ಶಾಸಕ ಸಿಮೆಂಟ್ ಮಂಜು
ಮಲೆನಾಡು ಭಾಗಕ್ಕೆ ಯಾವ ಶಾಪವೋ ಗೊತ್ತಿಲ್ಲ ಚತುಷ್ಪಥ ಕಾಮಗಾರಿ 2017ರಿಂದ ಆರಂಭವಾಗಿದ್ದರೂ ಇನ್ನೂ ಶೇ.40 ಪೂರ್ಣಗೊಂಡಿಲ್ಲ.ಟಿ.ಪಿ.ಸುರೇಂದ್ರ ಕೆಸಗಾನಹಳ್ಳಿ ನಿವಾಸಿ
ಹೆದ್ದಾರಿಗೆ ಇಳಿದ ಶಾಸಕ ಹೆದ್ದಾರಿ ಅವ್ಯವಸ್ಥೆಯ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಹೊರಟರು. ಆದರೆ ದ್ವಿಚಕ್ರ ವಾಹನಗಳು ಮುಂದೆ ಹೋಗದಷ್ಟು ಸಂಚಾರ ದಟ್ಟಣೆಯಾಗಿದ್ದರಿಂದ ತೋಟದಗದ್ದೆಯಿಂದ ಆನೇಮಹಲ್‌ವರೆಗೆ 2 ಕಿ.ಮೀ. ನಡೆದುಕೊಂಡೇ ಸ್ಥಳಕ್ಕೆ ಧಾವಿಸಿದರು. ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರ ಕಂಪನಿಯ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳಿಗ್ಗೆ 7 ರಿಂದ ಮಧ್ಯಾಹ್ನ 1.30 ರ ವರೆಗೆ ಸ್ಥಳದಲ್ಲಿಯೇ ನಿಂತು ಟಿಪ್ಪರ್‌ಗಳಿಂದ ಜಲ್ಲಿ ಕಾಂಕ್ರೀಟ್ ಮಿಕ್ಸ್ ತರಿಸಿ ರಸ್ತೆಗೆ ಹಾಕಿಸಿದರೂ ವಾಹನಗಳ ಸಂಚಾರ ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.