ADVERTISEMENT

ನೆರೆ | ವಿಧಾನಸಭೆ ಅಧಿವೇಶನ ಕರೆಯಲಿ: ಸಿಎಂಗೆ ಶಾಸಕ ಎಚ್.ಡಿ.ರೇವಣ್ಣ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 13:36 IST
Last Updated 16 ಸೆಪ್ಟೆಂಬರ್ 2019, 13:36 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಯಾಗಿ, ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಸರ್ಕಾರ ಕೂಡಲೇ ಅಧಿವೇಶನ ಕರೆದು ಚರ್ಚೆ ನಡೆಸಬೇಕು’ ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

‘ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಜನರ ಬದುಕು ಬೀದಿಗೆ ಬಂದಿದೆ. ಪ್ರಧಾನಮಂತ್ರಿಯೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ. ಬಿಜೆಪಿಯವರು ರಾಜ್ಯದ ಜನರಿಗೆ ಸುಳ್ಳು ಹೇಳಿ 25 ಸ್ಥಾನ ಗೆದ್ದರು. ರಾಜ್ಯದ ನಾಯಕರೇ ಜನರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನೂ ಕೇಂದ್ರದ ನಾಯಕರು ತಲೆ ಕೆಡಿಸಿಕೊಳ್ಳುತ್ತಾರೆಯೇ’ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

‘ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಉಂಟಾಗಿ ಜನರು ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ಕೇವಲ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ಸತ್ತಿದೆಯೋ ಎಂಬ ರೀತಿಯಲ್ಲಿ ಕಾಣುತ್ತಿದೆ. ನರೇಂದ್ರ ಮೋದಿ ಅವರು ಪರ್ಸೆಂಟೇಜ್ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಈಗ ರಾಜ್ಯ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಎಷ್ಟು ಪರ್ಸೆಂಟೇಜ್‌ ಪಡೆದುಕೊಳ್ಳುತ್ತಿದೆ ಎಂಬುದನ್ನು ಹೇಳಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಂದು ಸಮಾಜವನ್ನು ಗುರಿಯಾಗಿಟ್ಟಕೊಂಡು ವರ್ಗಾವಣೆ ದಂಧೆ ನಡೆಯುತ್ತಿದೆ. ಹಲವು ಇಲಾಖೆಗಳ ಅಧಿಕಾರಿಗಳನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಒಂದೊಂದು ಹುದ್ದೆಗೆ ಇಂತಿಷ್ಟು ಹಣ ನಿಗದಿಪಡಿಸುವ ಮೂಲಕ ದಂಧೆ ನಡೆಸುತ್ತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲೆಯಲ್ಲಿ ಸುಮಾರು ₹ 500 ಕೋಟಿಗೂ ಅಧಿಕ ಪ್ರಮಾಣದಲ್ಲಿ ನಷ್ವ ಉಂಟಾಗಿದೆ. ಹೊಳೆನರಸೀಪುರ ತಾಲ್ಲೂಕಿನಲ್ಲಿಯೇ 1,200 ಎಕರೆ ಬೆಳೆ ನಾಶವಾಗಿದೆ. ಸಕಲೇಶಪುರದಲ್ಲಿ ಏಲಕ್ಕಿ, ಕಾಫಿ, ಮೆಣಸು ನಾಶವಾಗಿದೆ. ತೋಟಗಾರಿಕೆ ಬೆಳೆ ನಷ್ಟವಾಗಿರುವುದು ₹ 250 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ, ಇದುವರೆಗೂ ರಾಜ್ಯ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ತಕ್ಷಣ ವಿರೋಧ ಪಕ್ಷದ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ದು ಪರಿಹಾರ ಹಣ ಬಿಡುಗಡೆಗೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.

ರೈತರಿಗೆ ಪರಿಹಾರ ಹಣವನ್ನು ನೀಡದಿದ್ದರೆ ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ 25 ಲೋಕಸಭಾ ಸ್ಥಾನ ಗೆಲ್ಲಬೇಕಾದರೆ ಮೋದಿ ಮತ್ತು ಯಡಿಯೂರಪ್ಪ ಜನರಿಗೆ ಸುಳ್ಳು ಹೇಳಿದ್ದರು. ಈಗ 17 ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೋದಿ ರಾಜ್ಯಕ್ಕೆ ಬಂದು ಮತ್ತಷ್ಟು ಸುಳ್ಳು ಹೇಳುತ್ತಾರೆ ಎಂದು ಲೇವಡಿ ಮಾಡಿದರು.

ಮಧ್ಯಂತರ ಚುನಾವಣೆ ತಯಾರಿ ಕುರಿತ ಪ್ರಶ್ನೆಗೆ, ‘ದೇವೇಗೌಡರು ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯಕರ್ತರ ಸಭೆ ನಡೆಸಿ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ನಾನು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಸಂಸದ ಪ್ರಜ್ವಲ್‌ ಅವರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸಂಘಟನೆ ಮಾಡುತ್ತಿದ್ದೇವೆ’ ಎಂದರು.

’ಹಾಸನದಲ್ಲಿ ಹವಾಯ್ ಚಪ್ಪಲಿ ಹಾಕಿಕೊಂಡು ಓಡಾಡುವವರು ಬೆಂಗಳೂರಿನಲ್ಲಿ ಸೂಟು, ಬೂಟು ಹಾಕಿಕೊಂಡು ತಿರುಗಾಡುತ್ತಾರೆ’ ಎಂದು ಹೆಸರುಪ್ರಸ್ತಾಪಿಸದೆ ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ವಿರುದ್ಧ ವಾಗ್ದಾಳಿ ನಡೆಸಿದರು.

ಹದಿನಾಲ್ಕು ತಿಂಗಳ ಕುಮಾರಸ್ವಾಮಿ ಸರ್ಕಾರದಲ್ಲಿ ₹ 46 ಸಾವಿರ ಕೋಟಿ ರೈತ ಸಾಲಮನ್ನಾ, ತೆಂಗು ಬೆಳೆಗಾರರಿಗೆ ಪರಿಹಾರ ಸೇರಿದಂತೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. ರೈತರು ಸಂಕಷ್ಟದಲ್ಲಿದ್ದರೂ ಯಡಿಯೂರಪ್ಪ ನೇತೃತ್ವದ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಸರ್ಕಾರದ ಬಳಿ ಹಣವಿಲ್ಲವೆಂದರೆ ದಿವಾಳಿಯಾಗಿದೆ ಎಂದು ಘೋಷಿಸಲಿ ಎಂದು ಒತ್ತಾಯಿಸಿದರು.

‌ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.