ಶ್ರವಣಬೆಳಗೊಳ: ವಿಂದ್ಯಗಿರಿಯ ಬಾಹುಬಲಿ ಮೂರ್ತಿ ಇರುವ ದೊಡ್ಡಬೆಟ್ಟ ಹಾಗೂ ಚಂದ್ರಗಿರಿ ಸುಂದರ ಬೆಟ್ಟಗಳ ನಡುವಿನ ಕಲ್ಯಾಣಿಯು ನೂತನ ತೆಪ್ಪದಲ್ಲಿ ಜಿನೋತ್ಸವದ ಆಚರಣೆಯ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.
ಚಿಕ್ಕದೇವರಾಜ ಒಡೆಯರ ಕಲ್ಯಾಣಿಯಲ್ಲಿ ವಾರ್ಷಿಕ ಪಂಚಕಲ್ಯಾಣ ಮಹಾ ರಥೋತ್ಸವದ ಪ್ರಯುಕ್ತ ಶಾಶ್ವತ ನೂತನ ತೆಪ್ಪವನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ಭಗವಾನ್ ನೇಮಿನಾಥ ತೀರ್ಥಂಕರ , ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಯನ್ನು ಪ್ರತಿಷ್ಠಾಪಿಸಿ, ಅಲಂಕರಿಸಿ ಲೈಾಬಹನ ತೆಪ್ಪೋತ್ಸವನಲಿಲಹ ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.
ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಲಹೆ, ಮಾರ್ಗದರ್ಶನದ ಮೇರೆಗೆ 20x20 ಅಡಿ ಅಳತೆಯ 250 ಲೀಟರ್ ಸಾಮರ್ಥ್ಯದ 60 ಡ್ರಂಗಳನ್ನು ತೆಪ್ಪಕ್ಕೆ ಹೊಂದಿಸಲಾಗಿದೆ. ಹಾಗೆಯೇ 750 ಕೆ.ಜಿ. ಕಬ್ಬಿಣದ ಸಲಾಕೆ ಪೈಪ್‌ಗಳನ್ನು ಹಾಗೂ 500 ಕೆ.ಜಿ. ಫ್ಲೈವುಡ್ ಒದಗಿಸಿ ಫ್ಲ್ಯಾಟ್ ಫಾರಂ ಅನ್ನು ವಾಸ್ತು ಪ್ರಕಾರ ನಿರ್ಮಿಸಲಾಗಿದೆ ಎಂದು ಅನಂತಪದ್ಮನಾಭ್ ತಿಳಿಸಿದರು.
ಸುಂದರ ಅಚ್ಚುಕಟ್ಟಿನ ತೆಪ್ಪದಲ್ಲಿ ಭಗವಾನ್ ನೇಮಿನಾಥ ಸ್ವಾಮಿಗೆ ಮತ್ತು ಕೂಷ್ಮಾಂಡಿನಿ ದೇವಿಗೂ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಿದ್ದು, ಕಲ್ಯಾಣಿಯ 3 ಸುತ್ತು ಮಂಗಲ ವಾದ್ಯಗಳೊಂದಿಗೆ ತೆಪ್ಪೋತ್ಸವವು ಸಡಗರದಿಂದ ನಡೆಯುತ್ತದೆ. ಈ ಕಲ್ಯಾಣಿಯು ಪಟ್ಟಣದ ಮಧ್ಯಭಾಗದಲ್ಲಿದ್ದು, ಒಳಗೆ ಬರುವ ಜನರಿಗೆ 3 ದ್ವಾರಗಳಿವೆ. ಪುಟ್ಟರಾಜು ಶರತ್ ಕುಮಾರ್ ತಂಡ ತೆಪ್ಪವನ್ನು ನಿರ್ವಹಿಸುತ್ತದೆ.
ಟ್ರಸ್ಟಿ ಮಂಡ್ಯಾದ ಶ್ರೇಯಾಂಸಕುಮಾರ್ ಮಾತನಾಡಿ, ‘ಉತ್ಸವ ಮೂರ್ತಿಗಳಿಗೆ ಪ್ರತ್ಯೇಕ ಅಂಕಣ, ಶ್ರೀಗಳಿಗೆ ಆಸನ, ಪುರೋಹಿತರಿಗೆ, ಸೇವಾ ಕರ್ತರಿಗೆ ಮತ್ತು ತೆಪ್ಪ ನಡೆಸುವವರಿಗೂ ನೂತನ ತೆಪ್ಪದಲ್ಲಿ ಸ್ಥಳಾವಕಾಶ ಒದಗಿಸಿರುವುದು ವಿಶೇಷ’ ಎಂದರು.
ಶ್ರವಣಬೆಳಗೊಳ ಹೆಸರಿನಲ್ಲಿ. ಶ್ರವಣ ಎಂದರೆ ಜೈನ ಸನ್ಯಾಸಿ, ಬೆಳಗೊಳ ಎಂದರೆ ಬಿಳಿಯ ಕೊಳ (ಕೆರೆ)ಎಂಬರ್ಥವಿದೆ.
ಕ್ರಿ.ಶ. 981ರ ಮಾರ್ಚ್ 13 ರಲ್ಲಿ ಬಾಹುಬಲಿ ಮೂರ್ತಿ ನಿರ್ಮಿಸಿದ್ದ ಚಾವುಂಡರಾಯನ ಗರ್ವದಿಂದ ಬಾಹುಬಲಿಯ ಪ್ರಥಮ ಮಹಾಮಸ್ತಕಾಭಿಷೇಕ ಅಪೂರ್ಣಗೊಂಡಾಗ, ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಯು ಗುಳ್ಳುಕಾಯಜ್ಜಿಯ ರೂಪದಲ್ಲಿ ಬಂದು ಚಿಕ್ಕ ಗುಳ್ಳದ ಕಾಯಿಯಲ್ಲಿ ಕ್ಷೀರಾಭಿಷೇಕ ಮಾಡಿದಳು. ಅದು ಅಕ್ಷಯವಾಗಿ ಬೆಟ್ಟದಿಂದ ಕೆಳಗಿಳಿದು ಅಲ್ಲಿದ್ದ ಕೊಳ ಸೇರಿದಾಗ ಬಿಳಿಕೊಳವಾಯಿತು.
ಶಾಸನಗಳಲ್ಲಿ ಇದನ್ನು ಧವಲ್ ಸರಸ್ (ಧವಲ ಸರೋವರ) ಎಂದು ಉಲ್ಲೇಖಿಸಲಾಗಿದೆ. ಕ್ರಿ.ಶ. 7ನೇ ಶತಮಾನದಿಂದ 19ನೇ ಶತಮಾನದವರೆಗಿನ ಶಾಸನಗಳಲ್ಲಿ ಬೆಳ್ಗೊಳ ಎಂಬ ಹೆಸರು ಬಳಕೆಯಾಗಿದ್ದು, ಕ್ರಿ.ಶ. 1672ರಿಂದ 1704ರವರೆಗೆ ಮೈಸೂರು ದೊರೆಗಳಾಗಿದ್ದ ಚಿಕ್ಕದೇವರಾಜ ಒಡೆಯರ್ ಈ ಕೆರೆಗೆ ಸುಂದರವಾದ ಸೋಪಾನ, ಕೋಟೆ, ಗೋಪುರ, ಪ್ರವೇಶ ದ್ವಾರಗಳನ್ನು ನಿರ್ಮಿಸಿ ಕಲ್ಯಾಣಿಯಾಗಿ ಪರಿವರ್ತಿಸಿದ್ದರು. ಬಳಿಕ ಇದು ‘ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ’ ಎಂದು ಕರೆಯಲಾಗುತ್ತಿದೆ.
ನವೀಕರಿಸಿದ ಮೈಸೂರಿನ ಒಡೆಯರು
ಕ್ರಿ.ಶ. 17ನೇ ಶತಮಾನದಲ್ಲಿ ಮೈಸೂರಿನ ಮಹಾರಾಜ ಚಿಕ್ಕದೇವರಾಜ ಒಡೆಯರ್ ಆಳ್ವಿಕೆಯಲ್ಲಿ ಜೀರ್ಣೋದ್ಧಾರ ಆಗಿದ್ದರಿಂದ ಈ ಕಲ್ಯಾಣಿಗೆ ಅವರ ಹೆಸರನ್ನೇ ಇಡಲಾಗಿದೆ. ಈ ಕಲ್ಯಾಣಿಯ ಉದ್ದಳತೆಯು ದಕ್ಷಿಣದಿಂದ ಉತ್ತರಕ್ಕೆ 117 ಮೀಟರ್, ಪೂರ್ವದಿಂದ ಪಶ್ಚಿಮಕ್ಕೆ 176 ಮೀಟರ್ ಇದ್ದು, ಆಳ 20 ಅಡಿ ಮತ್ತು 586 ಮೀಟರ್ ಸುತ್ತಳತೆ ಹೊಂದಿದೆ.
ಕಲ್ಯಾಣಿಯ ಪ್ರತಿ ದಿಕ್ಕಿನಲ್ಲಿಯೂ 27 ಕಲ್ಲಿನಿಂದ ಕೂಡಿದ ಮೆಟ್ಟಿಲುಗಳನ್ನು ಹೊಂದಿದೆ. ಇಂತಹ ನಯನ ಮನೋಹರ ಕಲ್ಯಾಣಿಗೆ ನೂತನವಾಗಿ ಸಿದ್ಧಪಡಿಸಿದ ಸುಸಜ್ಜಿತ ತೆಪ್ಪದ ಆಕರ್ಷಣೆಯ ಗರಿಮೆ. ಇದರ ಸೇವಾಕರ್ತರಾದ ಶ್ರವಣಬೆಳಗೊಳದ ಪದ್ಮಾವತಮ್ಮ ಕೆ.ಪಿ.ಧರಣಪ್ಪ ಸೇವಾ ಟ್ರಸ್ಟಿನ ಟ್ರಸ್ಟಿ ಕೆ.ಪಿ. ಅನಂತಪದ್ಮನಾಭ್.
ಕಲ್ಯಾಣಿಯಲ್ಲಿ ಉತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ವೀಕ್ಷಿಸಲು ಈ ಭಾಗದ ಎಲ್ಲಾ ಜನತೆ ಸಾಮೂಹಿಕವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ.ಅಭಿನವ ಚಾರುಕೀರ್ತಿ, ಶ್ರೀ,ಕ್ಷೇತ್ರದ ಪೀಠಾಧಿಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.