ADVERTISEMENT

ಹಾಸನ | ವಾರ ಕಳೆದರೂ ಮಾರಾಟವಾಗದ ಕೊಬ್ಬರಿ; ರೈತ ಅತಂತ್ರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 6:48 IST
Last Updated 8 ಜುಲೈ 2023, 6:48 IST
ಅರಸೀಕೆರೆ ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಬೀಡು ಬಿಟ್ಟಿರುವ ವಯೋವೃದ್ಧ ಮಹಿಳೆ.
ಅರಸೀಕೆರೆ ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಬೀಡು ಬಿಟ್ಟಿರುವ ವಯೋವೃದ್ಧ ಮಹಿಳೆ.   

ಜೆ. ಎನ್. ರಂಗನಾಥ್

ಅರಸೀಕೆರೆ: ಖಾಸಗಿ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಕೊಬ್ಬರಿ ಬೆಳೆಗಾರರು, ತಾವು ಬೆಳೆದ ಕೊಬ್ಬರಿಯನ್ನು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ತೆರೆದಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಬರುತ್ತಿದ್ದಾರೆ. ಆದರೆ, ನಾಫೆಡ್ ಕೇಂದ್ರದ ಅವ್ಯವಸ್ಥೆಯಿಂದ ಹರಸಾಹಸ ಮಾಡುವಂತಾಗಿದ್ದು, ಊಟ, ಕುಡಿಯುವ ನೀರು ಇಲ್ಲದೆ ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರ್ಚ್‌ನಲ್ಲಿ ಇಲ್ಲಿನ ಎಪಿಎಂಸಿ ಆವರಣದಲ್ಲಿ ತೆರೆದಿರುವ ಕೊಬ್ಬರಿ ಖರೀದಿ ಕೇಂದ್ರ, ಜುಲೈ ಮಧ್ಯಭಾಗದಲ್ಲಿ ಖರೀದಿ ಸ್ಥಗಿತಗೊಳಿಸಲಿದೆ. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ಕೊಬ್ಬರಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಕೇಂದ್ರಕ್ಕೆ ಬರುತ್ತಿದ್ದಾರೆ.

ADVERTISEMENT

ಆದರೆ ಕೇಂದ್ರದವರು ಸಮರ್ಪಕವಾದ ವ್ಯವಸ್ಥೆ ಮಾಡದೇ ಇರುವುದರಿಂದ ಕೊಬ್ಬರಿ ಬೆಳೆಗಾರರು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕೊಬ್ಬರಿ ಮಾರಾಟ ಮಾಡಲಾಗದೇ ವಾರಗಟ್ಟಲೆ ಕಾಯುವಂತಾಗಿದೆ. ತಾವು ತಂದ ಕೊಬ್ಬರಿಯನ್ನು ಕಾದುಕೊಂಡು ವಾರಗಟ್ಟಲೆ ಮಾರುಕಟ್ಟೆಯಲ್ಲೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಮ್ಮಂಥ ರೈತರು ತಂದ ಕೊಬ್ಬರಿಯನ್ನು ಖರೀದಿಸದೇ ದೊಡ್ಡ ಕೊಬ್ಬರಿ ವರ್ತಕರು ತರುವ ಕೊಬ್ಬರಿಯ ಲೋಡ್‌ ಅನ್ನೇ ಪದೇ ಪದೇ ಖರೀದಿಸುವ ಮೂಲಕ ನಮಗೆ ಅನ್ಯಾಯ ಮಾಡುತ್ತಿದ್ದಾರೆ.
ಕರಗುಂದ ಷಡಕ್ಷರಿ, ತೆಂಗು ಬೆಳೆಗಾರ

ದೂರದ ಊರುಗಳಿಂದ ಬಂದಿರುವ ಕೊಬ್ಬರಿ ಬೆಳೆಗಾರರಲ್ಲಿ ಹೆಚ್ಚಿನವರು ವಯೋವೃದ್ಧರು ಹಾಗೂ ವಯೋವೃದ್ಧ ಮಹಿಳೆಯರು, ಒಬ್ಬಂಟಿ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ರೈತರೇ ಇದ್ದಾರೆ. ರೈತರು ಸುಮಾರು ಒಂದು ವಾರದಿಂದ ಎಪಿಎಂಸಿ ಮಾರುಕಟ್ಟೆಯಲ್ಲೇ ತಮ್ಮ ಕೊಬ್ಬರಿ ಜೊತೆಗೆ ರಾತ್ರಿ ಹಗಲು ಎನ್ನದೇ ಬೀಡು ಬಿಟ್ಟಿದ್ದಾರೆ.

ಕೊಬ್ಬರಿ ಮಾರಾಟ ಮಾಡಲು ಭಾನುವಾರ ಮಾರುಕಟ್ಟೆಗೆ ಬಂದಿದ್ದು, ನಾಲ್ಕೈದು ದಿನಗಳಾದರೂ ಖರೀದಿ ಕೇಂದ್ರದ ಅಧಿಕಾರಿಗಳು ನಮ್ಮ ಕಡೆ ತಿರುಗಿಯೂ ನೋಡಿಲ್ಲ. ಏನು ಎಂಬುದನ್ನೂ ಕೇಳಿಲ್ಲ. ರಾತ್ರಿ ವೇಳೆ ನಮ್ಮ ಕೊಬ್ಬರಿಯನ್ನು ನಾವೇ ಕಾಯುತ್ತ ಮಲಗುತ್ತಿದ್ದೇವೆ ಎಂದು ಬೆಳವಳ್ಳಿ ವಿಜಯ್ ದೂರಿದರು.

ಸೊಳ್ಳೆಗಳ ಕಾಟ, ಶೌಚಾಲಯ ಸಮಸ್ಯೆ, ಕುಡಿಯಲು ನೀರಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೊಬ್ಬರಿ ತುಂಬಲು ಚೀಲಗಳಿಲ್ಲ. ಶೀತಲೀಕರಣ ಉಗ್ರಾಣಗಳಿಲ್ಲ. ಹಾಗಾಗಿ ನಿಧಾನವಾಗಿ ಖರೀದಿಸುತ್ತೇವೆ ಎನ್ನುತ್ತಾರೆ. ಕೊಬ್ಬರಿಯನ್ನು ಡ್ಯಾಮೇಜ್ ಹಾಗೂ ಗುಣಮಟ್ಟ ಸರಿಯಿಲ್ಲ ಎಂದು ತಾವು ತಂದಿರುವ ಅರ್ಧದಷ್ಟು ಕೊಬ್ಬರಿಯನ್ನು ವಾಪಸ್ ಕಳಿಸುತ್ತಿದ್ದಾರೆ. ಒಟ್ಟಾರೆ ಕೊಬ್ಬರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದರು.

ಒಂದು ಚೀಲಕ್ಕೆ ₹ 8 ರಂತೆ ನಾವು ಎಷ್ಟು ಚೀಲಗಳನ್ನು ಖರಿದಿಸುತ್ತೇವೋ ಅಷ್ಟು ಚೀಲಗಳಿಗೆ ರೈತರೇ ಹಣ ಕೊಟ್ಟು ಪಡೆಯಬೇಕು. ಲಂಚದ ಹಾವಳಿ ಹೆಚ್ಚಾಗಿದೆ. ಲಾರಿಗೆ ಲೋಡ್ ಮಾಡುವಾಗ ಲಾರಿಯವರಿಗೂ ₹ 500 ರೈತರೇ ಕೊಡಬೇಕು. ಕೊಡದಿದ್ದರೆ ಲಾರಿಯವರು ಲೋಡ್ ತುಂಬಿಸಿಕೊಳ್ಳುವುದೇ ಇಲ್ಲ. ಲಂಚ ಮಿತಿಮೀರಿದೆ. ರೈತರು ಕಂಗಾಲಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

ರೈತರು ತರುವ ಕೊಬ್ಬರಿ ಖರೀದಿಸಲು ಮಾರುಕಟ್ಟೆ ಪ್ರವೇಶ ದ್ವಾರದ ಬಳಿ ಟೋಲ್ ತೆರೆಯಬೇಕಿತ್ತು, ಸೂಕ್ತ ಟಿಕೆಟ್ ವ್ಯವಸ್ಥೆ ಮಾಡಬೇಕಿತ್ತು, ಜತೆಗೆ ದಿನ ಮತ್ತು ಸಮಯವನ್ನು ನಿಗದಿ ಮಾಡಬೇಕು ಟೋಕನ್ ವ್ಯವಸ್ಥೆ ಪ್ರಕಾರ ಖರೀದಿಸುವಂತಾಗಬೇಕು.

ನಮಗೂ ಸಮಸ್ಯೆಗಳಿವೆ

ಕೊಬ್ಬರಿ ಖರೀದಿಸುತ್ತಿರುವ ಸ್ನೇಹ ಏಜೆನ್ಸಿಯವರು ಮಾನದಂಡದ ಪ್ರಕಾರ ಕೊಬ್ಬರಿ ಖರೀದಿಸಬೇಕು ಎನ್ನುತ್ತಾರೆ. ಆ ಪ್ರಕಾರ ಖರೀದಿಸಿದರೆ ರೈತರು ಮಾರಾಟ ಮಾಡಲು ತಂದಿರುವ ಅರ್ಧದಷ್ಟು ಕೊಬ್ಬರಿಯನ್ನು ಖರೀದಿಸಲು ಕಷ್ಟವಾಗುತ್ತದೆ. ಲಾರಿ ಸಮಸ್ಯೆ ಇದೆ. ಹಾಗಾಗಿ ಎಲ್ಲ ರೈತರ ಕೊಬ್ಬರಿಯನ್ನು ಒಂದೇ ಸಲ ಖರೀದಿಸಲು ತಾಂತ್ರಿಕ ಸಮಸ್ಯೆಗಳಿವೆ. ಹಾಗಾಗಿ ಖರೀದಿಯಲ್ಲಿ ವಿಳಂಬ ಆಗುತ್ತಿದೆ ಎಂದು ಖರೀದಿ ಕೇಂದ್ರದ ಅಧಿಕಾರಿ ಜೈಶಂಕರ್ ತಿಳಿಸಿದರು.

ಯಾವುದೇ ಸೌಲಭ್ಯಗಳಿಲ್ಲ

ರಾತ್ರಿ ವೇಳೆ ಊಟ ಮತ್ತು ಕುಡಿಯುವ ನೀರು ಸಿಗುತ್ತಿಲ್ಲ. ಶೌಚಾಲಯ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ವಿಶೇಷವಾಗಿ ವಯೋವೃದ್ಧ ಮಹಿಳೆಯರ ಪಾಡು ಹೇಳತೀರದಾಗಿದೆ. ಹಲವು ದಿನಗಳಿಂದ ಊಟ ನಿದ್ದೆ ಇಲ್ಲದೇ ಕಾಯುತ್ತಿದ್ದರೂ ಖರೀದಿ ಕೇಂದ್ರದ ಅಧಿಕಾರಿಗಳು ನಮ್ಮನ್ನು ಪರಿಗಣಿಸುತ್ತಲೇ ಇಲ್ಲ. ಕೇವಲ ಕೆಲವು ಕೊಬ್ಬರಿ ವರ್ತಕರು ತರುವ ಕೊಬ್ಬರಿಯ ಲೋಡ್‌ ಅನ್ನು ತ್ವರಿತವಾಗಿ ಖರೀದಿಸುತ್ತಾರೆ. ಅದೇ ಗ್ರಾಮೀಣ ಭಾಗದಿಂದ ಬಂದಿರುವ ಸಾಮಾನ್ಯ ರೈತರಿಂದ ಕೊಬ್ಬರಿ ಖರೀದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ವಾರಗಟ್ಟಲೆ ಕಾಯುವ ಪರಿಸ್ಥಿತಿ ಇದೆ ಎಂದು ರೈತರೊಬ್ಬರು ಆರೋಪಿಸಿದರು.

ಅರಸೀಕೆರೆ ಎಪಿಎಂಸಿ ಮಾರುಕಟ್ಟೆ ಆವರಣದ ಕೊಬ್ಬರಿ ಖರೀದಿ ಕೇಂದ್ರದಲ್ಲಿಯೇ ವಾಸ್ತವ್ಯ ಹೂಡಿರುವ ಬೆಳೆಗಾರರು.
ಅರಸೀಕೆರೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಐದು ದಿನಗಳಿಂದ ಹಗಲು ರಾತ್ರಿ ಎನ್ನದೇ ಕೊಬ್ಬರಿ ಕಾಯುತ್ತಿರುವ ರೈತ.
ಅರಸೀಕೆರೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಾಪೆಡ್ ಕೇಂದ್ರದಲ್ಲಿ ರೈತರು ಮಾರಾಟ ಮಾಡಲು ತಂದಿರುವ ಕೊಬ್ಬರಿ
ಅರಸೀಕೆರೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಾಪೆಡ್ ಕೇಂದ್ರದಲ್ಲಿ ರೈತರು ಮಾರಾಟ ಮಾಡಲು ತಂದಿರುವ ಕೊಬ್ಬರಿಯ ಗುಣಮಟ್ಟ ಪರೀಕ್ಷೆ ಮಾಡುತ್ತಿರುವ ಕಾರ್ಮಿಕರು
ಅರಸೀಕೆರೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಾಪೆಡ್ ಕೇಂದ್ರದಲ್ಲಿ ಕೊಬ್ಬರಿಯನ್ನು ಚೀಲದಲ್ಲಿ ತುಂಬುತ್ತಿರುವ ಕಾರ್ಮಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.