ADVERTISEMENT

ಹಾಸನ | ವಿದ್ಯುತ್ ಆಘಾತ: ಯಾರಿಗೂ ಗಂಭೀರ ಗಾಯಗಳಾಗಿಲ್ಲ- ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 10:37 IST
Last Updated 10 ನವೆಂಬರ್ 2023, 10:37 IST
<div class="paragraphs"><p>ದಿನೇಶ್‌ ಗುಂಡೂರಾವ್‌ </p></div>

ದಿನೇಶ್‌ ಗುಂಡೂರಾವ್‌

   

ಹಾಸನ: ನಗರದ ಹಾಸನಾಂಬೆ ದೇಗುಲ ಬಳಿ ಶುಕ್ರವಾರ ಮಧ್ಯಾಹ್ನ ವಿದ್ಯುತ್‌ ಆಘಾತದಿಂದ ಕೆಲವರು ಗಾಯಗೊಂಡಿದ್ದು, ಈ ಸುದ್ದಿ ಕೇಳುತ್ತಿದ್ದಂತೆಯ ಸಣ್ಣ ಕಾಲ್ತುಳಿತ ಸಂಭವಿಸಿದೆ. ಇದರಿಂದಾಗಿ ಒಟ್ಟು 17 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಎಲ್‌ಇಡಿಗೆ ಸ್ಕ್ರೀನ್‌ ಅಳವಡಿಕೆ ಮಾಡಲಾಗಿದ್ದ ತಂತಿಯಿಂದ ಈ ಘಟನೆ ನಡೆದಿದೆ. ಈ ತಂತಿಯಿಂದ ಪ್ರವಹಿಸಿದ ವಿದ್ಯುತ್‌ ಕಬ್ಬಿಣದ ಬ್ಯಾರಿಕೇಡ್‌ನಲ್ಲಿ ಸಣ್ಣ ‍ಪ್ರಮಾಣದಲ್ಲಿ ಹರಿದಿದೆ. ಇದರಿಂದ ಇಬ್ಬರಿಗೆ ವಿದ್ಯುತ್ ಆಘಾತವಾಗಿದೆ.

ADVERTISEMENT

ತಕ್ಷಣ ಈ ಸುದ್ದಿ ಹರಡಿದ್ದು, ಇದನ್ನು ಕೇಳಿ ಗಾಬರಿಗೊಂಡ ಭಕ್ತಾದಿಗಳು ಪ್ರಾಣ ಉಳಿಸಿಕೊಳ್ಳಲು ಮಹಿಳೆಯರು, ವೃದ್ಧರು ಸೇರಿ ಭಕ್ತರು ಭಯಗೊಂಡು ಓಡಲು ಆರಂಭಿಸಿದರು. ಈ ವೇಳೆ ಒಬ್ಬರ ಮೇಲೆ ಒಬ್ಬರ ಮೇಲೆ ಇನ್ನೊಬ್ಬರು ಬಿದ್ದಿದ್ದು, ಸಣ್ಣ ಪ್ರಮಾಣದ ಕಾಲ್ತುಳಿತ ಉಂಟಾಯಿತು. ಈ ವೇಳೆ ಕೆಲವರನ್ನು ಸ್ಥಳೀಯರು ಹೊರಗೆಳೆದು ರಕ್ಷಣೆ ಮಾಡಿದರು.

ದೊಡ್ಡ ಪ್ರಮಾಣದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ವಿದ್ಯುತ್ ಆಘಾತಕ್ಕಿಂತ, ಸುದ್ದಿ ಕೇಳಿ ಗಾಬರಿಯಿಂದ ಓಡುವ ಸಂದರ್ಭದಲ್ಲಿಯೇ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೂಡಲೇ ಆಂಬುಲೆನ್ಸ್‌ ಮೂಲಕ ಎಲ್ಲರನ್ನು ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಯಾರಿಗೂ ಅಪಾಯವಾಗಿಲ್ಲ: ವಿದ್ಯುತ್ ಆಘಾತ ಹಾಗೂ ನಂತರ ನಡೆದ ನೂಕುನುಗ್ಗಲಿನಿಂದ 22 ಜನರಿಗೆ ಗಾಯಗಳಾಗಿದ್ದು, ಐದು ಜನರು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೋಗಿದ್ದಾರೆ. ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಅವರು, ವಿದ್ಯುತ್ ಆಘಾತ ಆಗಿರುವುದು ನಿಜ. ಆದರೆ, ನಂತರ ನಡೆದ ನೂಕುನುಗ್ಗಲಿನಲ್ಲಿಯೇ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ನೆಲಮಂಗಲದ ವೃದ್ಧೆಯೊಬ್ಬರ ಭುಜದ ಮೂಳೆ ಮುರಿದಿದೆ. ಇನ್ನೊಬ್ಬ ವೃದ್ಧೆಗೆ ಆಘಾತಕ್ಕೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ಹೋಗಬಾರದು. ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಘಟನೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರಿಗೂ ಮಾಹಿತಿ ಹೋಗಿದೆ. ಇಂತಹ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸಿ, ವರದಿ ನೀಡಲಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸ್ವರೂಪ್‌ ಪ್ರಕಾಶ್, ಸಂಸದ ಪ್ರಜ್ವಲ್‌ ರೇವಣ್ಣ, ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.