ADVERTISEMENT

ನುಗ್ಗೇಹಳ್ಳಿ | ‘ಪೈಪ್‌ಲೈನ್‌ ಕಾಮಗಾರಿಗೆ ರೈತರ ಒಪ್ಪಿಗೆ‘

ಸಂತೇಶಿವರ, ಅಗ್ರಹಾರ ಬೆಳಗುಲಿ ಯೋಜನೆ ಜಿಲ್ಲಾಧಿಕಾರಿ ಸತ್ಯಭಾಮಾ ಮಾತುಕತೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:12 IST
Last Updated 19 ಅಕ್ಟೋಬರ್ 2024, 13:12 IST
   

ನುಗ್ಗೇಹಳ್ಳಿ: ಹೋಬಳಿಯ ಸಂತೇಶಿವರ, ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ತುಂಬಿಸಲು ಹೇಮಾವತಿ ನಾಲೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆಯ ಪೈಪ್‌ಲೈನ್‌ ಅಳವಡಿಸಲು ಕಾರೇಹಳ್ಳಿ ಸಮೀಪದ ಜಾಬ್‌ಘಟ್ಟ ಗ್ರಾಮದಲ್ಲಿ ಒಬ್ಬ ರೈತನ ವಿರೋಧದಿಂದ  ಸ್ಥಗಿತಗೊಂಡಿದ್ದ ಕಾಮಗಾರಿ ಭಾನುವಾರ ಮತ್ತೆ ಆರಂಭಗೊಳ್ಳಲಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮಾ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ಭೇಟಿ ನೀಡಿ ರೈತರೊಂದಿಗೆ  ಮಾತುಕತೆ ನಡೆಸಿದ್ದು, ರೈತ ಕಾಮಗಾರಿ ಮುಂದುವರಿಸಲು ಒಪ್ಪಿರುವುದಾಗಿ ತಿಳಿಸಿದ್ದಾರೆ.

 ಸಾಹಿತಿ ಡಾ.ಎಸ್. ಎಲ್. ಬೈರಪ್ಪ ತಮ್ಮ ಹುಟ್ಟೂರು ಸಂತೇಶಿವರ ಗ್ರಾಮದ ದೊಡ್ಡಕೆರೆ ಹಾಗೂ ಅಗ್ರಹಾರ ಬೆಳಗುಲಿ ಹೊನ್ನಾದೇವಿ ಕೆರೆಗೆ ನೀರು ಹರಿಸುವ ಸಲುವಾಗಿ ಅವರು  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೈಪ್‌ಲೈನ್ ಮೂಲಕ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಗೆ ₹25 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು.

ADVERTISEMENT

ಯೋಜಮನೆಯಂತೆ ಕಾರೇಹಳ್ಳಿ ಸಮೀಪದ ಜಾಬ್‌ಘಟ್ಟ ಗ್ರಾಮದ ಬಳಿ  ನಾಗಮಂಗಲ ಹೇಮಾವತಿ ಉಪ ನಾಲೆಯಿಂದ ಕೆರೆಗಳಿಗೆ ನೀರು ಹರಿ ಪೈಪ್ ಲೈನ್ ಅಳವಡಿಸುವ ಕಾರ್ಯ ಶೇ 99 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಾರೇಹಳ್ಳಿ ಗ್ರಾಮದ 62 ಸರ್ವೆ ನಂಬ್ರದ ಜಮೀನಿನ ರೈತರಾದ  ನಿಂಗೇಗೌಡ ಹಾಗೂ ರಂಗಸ್ವಾಮಿ  1 ಎಕರೆ ಜಾಗದಲ್ಲಿ  ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಕಾಮಗಾರಿ ಸ್ಥಗಿತವಾಗಿತ್ತು.

ನೀರಿನ ಅಗತ್ಯ ಇರುವ ಗ್ರಾಮಗಳ ರೈತರು, ರೈತ ಸಂಘದ ಮುಖಂಡರು ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ  ಅವರಿಗೆ  ಮನವಿ ಮಾಡಿದ್ದರು. ಸಚಿವರು ಸ್ಥಳಕ್ಕೆ ಹೋಗಿ ರೈತರೊಂದಿಗೆ ಮಾತುಕತೆ ನಡೆಸಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದರು. ಅದರಂತಿ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ ಮಾತನಾಡಿ, ‘ರೈತರಿಗೂ ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಮಾತು ಕೊಟ್ಟಿದ್ದಾರೆ. ಯೋಜನೆ ಬೇಗ ಪೂರ್ಣಗೊಂಡು ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲಿ’ ಎಂದರು.

ತಹಶೀಲ್ದಾರ್ ನವೀನ್ ಕುಮಾರ್, ಕಾವೇರಿ ನೀರಾವರಿ ನಿಗಮದ ಚನ್ನರಾಯಪಟ್ಟಣ ವಿಭಾಗದ ಅಧೀಕ್ಷಕ ಎಂ. ಕಿಶೋರ್, ಕಾರ್ಯಪಾಲಕ  ಎಂಜಿನಿಯರ್ ಎ.ಆರ್.ದೀಪು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಪುನೀತ್, ಬಾಗೂರು ಹೋಬಳಿ ಉಪತಾಶಿಲ್ದಾರ್ ಮೋಹನ್, ಕಂದಾಯ ಅಧಿಕಾರಿ ರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಂತೇಶಿವರ ರಾಜಣ್ಣ, ಮುಖಂಡರಾದ ಅಗ್ರಹಾರ ಬೆಳಗುಲಿ ಶಿವರಾಜ್, ದುಗ್ಗೇನಹಳ್ಳಿ ವೀರೇಶ್, ಕೆಂಪೇಗೌಡ, ಶ್ರೀನಿವಾಸ್, ರೈತ ಸಂಘದ ತಾಲೂಕು ಅಧ್ಯಕ್ಷ ಎಸ್ಎಸ್ ರಾಮಚಂದ್ರು, ಹೋಬಳಿ ಅಧ್ಯಕ್ಷ ಸೋಮಶೇಖರಯ್ಯ, ಹುಲ್ಲೇನಹಳ್ಳಿ ಶಿವಣ್ಣ , ಬೆಳಗುಲಿ ಆಟೋ ರಾಜಣ್ಣ, ಪುಟ್ಟೇಗೌಡ, ಮನು, ಹುಲ್ಲೇನಹಳ್ಳಿ ರಮೇಶ್, ಸೇರಿದಂತೆ ಸಂತೇ ಶಿವರ ಅಗ್ರಹಾರ ಬೆಳಗುಲಿ ಹುಲ್ಲೇನಹಳ್ಳಿ ದ್ಯಾವಲಾಪುರ ಗಂಜಿಗೆರೆ ಯಾಚನಘಟ್ಟ ದುಗ್ಗೇನಹಳ್ಳಿ ಭಾಗದ ನೂರಾರು ರೈತರು ಭಾಗವಹಿಸಿದ್ದರು.

‘ಭಾನುವಾರದಿಂದ ಶುರು’  ಜಿಲ್ಲಾಧಿಕಾರಿ ಶುಕ್ರವಾರ ಸಂಜೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ವಿರೋಧ ವ್ಯಕ್ತಪಡಿಸಿದ ರೈತರೊಂದಿಗೆ ಮಾತುಕತೆ ನಡೆಸಿ ಸಾರ್ವಜನಿಕ ಯೋಜನೆಯಾಗಿದ್ದು  ರೈತರು ಹಠ ಮಾಡುವುದು ಸರಿಯಲ್ಲ  ನೀರಾವರಿ ವಿಚಾರದಲ್ಲಿ ತಡ ಮಾಡುವುದು ಬೇಡ. ರೈತರಿಗೆ ನೀರಾವರಿ ಇಲಾಖೆಯಿಂದ ಪರಿಹಾರ ಹಣ ಸಿಗಲಿದೆ ಆತಂಕ ಪಡುವ ಅಗತ್ಯವಿಲ್ಲ  ಎಂದರು. ಭಾನುವಾರದಿಂದಲೇ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪ್ರಾರಂಭಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. 

ರೈತರ ಒಪ್ಪಿಗೆ ರೈತ ನಿಂಗೇಗೌಡ ಮಾತನಾಡಿ ‘ಪೈಪ್ ಲೈನ್ ಅಳವಡಿಕೆಗೆ ಯಾವುದೇ ಅಡ್ಡಿಪಡಿಸುತ್ತಿಲ್ಲ. ಆದರೆ ಕೆಲವರ ಒತ್ತಡದಿಂದ ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ ಎಂಬ ಮಾಹಿತಿಯಂತೆ ನಾವು ಪೈಪ್ ಲೈನ್ ಅಳವಡಿಕೆಗೆ ಅವಕಾಶ ನೀಡಿರಲಿಲ್ಲ. ಆದರೆ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂಬ ಜಿಲ್ಲಾಧಿಕಾರಿಗಳ ಮಾತಿನ ಭರವಸೆಯಿಂದ ಪೈಪ್ ಲೈನ್ ಅಳವಡಿಕೆಗೆ ತಾವು ಒಪ್ಪಿದ್ದೇವೆ’ ರೈತ ನಿಂಗೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.