ADVERTISEMENT

ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಿ: ಕಿಸಾನ್ ಸಂಘ ಪ್ರತಿಭಟನೆ

ತಹಶೀಲ್ದಾರ್ ಕಚೇರಿ ಎದುರು ಭಾರತೀಯ ಕಿಸಾನ್ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 14:20 IST
Last Updated 11 ಜನವರಿ 2022, 14:20 IST
ಹಾಸನ ತಹಶೀಲ್ದಾರ್‌ ಕಚೇರಿ ಎದುರು ಭಾರತೀಯ ಕಿಸಾನ್‌ ಸಂಘದಿಂದ ಪ್ರತಿಭಟನೆ ನಡೆಸಲಾಯಿತು
ಹಾಸನ ತಹಶೀಲ್ದಾರ್‌ ಕಚೇರಿ ಎದುರು ಭಾರತೀಯ ಕಿಸಾನ್‌ ಸಂಘದಿಂದ ಪ್ರತಿಭಟನೆ ನಡೆಸಲಾಯಿತು   

ಹಾಸನ: ರೈತರ ಕೃಷಿ ಉತ್ಪನ್ನಗಳಿಗೆ ಸರ್ಕಾರ ಲಾಭದಾಯಕ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಹಾಸನ ಘಟಕ ಮಂಗಳವಾರತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ರೈಲ್ವೆ, ರಸ್ತೆ, ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಮಂಗಳನ ಅಂಗಳದವರೆಗೂ ತಲುಪಿದ್ದೇವೆ. ಆದರೆ ಜೀವನಕ್ಕೆ ಅಗತ್ಯವಿರುವ ಆಹಾರವನ್ನು ಉತ್ಪಾದಿಸುವ ಕೃಷಿ ಕ್ಷೇತ್ರ ಇಂದು ಅವಸಾನದತ್ತ ಸಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

1990 ರಿಂದ ದೇಶದಲ್ಲಿ 3.5 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿ ವರ್ಷ ಕೃಷಿ ತ್ಯಜಿಸಿ ನಗರದತ್ತ ಸಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತಿದೆ.ಬೆಳೆದ ಬೆಳೆಗಳಿಗೆ ತಗಲುವ ವೆಚ್ಚ ಅಧಿಕವಾಗಿದೆ. ಪ್ರಕೃತಿ ವಿಕೋಪದಿಂದ ನಷ್ಟವುಂಟಾಗಿ ಮತ್ತು ಲಾಭದಾಯಕ ಬೆಲೆ ಸಿಗದ ಕಾರಣ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ADVERTISEMENT

ಅನ್ಯ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರನಿಗದಿಪಡಿಸುತ್ತಾರೆ. ಆದರೆ, ಕೃಷಿಕನಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು ದರ ನಿಗದಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ. ಈ ವ್ಯವಸ್ಥೆ ಸರಿಯಾಗಬೇಕಾದರೆ ರೈತರಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.

ರೈತರ ಆದಾಯ ದ್ವಿಗುಣಗೊಳ್ಳಬೇಕೆಂಬುದು ಕೇಂದ್ರ ಸರ್ಕಾರದ ಒಳ್ಳೆಯ ಚಿಂತನೆಯೇಸರಿ. ಆದರೆ, ಸರ್ಕಾರ ಕೇವಲ ಕನಿಷ್ಠ ಬೆಂಬಲ ಬೆಲೆಯನ್ನು (ಎಂ.ಎಸ್‌.ಪಿ) ಘೋಷಿಸಿದರೆಸಾಲದು. ರೈತನ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ, ಖರೀದಿ ಖಾತರಿನೀಡಿ, ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಯಾಗಬಾರದು. ಮಂಡಿ ಒಳಗೆ
ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಶಿಕ್ಷ ವಿಧಿಸುವ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಭಾರತೀಯ ಕಿಸಾನ್‌ ಸಂಘದ ತಾಲ್ಲೂಕು ಅಧ್ಯಕ್ಷ ಟಿ. ಶ್ರೀನಿವಾಸ್‌, ಕಾರ್ಯದರ್ಶಿಚಂದ್ರಶೇಖರ್, ಮುಖಂಡರಾದ ನಂಜೇಶಯ್ಯ, ಮಧು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.