ADVERTISEMENT

ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು: ಆರೋಪ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 13:44 IST
Last Updated 24 ಜುಲೈ 2024, 13:44 IST

ಅರಕಲಗೂಡು: ‘ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮ ಪಂಚಾಯಿತಿ ಕೆಡಿಪಿ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಗ್ರಾಮಗಳ ಅಭಿವೃದ್ಧಿ ಕುರಿತು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ದೊಡ್ಡಮಗ್ಗೆ ಗ್ರಾ.ಪಂ ಅಧ್ಯಕ್ಷ ಕೆ. ಎಂ.ಆಶೋಕ್ ಆರೋಪಿಸಿದರು.

‘ಜುಲೈ 22ರಂದು ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿ ಪರಿಶೀಲನೆಗೆ ಕೆಡಿಪಿ ಸಭೆ ಕರೆಯಲಾಗಿತ್ತು. ಸಭೆಗೆ ಬಹಳಷ್ಟು ಅಧಿಕಾರಿಗಳು ಗೈರಾಗಿದ್ದ ಕಾರಣ ಸಭೆ ನಡೆಸಲು ಸಾಧ್ಯವಾಗದೆ ಮೂಂದೂಡಬೇಕಾಯಿತು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಹರಿಸಿ ಅಗತ್ಯ ಸೌಲಭ್ಯ ಒದಗಿಸುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕರ್ತವ್ಯ. ಕುಡಿಯುವ ನೀರು, ರಸ್ತೆ, ಆರೋಗ್ಯ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಿದ್ದರೆ ಅಧಿಕಾರಿಗಳ ಸಭೆಗೆ ಹಾಜರಾಗಿ ಕೈಗೊಂಡಿರುವ ಅಥವಾ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾಹಿತಿ ಒದಗಿಸಬೇಕು. ಆದರೆ, ಅಧಿಕಾರಿಗಳು ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಸಮಸ್ಯೆಗಳು ಬಗೆಹರಿಯಲು ಹಾಗೂ ಸರ್ಕಾರದ ಯೋಜನೆಗಳು ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕುರಿತು ನೋಟಿಸ್ ಜಾರಿ ಮಾಡಿರುವುದಲ್ಲದೆ ಹಿರಿಯ ಅಧಿಕಾರಿಗಳು ಮತ್ತು ಪಂಚಾಯತ್ ರಾಜ್ ಇಲಾಖೆಗೂ ಪತ್ರ ಬರೆಯಲಾಗಿದೆ. ಅಧಿಕಾರಿಗಳ ಧೋರಣೆ ಹೀಗೆ ಮುಂದುವರಿದರೆ ತಾ.ಪಂ. ಕಚೇರಿ ಎದುರು ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯ ಆರ್. ವೇಣುಗೋಪಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.