ಹಾಸನ: ಈ ಜಾತಿಯವನಾದರೆ ಕಳ್ಳತನ ಮಾಡಬಹುದು, ಈ ಜಾತಿಯವನಾದರೆ ಕಳ್ಳತನ ಮಾಡಬಾರದು ಎಂದು ಸಂವಿಧಾನದಲ್ಲಿ ಇದೆಯಾ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದರು.
ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಹಗರಣದಲ್ಲಿ ಸಿಲುಕಿದ್ದು, ಹೊರಬರಲು ಆಗುತ್ತಿಲ್ಲ. ದಲಿತರ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮ, ಮುಡಾ ಹಗರಣದಲ್ಲೂ ದಲಿತರ ಹಣವೇ ಲೂಟಿಯಾಗಿದೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳ ನಾಯಕ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬ ಸಚಿವ ಕೆ.ಎನ್. ರಾಜಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮಾತನಾಡುವಾಗ ಡೆತ್ ನೋಟ್ ಓದಿದರು. ಆದರೆ, ಸಚಿವರು, ಶಾಸಕರು, ವಾಲ್ಮೀಕಿ ನಿಗಮದ ಅಧ್ಯಕ್ಷರ ಹೆಸರನ್ನು ಬಿಟ್ಟು ಓದುತ್ತಾರೆ ಎಂದರು.
ಜನರಿಗೆ ತಪ್ಪು ಮಾಹಿತಿ ಹೋಗಬಾರದು. ಹಗರಣದಲ್ಲಿ ಯಾರೂ ಭಾಗಿಯಾಗಿಲ್ಲ. ಅಧಿಕಾರಿಗಳೇ ಎಲ್ಲ ತಿಂದು ಹಾಕಿದ್ದಾರೆ ಎಂದು ಹೇಳಿದ್ದಾರೆ. ₹187 ಕೋಟಿ ಅಧಿಕಾರಿಗಳೇ ತಿನ್ನಲು ಆಗುತ್ತದೆಯೇ? ಅದರ ಹಿಂದೆ ದೊಡ್ಡ ತಿಮಿಂಗಲಗಳಿವೆ. ಅಧಿಕಾರಿಗಳು ಅಲ್ಲಿ, ಇಲ್ಲಿ ಬಿದ್ದಿದ್ದನ್ನು ತಿಂದಿದ್ದಾರೆ ಎಂದರು.
ಸರ್ಕಾರ ಪಾಪರ್ ಆಗಿದೆ. ಅವರ ಬಳಿ ದುಡ್ಡಿಲ್ಲ. ಅಂದಾಜು ವೆಚ್ಚ ತಯಾರಿಸದೇ ಗ್ಯಾರಂಟಿ ಯೋಜನೆ ತಂದಿದ್ದಾರೆ. ಅದಕ್ಕೆ ಈಗ ದಲಿತರ ಹಣ ಹುಡುಕುತ್ತಿದ್ದಾರೆ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ನಿಗಮಗಳಿದ್ದು, ಅಲ್ಲಿನ ಹಣವನ್ನೂ ಬಳಸಿಕೊಳ್ಳಿ ಎಂದು ಟೀಕಿಸಿದರು.
ಈ ಸರ್ಕಾರ ಕೋಮಾದಲ್ಲಿದ್ದು, ಇಂತಹ ಜಾತಿಯವರು ಲೂಟಿ ಹೊಡೆದರೆ, ಕಳ್ಳತನ ಮಾಡಿದರೆ, ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ಕಾನೂನು ಮಾಡಿಬಿಡಿ ಎಂದ ಅವರು, ಸರ್ಕಾರದಲ್ಲಿ ಹಣ ಇಲ್ಲದೇ ಇರುವುದರಿಂದ ಮಳೆ ಹಾನಿ ಪರಿಹಾರ ನೀಡಲು ಆಗುತ್ತಿಲ್ಲ ಎಂದು ದೂರಿದರು.
ಕೇಂದ್ರ ಸಚಿವರು ರಾಜ್ಯಕ್ಕೆ ಬಂದರೂ ಏನೂ ಪ್ರಯೋಜನವಾಗಲ್ಲ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರು ಬಂದರೆ, ಪ್ರಯೋಜನವಾಗಲ್ಲ ಎಂದರೆ, ನೀವಾದರೂ ಮನೆ ಬಿಟ್ಟು ಬನ್ನಿ ಎಂದರು.
ಸದ್ಯಕ್ಕೆ ಕೊಡುತ್ತಿರುವ ಪರಿಹಾರ ಕೇಂದ್ರ ಸರ್ಕಾರದ್ದು. ಕುಮಾರಸ್ವಾಮಿ ಅವರಿಗೆ ರಾಜ್ಯಕ್ಕೆ ಬರಲು, ಪರಿಶೀಲನೆ ಮಾಡಲು ಹಕ್ಕಿದೆ. ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.