ADVERTISEMENT

ಅವೈಜ್ಞಾನಿಕ ಕಾಮಗಾರಿ: ಆಕ್ರೋಶ

ಮೂಲ ರಸ್ತೆ ಅಗೆಯದೇ ಕಾಂಕ್ರೀಟ್‌ ರಸ್ತೆ ನಿರ್ಮಾಣ: ಸಂಚಾರಕ್ಕೆ ಅಡಚಣೆ

ಎಂ.ಪಿ.ಹರೀಶ್
Published 25 ಅಕ್ಟೋಬರ್ 2024, 7:56 IST
Last Updated 25 ಅಕ್ಟೋಬರ್ 2024, 7:56 IST
ಆಲೂರು ಸಂತೆ ಮೈದಾನದಲ್ಲಿ ನಿರ್ಮಿಸಿರುವ ಸಿಮೆಂಟ್ ರಸ್ತೆಯಲ್ಲಿ ವಾಹನಗಳು ಓಡಾಡಲು ತೊಂದರೆ ಆಗಿದೆ.
ಆಲೂರು ಸಂತೆ ಮೈದಾನದಲ್ಲಿ ನಿರ್ಮಿಸಿರುವ ಸಿಮೆಂಟ್ ರಸ್ತೆಯಲ್ಲಿ ವಾಹನಗಳು ಓಡಾಡಲು ತೊಂದರೆ ಆಗಿದೆ.   

ಆಲೂರು: ದಶಕಗಳಿಂದೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಸವಾರರು ಪರದಾಡುವಂತಾಗಿದೆ.

ಸಿಮೆಂಟ್ ರಸ್ತೆಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ, ಮೊದಲಿದ್ದ ರಸ್ತೆ ಮೇಲೆ ಸುಮಾರು 6-8 ಇಂಚು ಕಾಂಕ್ರೀಟ್ ಹಾಕಲಾಗುತ್ತಿದೆ. ಇದರಿಂದ ರಸ್ತೆಯ ಅಂಚು ಕಡಿದಾಗುತ್ತಿದ್ದು, ಜನಸಾಮಾನ್ಯರು ಮತ್ತು ವಾಹನಗಳು ರಸ್ತೆಯಿಂದ ಕೆಳಗೆ ಇಳಿಯಲು ಮತ್ತು ಹತ್ತಲು ಸಾಧ್ಯವಾಗದಂತಾಗಿದೆ. ರಸ್ತೆಯಂಚಿನ ಅರಿವಿಲ್ಲದೇ ಅನೇಕ ವಾಹನಗಳು ಅಪಘಾತಕ್ಕೀಡಾಗಿವೆ. ಜನಸಾಮಾನ್ಯರು ಬಿದ್ದು ಪೆಟ್ಟು ಮಾಡಿಕೊಂಡಿರುವ ಪ್ರಕರಣಗಳು ನಡೆದಿವೆ.

ಮೊದಲು ಇದ್ದ ರಸ್ತೆ ಮೇಲೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಈ ರೀತಿಯ ಅವ್ಯವಸ್ಥೆ ಆಗುತ್ತಿದೆ. ರಸ್ತೆಗೆ ಕಾಂಕ್ರೀಟ್ ಹಾಕುವ ಮೊದಲು, ಅಷ್ಟೇ ಪ್ರಮಾಣದ ರಸ್ತೆಯನ್ನು ಅಗೆದು, ನಿರ್ಮಾಣ ಮಾಡಬೇಕು. ಆಗ ರಸ್ತೆ ಸುರಕ್ಷಿತವಾಗಿ ಇರಲಿದ್ದು, ಓಡಾಡಲು ಯಾವುದೆ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.

ADVERTISEMENT

ಸರ್ಕಾರದ ವತಿಯಿಂದ ಯಾವುದೇ ಕಾಮಗಾರಿ ಮಾಡಬೇಕಾದರೆ ನೀಲನಕ್ಷೆ ಮತ್ತು ಅಂದಾಜು ಪಟ್ಟಿ ತಯಾರು ಮಾಡಲಾಗುತ್ತದೆ. ನೀಲನಕ್ಷೆ ತಯಾರು ಮಾಡುವ ಎಂಜಿನಿಯರ್‌ಗಳಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಜನಪ್ರತಿನಿಧಿಗಳಾದರೂ ಕಾಂಕ್ರೀಟ್ ರಸ್ತೆ ಮಾಡುವಾಗ ಪೂರ್ವ ಸಿದ್ಧತೆ ಹೇಗಿರಬೇಕು ಎಂಬ ಬಗ್ಗೆ ಆಲೋಚನೆ ಮಾಡದೇ ಇಂತಹ ಪ್ರಮಾದಗಳು ಆಗುತ್ತಿವೆ. ನೀಲನಕ್ಷೆಯಲ್ಲಿ ಭೂಮಿ ಅಗೆದು ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಸೇರಿಲ್ಲ. ಹಾಗಾಗಿ ಈ ರೀತಿ ಕಾಮಗಾರಿ ಆಗುತ್ತಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಎಂಜಿನಿಯರ್‌.

ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 10 ಅಡಿ ಅಗಲ ಸಿಮೆಂಟ್ ರಸ್ತೆ ನಿರ್ಮಾಣ ಮಾಡುತ್ತಾರೆ. ಈ ರಸ್ತೆಯಲ್ಲಿ ಒಂದು ವಾಹನ ಓಡಾಡುವ ವೇಳೆಯಲ್ಲಿ, ಎದುರಿನಿಂದ ಬರುವ ವಾಹನಕ್ಕೆ ಓಡಾಡಲು ಅವಕಾಶ ಇಲ್ಲದಾಗುತ್ತದೆ. ರಸ್ತೆಯಂಚಿಗೆ ಮಣ್ಣು ತುಂಬಿ ಪ್ಯಾಕ್ ಮಾಡಿದರೂ, ಮಳೆ ಬಂದಾಗ ಕೊಚ್ಚಿ ಹೋಗುತ್ತದೆ. ಕನಿಷ್ಠ 20 ಅಡಿ ಅಗಲ ರಸ್ತೆ ನಿರ್ಮಾಣ ಮಾಡಿದರೆ, ವಾಹನಗಳು ಓಡಾಡಲು ಸಾಧ್ಯವಾಗುತ್ತದೆ ಎಂದು ವಾಹನ ಸವಾರರು ಹೇಳುತ್ತಾರೆ.

ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡುವುದನ್ನು ಕೈಬಿಡಬೇಕು. ಜನಸಾಮಾನ್ಯರ ಪ್ರಾಣ ರಕ್ಷಣೆ ಮಾಡಬೇಕು.
- ಡಾ.ಗಿರೀಶ್ ಬಸಪ್ಪ ಆಲೂರು ಕ್ಲಿನಿಕ್

ಸರ್ಕಾರದ ಹಂತದಲ್ಲಿ ಚರ್ಚೆ

ಮೂಲ ರಸ್ತೆ ಅಗೆದು ಮಣ್ಣನ್ನು ಹೊರತೆಗೆದು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಮೂಲ ರಸ್ತೆ ಮೇಲೆ ನಿರ್ಮಾಣ ಮಾಡಿದರೆ ರಸ್ತೆಯಂಚು ಕಡಿದಾಗಿರುವುದರಿಂದ ಭಾರಿ ಅನಾಹುತಗಳಾಗುತ್ತಿವೆ ಎಂದು ಶಾಸಕ ಸಿಮೆಂಟ್‌ ಮಂಜು ಹೇಳಿದ್ದಾರೆ. ಯಾವ ಗ್ರಾಮಕ್ಕೆ ಹೋದರೂ ಇಂತಹ ದೂರುಗಳು ಬರುತ್ತಿವೆ. ರಸ್ತೆ ನಿರ್ಮಾಣ ಮಾಡುವ ಮೊದಲು ಅಷ್ಟೇ ಪ್ರಮಾಣದ ಭೂಮಿ ಅಗೆದು ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡುವಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.