ಹೊಳನರಸೀಪುರ: ಪಟ್ಟಣದಲ್ಲಿ 30 ವರ್ಷಗಳ ಹಿಂದೆ 6 ಜನರಿಂದ ಪ್ರಾರಂಭವಾದ ಪತಂಜಲಿ ಯೋಗ ಕೂಟ, ಇಲ್ಲಿಯವರೆಗೆ 6 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಯೋಗಾಭ್ಯಾಸ ಕಲಿಸಿದೆ.
30 ವರ್ಷಗಳ ಹಿಂದೆ ಪ್ರಲ್ಹಾದ್ ಎಂಬ ಯೋಗಪಟು ಸ್ಟೇಟ್ ಬ್ಯಾಂಕ್‌ಗೆ ಅಧಿಕಾರಿಯಾಗಿ ಬಂದಿದ್ದರು. ಅವರು ಇಲ್ಲಿನ ಅನೇಕರನ್ನು ಸಂಪರ್ಕಿಸಿ, 6 ಜನರನ್ನು ಒಪ್ಪಿಸಿ, ನಿತ್ಯ ಒಂದೊಂದು ದೇವಸ್ಥಾನದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ಇವರೊಂದಿಗೆ ನಾಗಭೂಷಣ್, ಗಣೇಶ್‌ಬಾಬು, ಕೋಳಿ ಫಾರಂ ಮಂಜಣ್ಣ, ಲೋಕೇಶ್, ವಾಸುದೇವಮೂರ್ತಿ ಸೇರಿದಂತೆ ಇನ್ನೂ ಕೆಲವರು ಸೇರಿದ್ದರು.
ನಿತ್ಯ ಒಂದೊಂದು ಕಡೆ ಯೋಗಾಭ್ಯಾಸ ಮಾಡುವುದರಿಂದ ತೊಂದರೆ ಆಗುತ್ತಿತ್ತು. 1999 ರಲ್ಲಿ ಎಲ್ಲರೂ ಸೇರಿ ಪತಂಜಲಿಯೋಗ ಕೂಟ ರಚಿಸಿಕೊಂಡರು. ಈ ತಂಡ ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದ ರೀತಿಯನ್ನು ಕಂಡು ಜನರಲ್ಲಿ ಆಸಕ್ತಿ ಹೆಚ್ಚಿತು. ನಂತರ ಪತಂಜಲಿ ಯೋಗಕೂಟಕ್ಕೆ ಸೇರುವವರ ಸಂಖ್ಯೆ ಹೆಚ್ಚಿತು.
ಕೂಟದ ಕಾರ್ಯಕ್ರಮಗಳನ್ನು ಕಂಡಿದ್ದ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪ್ರಾಧ್ಯಾಪಕರು, ಯೋಗಕೂಟಕ್ಕೆ ಸೇರಿ ಯೋಗಾಸನ ಕಲಿಯಲು ಪ್ರಾರಂಭಿಸಿದರು. ಸಚಿವರಾಗಿದ್ದ ಎಚ್.ಡಿ. ರೇವಣ್ಣ ಅವರ ಸೂಚನೆಯ ಮೇರೆಗೆ ಪುರಸಭೆಯವರು 2007 ರಲ್ಲಿ ಇಲ್ಲಿನ ಕವರ್ಡಕ್ ಮೇಲೆ ಒಂದು ಸುಸಜ್ಜಿತವಾದ ಕಟ್ಟಡ ಕಟ್ಟಿಕೊಟ್ಟರು.
ಈ ಕಟ್ಟಡದಲ್ಲಿ ನಿತ್ಯ ಬೆಳಿಗ್ಗೆ 5.30 ರಿಂದ 7.30 ರವರೆಗೆ ಯೋಗಾಭ್ಯಾಸ ಪ್ರಾರಂಭವಾಗಿದ್ದು, ಅಂದಿನಿಂದ ಇಂದಿಗೂ ಮುಂದುವರಿದಿದೆ. ದಿನೇ ದಿನೇ ಮಹಿಳೆಯರೂ ಯೋಗ ಕಲಿಯಲು ಪ್ರಾರಂಭಿಸಿದರು. ಸಂಖ್ಯೆ ಹೆಚ್ಚುತ್ತಲೇ ಇತ್ತು. ಇಲ್ಲಿ ಯೋಗಾಸನ ಕಲಿತವರು ಪಟ್ಟಣದ ವಿವಿಧ ದೇವಾಲಯ, ಶಾಲೆಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಯೋಗಾಸನ ಕಲಿಸಲು ಪ್ರಾರಂಭಿಸಿದರು.
ಯೋಗ ಪಟು ಪ್ರೇಮಾ ಮಂಜುನಾಥ್, ಮಹಿಳೆಯರಿಗೆ ಮತ್ತು ಶಾಲೆಯ ಮಕ್ಕಳಿಗೆ ಯೋಗಾಸನ ಕಲಿಸಲು ಪ್ರಾರಂಭಿಸಿ 10 ವರ್ಷಗಳಾಗುತ್ತಿವೆ. ಇಲ್ಲಿ ಯೋಗಾಸನ ಕಲಿತ ಹಿರಿಯರು, ವಿದ್ಯಾರ್ಥಿಗಳು ಹಾಗೂ ಬಾಲಕ, ಬಾಲಕಿಯರು, ರಾಜ್ಯದ ವಿವಿಧೆಡೆ ಯೋಗ ಪ್ರದರ್ಶನ ನೀಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಹುಮಾನಗಳನ್ನು ಗಳಿಸಿದ್ದಾರೆ.
ಪ್ರತಿ ವರ್ಷದ ಯೋಗ ದಿನದಲ್ಲಿ ವಿಶೇಷ ಪ್ರದರ್ಶನ ನೀಡುತ್ತ ಬಂದಿರುವ ಈ ಪತಂಜಲಿ ಯೋಗ ಕೂಟಕ್ಕೆ ತಾಲ್ಲೂಕಿನಲ್ಲಿ ಉತ್ತಮ ಮನ್ನಣೆ ಸಿಕ್ಕಿದೆ. 70 ವರ್ಷಕ್ಕೂ ಮೀರಿದ ಹಿರಿಯರಾದ ಸತ್ಯನಾರಾಯಣ ಶೆಟ್ಟಿ, ಕರುಣಾಕರ ಶೆಟ್ಟಿ, ರೈಸ್‌ಮಿಲ್ ಕೃಷ್ಣಮೂರ್ತಿ, ಆರ್.ಎಸ್. ನಾರಾಯಣರಾವ್, ನಾರಾಯಣ ಸೇರಿದಂತೆ ಅನೇಕರು 25 ವರ್ಷಗಳಿಂದ ನಿತ್ಯ ಯೋಗಾಸನ ಮಾಡುತ್ತಿದ್ದಾರೆ.
ಯೋಗ ದಿನವಾದ ಜೂನ್ 21 ಕ್ಕೆ 30 ನೇ ವರ್ಷಕ್ಕೆ ಕಾಲಿಡುತ್ತಿರುವ ಪತಂಜಲಿ ಯೋಗಕೂಟದ ಕಟ್ಟಡ ಸೋರುತ್ತಿದ್ದು, ಯೋಗಾಸನ ಮಾಡಲು ತೊಂದರೆ ಆಗುತ್ತಿದೆ. ಪುರಸಭೆಯವರು ಕಟ್ಟಡವನ್ನು ಸರಿಪಡಿಸಿ ಸಹಕಾರ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.
ಪತಂಜಲಿ ಯೋಗ ಕೂಟದಲ್ಲಿ ನಿತ್ಯ ಯೋಗಾಭ್ಯಾಸ ನಡೆಯುತ್ತಿದ್ದು ಹಲವರು ಇಲ್ಲಿಗೆ ಬಂದು ಕಲಿಯುತ್ತಿದ್ದಾರೆ. ಪಟ್ಟಣದಲ್ಲಿ ಯೋಗಕ್ಕೆ ಹೇಳಿ ಮಾಡಿಸಿದ ಜಾಗ ಇದಾಗಿದೆ.ಸತ್ಯ ನಾರಾಯಣ ಶೆಟ್ಟಿ ಹಿರಿಯ ಯೋಗಪಟು
ನಿತ್ಯ ಪತಂಜಲಿ ಯೋಗ ಕೂಟಕ್ಕೆ ಬಂದು ಯೋಗಾಭ್ಯಾಸ ಮಾಡುತ್ತಿದ್ದೇನೆ. ಯೋಗದಿಂದ ಆರೋಗ್ಯವೂ ಚೆನ್ನಾಗಿದೆ. ಎಲ್ಲರೂ ಯೋಗ ಕಲಿತು ಅಭ್ಯಾಸ ಮಾಡುವುದು ಒಳ್ಳೆಯದು.ಪ್ರಭಾ ಯೋಗ ಕೂಟದ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.