ADVERTISEMENT

ಅರಕಲಗೂಡು | ಕಾಮಗಾರಿ ನಡೆಯದಿದ್ದರೂ ಹಣ ಪಾವತಿ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 14:27 IST
Last Updated 22 ಫೆಬ್ರುವರಿ 2024, 14:27 IST

ಅರಕಲಗೂಡು: ಕಾಮಗಾರಿಗಳು ಪ್ರಾರಂಭವೇ ಆಗದಿದ್ದರೂ, ಪೂರ್ಣಗೊಂಡಿರುವುದಾಗಿ ವರದಿ ನೀಡಿ ಹಣ ಪಾವತಿ ಮಾಡುವ ಮೂಲಕ ಅಕ್ರಮ ಎಸಗಲಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ್ ವಾಟಾಳ್ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿಗೆ 2018-19 ನೇ ಸಾಲಿನಲ್ಲಿ ರಾಜ್ಯ ಹಣಕಾಸು ನಿಧಿಯ (ಎಸ್.ಎಫ್.ಸಿ.) ವಿಶೇಷ ಅನುದಾನ ₹ 6 ಕೋಟಿ ಹಣ ಬಿಡುಗಡೆಯಾಗಿತ್ತು. 2019ರ ಫೆ. 2 ರ ಅಲ್ಪಾವಧಿ ಟೆಂಡರ್ ಇ- ಪ್ರಕ್ಯೂರ್‌ಮೆಂಟ್‌ನ 9 ಕಾಮಗಾರಿಗಳಲ್ಲಿ ಎರಡನೇ ವಾರ್ಡ್‌ಗೆ ಐದು ಕಾಮಗಾರಿಗಳನ್ನು ನಿಗದಿಗೊಳಿಸಿ ₹ 46.65 ಲಕ್ಷ ಬಿಡುಗಡೆ ಮಾಡಲಾಗಿತ್ತು ಎಂದರು. 

ಇದರಲ್ಲಿ ಎರಡು ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಉಪ್ಪಾರ ಬೀದಿಯಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿ, ಇದೇ ಬಡಾವಣೆಯ ಮಲ್ಲಿಪಟ್ಟಣ ರಸ್ತೆಗೆ ಸೇರ್ಪಡೆಯಾಗುವ ರಸ್ತೆ ಅಭಿವೃದ್ದಿ ಕಾಮಗಾರಿ ಹಾಗೂ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮುಂಭಾಗ ಚರಂಡಿ ಕಾಮಗಾರಿಗಳು ಈವರೆಗೂ ಪ್ರಾರಂಭವೇ ಆಗಿಲ್ಲ. ಆದರೆ, ಕಾಮಗಾರಿ ಪೂರ್ಣಗೊಂಡಿದೆ ಎಂದು ಹಣ ಪಾವತಿ ಮಾಡಲಾಗಿದೆ ಎಂದು ಆರೋಪಿಸಿದರು.

ADVERTISEMENT

ಈ ಕುರಿತು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ಸರ್ಕಾರ, ಪೌರಾಡಳಿತ ಆಯುಕ್ತರಿಗೆ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ, ಈ ಕುರಿತು ಲೋಕಾಯುಕ್ತರಿಗೂ ದೂರು ನೀಡಿರುವುದಾಗಿ ಹೇಳಿದರು. 

ಇನ್ನೂ ಹಲವು ಅಕ್ರಮಗಳು ನಡೆದಿರುವ ಶಂಕೆ ಇದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಸರ್ಕಾರ  ಕ್ರಮ ನೋಡಿ ಮುಂದಿನ ಹೋರಾಟ ನಿರ್ಧರಿಸುವುದಾಗಿ ಹೇಳಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಲಕ್ಷ್ಮೀ ಲೋಹಿತ್, ನಿಖಿಲ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.