ADVERTISEMENT

ಮುತ್ತಿನ ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ

ಕಬ್ಬಳಿಯ ಬಸವೇಶ್ವರಸ್ವಾಮಿಯ 92ನೇಜಾತ್ರೆಯ ಪ್ರಯುಕ್ತ ಕಾರ್ತಿಕ ಹುಣ್ಣಿಮೆಯ ಸೋಮವಾರ ರಾತ್ರಿ ಸರ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 14:34 IST
Last Updated 28 ನವೆಂಬರ್ 2023, 14:34 IST
ಹಿರೀಸಾವೆ ಹೋಬಳಿಯ ಕಬ್ಬಳಿ ಜಾತ್ರೆಯಲ್ಲಿ ಸೋಮವಾರದ ಹುಣ್ಣಿಮೆ ರಾತ್ರಿ ಬಸವೇಶ್ವರ ಸ್ವಾಮಿ ದೇವಾಲಯದ ಪಕ್ಕದ  ಕಲ್ಯಾಣಿಯಲ್ಲಿ ದೇವರು, ನಿರ್ಮಲಾನಂದನಾಥ ಸ್ವಾಮೀಜಿ ಅವರ ತೆಪ್ಪೋತ್ಸವ ಜರುಗಿತು
ಹಿರೀಸಾವೆ ಹೋಬಳಿಯ ಕಬ್ಬಳಿ ಜಾತ್ರೆಯಲ್ಲಿ ಸೋಮವಾರದ ಹುಣ್ಣಿಮೆ ರಾತ್ರಿ ಬಸವೇಶ್ವರ ಸ್ವಾಮಿ ದೇವಾಲಯದ ಪಕ್ಕದ  ಕಲ್ಯಾಣಿಯಲ್ಲಿ ದೇವರು, ನಿರ್ಮಲಾನಂದನಾಥ ಸ್ವಾಮೀಜಿ ಅವರ ತೆಪ್ಪೋತ್ಸವ ಜರುಗಿತು   

ಹಿರೀಸಾವೆ: ಹೋಬಳಿಯ ಕಬ್ಬಳಿ ಬಸವೇಶ್ವರಸ್ವಾಮಿಯ 92ನೇ ಜಾತ್ರಾ ಮಹೋತ್ಸವದ ಅಂಗವಾಗಿ ಕಾರ್ತಿಕ ಹುಣ್ಣಿಮೆಯ ಸೋಮವಾರದ ರಾತ್ರಿ ಸರ್ಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ಕಲ್ಯಾಣಿಯಲ್ಲಿ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಸೋಮವಾರ ದಿನಪೂರ್ತಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ, ವಿವಿಧ ಹೋಮ ಮತ್ತು ಪೂಜೆಯಲ್ಲಿ ಭಾಗವಹಿಸಿದ್ದರು.

ತುಮಕೂರು ಜಿಲ್ಲೆಯ ತುರುವೇಕೆರೆ, ತಿಪಟೂರು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ರೈತರು ತಮ್ಮ ಜಾನುವಾರುಗಳನ್ನು ಸನ್ನಿಧಿಗೆ ಕರೆತಂದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಿ ತೀರ್ಥ ಪ್ರೋಕ್ಷಣೆ ಮಾಡಿಸಿದರು. ಹರಕೆ ಹೊತ್ತಿದ್ದ ಭಕ್ತರು ದೇವರಿಗೆ ಹರಕೆ ಸಲ್ಲಿಸಿದರು.

ADVERTISEMENT

ಸಂಜೆ 6.30 ರಲ್ಲಿ ಬಸವೇಶ್ವರಸ್ವಾಮಿಯ ಸರ್ಪೋತ್ಸವ ಹಾಗೂ ದಸರಿಘಟ್ಟದ ಚೌಡೇಶ್ವರಿ ದೇವಿಯ ಉತ್ಸವ, ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿಯ ಮೆರವಣಿಗೆಯೂ ಮಂಗಲವಾದ್ಯ, ಚಂಡೆವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ನಡೆಯಿತು.

ಕಲ್ಯಾಣಿಯಲ್ಲಿ ವಿದ್ಯುತ್ ದೀಪಾಲಂಕಾರದೊಂದಿಗೆ ಸಿದ್ಧಗೊಂಡಿದ್ದ ತೆಪ್ಪದಲ್ಲಿ ಬಸವೇಶ್ವರಸ್ವಾಮಿ, ದಸರಿಘಟ್ಟದ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ, ನಿರ್ಮಲಾನಂದನಾಥ ಸ್ವಾಮೀಜಿ ಅವರು ಪುಷ್ಪ ಸಿಂಹಾಸನದ ಮೇಲೆ ಅಲಂಕೃತರಾದ ತಕ್ಷಣ ತೆಪ್ಪೋತ್ಸವಕ್ಕೆ ಚಾಲನೆ ದೊರೆಯಿತು.

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಮನುಷ್ಯನಿಗೆ ತನ್ನ ಪ್ರಜ್ಞೆ ಮೂಲಕ ಮನಸ್ಸು ಸದೃಢಗೊಳಿಸುವ ಶಕ್ತಿ ಇದೆ’ ಎಂದರು.

ಸಪ್ತಸಾಗರ ಕಲಾನಿಕೇತ ನೃತ್ಯ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಸಕ ಸಿ.ಎನ್. ಬಾಲಕೃಷ್ಣ, ಕಾಂಗ್ರೆಸ್‌ ಮುಖಂಡ ಗೋಪಾಲಸ್ವಾಮಿ, ಆದಿಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ ಮಾತನಾಡಿದರು. ಪರಿಸರ ಪ್ರೇಮಿ ಚ.ನಂ. ಆಶೋಕ್, ಸೋಮೇಶ್ವರನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥಸ್ವಾಮೀಜಿ, ಸ್ವಾಮೀಜಿ, ಗ್ರಾಮ ಪಂಚಾಯಿತಿ ಸದಸ್ಯ ಶಿವನಂಜಗೌಡ, ಸುಮಾಲೋಕೇಶ್, ಮುಖಂಡರಾದ ಶಿವಾರಂ, ಗಣೇಶಗೌಡ, ಗುಡಿಗೌಡ ಪ್ರಕಾಶ್ ಇದ್ದರು.

ಹಿರೀಸಾವೆ ಹೋಬಳಿಯ ಕಬ್ಬಳಿಯ ಜಾತ್ರೆಯಲ್ಲಿ ಸೋಮವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರು ಪ್ಯಾರಾ ಒಲಂಪಿಕ್ ಕ್ರೀಡಾಪಟು ಶರತ್ ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶಾಸಕ ಬಾಲಕೃಷ್ಣ ಕಾಂಗ್ರೆಸ್‌ ಮುಖಂಡ ಗೋಪಾಲಸ್ವಾಮಿ ಶಂಭುನಾಥ ಸ್ವಾಮೀಜಿ ಶಿವಪುತ್ರನಾಥ ಸ್ವಾಮೀಜಿ  ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.