ADVERTISEMENT

ಪೆನ್‌ಡ್ರೈವ್ ಪ್ರಕರಣ | ತನಿಖೆ ದಿಕ್ಕು ತಪ್ಪಿಸುತ್ತಿರುವ ಎಚ್‌ಡಿಕೆ: ಕಾಂಗ್ರೆಸ್

ಪೆನ್ ಡ್ರೈವ್ ಅಸಲಿ ಡೀಲರ್ ಬಿಜೆಪಿ ಮಾಜಿ ಶಾಸಕ: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 23 ಮೇ 2024, 13:35 IST
Last Updated 23 ಮೇ 2024, 13:35 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಹಾಸನ: ‘ಅಶ್ಲೀಲ ವಿಡಿಯೊಗಳ ಪೆನ್‌ಡ್ರೈವ್ ಪ್ರಕರಣದಲ್ಲಿ ಅಸಲಿ ಡೀಲರ್ ಬೇರೆಯೇ ಇದ್ದಾರೆ. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಿಸುವ ಮೂಲಕ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರಾದ ಬಾಗೂರು ಮಂಜೇಗೌಡ ಹಾಗೂ ಎಚ್.ಕೆ. ಮಹೇಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಹಾಸನದ ಬಿಜೆಪಿ ಮಾಜಿ ಶಾಸಕರು ಹಾಗೂ ಅವರ ಆಪ್ತ ಸಹಾಯಕರ ಪಾತ್ರ ಇದ್ದು, ಈಗಾಗಲೇ ಎಸ್ಐಟಿ ತಂಡ 18 ಕಡೆ ದಾಳಿ ನಡೆಸಿ ಪೆನ್‌ಡ್ರೈವ್, ಹಾರ್ಡ್ ಡಿಸ್ಕ್ ಹಾಗೂ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿರುವುದೇ ಇದಕ್ಕೆ ಸಾಕ್ಷಿ’ ಎಂದು ತಿಳಿಸಿದರು.

ADVERTISEMENT

‘ಈ ವಿಚಾರ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗೊತ್ತಿದ್ದರೂ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಎಸ್ಐಟಿಗೆ ಏಕೆ ಒತ್ತಾಯಿಸುತ್ತಿಲ್ಲ? ಅವರೆಲ್ಲ ಬಿಜೆಪಿ ಕಡೆಯವರು ಎಂದು ಹೀಗೆ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಕೇವಲ ಡಿ.ಕೆ. ಶಿವಕುಮಾರ್ ಹಾಗೂ ಇತರರ ಮೇಲೆ ಆರೋಪಿಸುತ್ತಾ ತನಿಖೆಯ ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ’ ಎಂದರು.

‘ಪ್ರಕರಣದ ದಿಕ್ಕು ತಪ್ಪಿಸುತ್ತಿರುವ ಕುಮಾರಸ್ವಾಮಿ, ಸಂತ್ರಸ್ತೆಯರಿಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಬೇಕು. ತನಿಖೆಗೆ ಸಹಕರಿಸುವಂತೆ ಆರೋಪಿ ಪ್ರಜ್ವಲ್ ರೇವಣ್ಣ ಮನವೊಲಿಸುವ ಕೆಲಸ ಮಾಡದೇ, ಪ್ರಜ್ವಲ್‌ಗೆ ಕೈ ಮುಗಿದು ಬಾರಪ್ಪ ಎಂದು ಹೇಳುವ ನಾಟಕ ಆಡುತ್ತಿದ್ದಾರೆ’ ಎಂದು ದೂರಿದರು.

‘ಈ ರೀತಿಯ ಹೇಳಿಕೆ ನೀಡುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ ಹಾಸ್ಯ ನಟರಂತೆ ಕಾಣಿಸುತ್ತಿದ್ದಾರೆ. ಪೆನ್‌ಡ್ರೈವ್‌ ಪ್ರಕರಣದಲ್ಲಿ ಮಹಾನಾಯಕ ಇದ್ದಾನೆ ಎಂದು ಕುಮಾರಸ್ವಾಮಿ ಆರೋಪಿಸುತ್ತಾರೆ. ಆದರೆ ಅಸಲಿ ಪೆನ್‌ಡ್ರೈವ್‌ ಡೀಲರ್‌ಗಳು ಹಾಸನದಲ್ಲಿಯೇ ಇದ್ದು ಹಾಸನದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಸಭೆ ಸೇರಿ ಕೋಟ್ಯಂತರ ರೂಪಾಯಿಗಳಿಗೆ ಪೆನ್‌ಡ್ರೈವ್‌ ಡೀಲ್ ಮಾಡಿದ್ದಾರೆ’ ಎಂದು ಆರೋಪ ಮಾಡಿದರು.

‘ಈ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರೇ ಪೆನ್‌ಡ್ರೈವ್‌ ಹಂಚಿಕೆ ಮಾಡಿದರು ಎಂದು ಹೇಳಲಾಗುತ್ತಿದೆ. ಆದರೆ ಅಸಲಿಯಾಗಿ ಬಿಜೆಪಿ ಮಾಜಿ ಶಾಸಕರೇ ಇದನ್ನು ಸಾರ್ವಜನಿಕವಾಗಿ ಹರಿಬಿಟ್ಟಿರುವುದು’ ಎಂದು ಆಪಾದಿಸಿದರು.

‘ಇದೇ ಪ್ರಕರಣದಲ್ಲಿ ಮಾಜಿ ಶಾಸಕರ ಆಪ್ತ ಸಹಾಯಕರು ತನಿಖೆಗೆ ಒಳಪಟ್ಟಿದ್ದು, ಯಲಗುಂದದ ಯುವಕ ಹಾಗೂ ಮಹಿಳಾ ಸಬ್‌ ಇನ್‌ಸ್ಪೆಕ್ಟರ್ ಮಗನ ವಿರುದ್ಧ ಎಸ್ಐಟಿ ತನಿಖೆ ಕೈಗೊಂಡಿದೆ. ಇವರಿಗೆ ಪೆನ್‌ಡ್ರೈವ್‌ ಎಲ್ಲಿ ದೊರೆಯಿತು? ಯಾರು ಕೊಟ್ಟರು ಎಂಬುದರ ಬಗ್ಗೆ ಕೂಲಂಕುಷವಾಗಿ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.