ಹಾಸನ: ‘ಪೆನ್‌ಡ್ರೈವ್ ಅನ್ನು ಶಾಸಕ ಎ.ಮಂಜು ಅವರಿಗೆ ನೀಡಿದ್ದೆ’ ಎಂದು ಪ್ರಕರಣದ ಆರೋಪಿ ನವೀನ್‌ಗೌಡ ತನ್ನ ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದ ಹಿನ್ನೆಲೆಯಲ್ಲಿ, ಶನಿವಾರ ಇಲ್ಲಿನ ಸೆನ್ ಠಾಣೆಯಲ್ಲಿ ಶಾಸಕ ಎ.ಮಂಜು ಅವರಿಂದ ಪೊಲೀಸರು ಮಾಹಿತಿ ಪಡೆದರು.
ತನಿಖಾ ಅಧಿಕಾರಿಯಾಗಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ ಅವರು ಒಂದು ಗಂಟೆ ಕಾಲ ಮಂಜು ಅವರ ವಿಚಾರಣೆ ನಡೆಸಿದರು.
ನವೀನ್ ಗೌಡನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಆತ ನೀಡಿರುವ ಮಾಹಿತಿ ಆಧರಿಸಿ ಮಂಜು ಅವರಿಗೂ ಅಧಿಕಾರಿಗಳು ನೋಟಿಸ್ ನೀಡಿದ್ದರು. ನಂತರ ಪ್ರತಿಕ್ರಿಯಿಸಿದ ಶಾಸಕರು, ‘ನಾನೇ ನವೀನ್ ಗೌಡ ವಿರುದ್ಧ ಎಸ್‌ಐಟಿಗೆ ದೂರು ನೀಡಿದ್ದೆ. ಅದರ ಸಂಬಂಧ ಮಾಹಿತಿ ನೀಡಿದ್ದೇನೆ’ ಎಂದಷ್ಟೇ ಹೇಳಿದರು.
ನವೀನ್, ಚೇತನ್ ನ್ಯಾಯಾಂಗ ಬಂಧನಕ್ಕೆ: ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ನವೀನ್ ಗೌಡ ಮತ್ತು ಚೇತನ್ ಗೌಡ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಂಗಳೂರಿನಲ್ಲಿ ಇಬ್ಬರನ್ನೂ ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ, ಮೇ 29ರಂದು ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳನ್ನು ಮೂರು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿತ್ತು. ಕಸ್ಟಡಿಯ ಅವಧಿ ಮುಗಿದಿದ್ದರಿಂದ ಶನಿವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.