ADVERTISEMENT

ಹಿರೀಸಾವೆ | ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ದಿನಗಟ್ಟಲೇ ಕಾಯುತ್ತಿರುವ ಜನ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮಸ್ಯೆ

ಹಿ.ಕೃ.ಚಂದ್ರು
Published 23 ಅಕ್ಟೋಬರ್ 2024, 6:37 IST
Last Updated 23 ಅಕ್ಟೋಬರ್ 2024, 6:37 IST
ಪಡಿತರ ಪಡೆಯಲು ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಎದುರು ವೃದ್ಧರು, ಮಹಿಳೆಯರು ಮಂಗಳವಾರ ಕಾಯುತ್ತ ಕುಳಿತಿದ್ದರು
ಪಡಿತರ ಪಡೆಯಲು ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಎದುರು ವೃದ್ಧರು, ಮಹಿಳೆಯರು ಮಂಗಳವಾರ ಕಾಯುತ್ತ ಕುಳಿತಿದ್ದರು    

ಹಿರೀಸಾವೆ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮ್ಮಿಲನ ಪ್ರಕ್ರಿಯೆಯಲ್ಲಿನ ತಾಂತ್ರಿಕ ದೋಷದಿಂದ ಪಡಿತರ ಪಡೆಯಲು ಜನರು ದಿನಗಟ್ಟಲೇ ಪಡಿತರ ವಿತರಣಾ ಕೇಂದ್ರಗಳ ಮುಂದೆ ಕಾಯಬೇಕಾಗಿದೆ.

ಹೋಬಳಿಯಲ್ಲಿ ನ್ಯಾಯಬೆಲೆ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿ ಸುಮಾರು 15 ಕಡೆ ಪಡಿತರ ವಿತರಣೆ ಆಗುತ್ತದೆ. ಎಲ್ಲ ಕೇಂದ್ರಗಳಲ್ಲಿಯೂ ಜನರು ಬೆಳಿಗ್ಗೆ 7 ಗಂಟೆಯಿಂದಲೇ ಪಡಿತರ ಪಡೆಯಲು ಬರುತ್ತಿದ್ದಾರೆ. ಅದೃಷ್ಟ ಇದ್ದವರಿಗೆ ಬೆರಳಚ್ಚು ಬಂದು, ಪಡಿತರ ಸಿಗುತ್ತಿದೆ.

ಈ ತಿಂಗಳ ಪಡಿತರವನ್ನು ಐದು ದಿನಗಳ (ಅ.18 ರಂದು) ಹಿಂದೆ ಸಾರ್ವಜನಿಕರಿಗೆ ವಿತರಣೆ ಮಾಡಲು ಇಲಾಖೆಯೂ ತಿಳಿಸಿತ್ತು. ಮೊದಲ ದಿನ ಸರ್ವರ್ ಸಮಸ್ಯೆ ಇಲ್ಲದೇ ಬೆರಳಚ್ಚು ಪಡೆದು ಜನರಿಗೆ ಪಡಿತರ ನೀಡಲಾಯಿತು.

ADVERTISEMENT

ಆದರೆ ನಾಲ್ಕು ದಿನದಿಂದ ತಾಂತ್ರಿಕ ದೋಷ ಉಂಟಾಗಿದ್ದು, ಕೆಲಸ ಕಾರ್ಯಗಳನ್ನು ಬಿಟ್ಟು ಮಹಿಳೆಯರು, ವೃದ್ದರು, ಅಂಗವಿಕಲರು ಗಂಟೆಗಟ್ಟಲೇ ವಿತರಣಾ ಕೇಂದ್ರಗಳ ಮುಂದೆ ಕಾಯುತ್ತಾ ಕುಳಿತುಕೊಳ್ಳುತ್ತಿದ್ದಾರೆ.

‘ದೀಪಾವಳಿ ಹಬ್ಬದ ಸಮಯ. ಒಂದು ವಾರದಿಂದ ಮಳೆಯಾಗುತ್ತಿದ್ದೆ. ಯಾವ ಸಮಯದಲ್ಲಿ ಪಡಿತರ ನೀಡುತ್ತಾರೋ ಗೊತ್ತಾಗುವುದು ಇಲ್ಲ. ನಾವು ಆ ಸಮಯದಲ್ಲಿ ಬರಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಪಡಿತರ ಪಡೆಯಲು ಬಂದಿದ್ದ ಮಂಜಮ್ಮ.

‘ಬೆಳಿಗ್ಗೆ 7 ರಿಂದ 10 ಗಂಟೆವರೆಗೆ ಸರ್ವರ್ ಸರಿ ಇರುತ್ತದೆ. ಆ ಸಮಯದಲ್ಲಿ 30 ರಿಂದ 40 ಜನರಿಗೆ ಪಡಿತರವನ್ನು ನೀಡುತ್ತೇವೆ’ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿ ಮಾಲೀಕ ಹರೀಶ್.

‘ಈ ತಿಂಗಳಲ್ಲಿ ಉಳಿದಿರುವ 9 ದಿನಗಳಲ್ಲಿ ಪಡಿತರವನ್ನು ಜನರಿಗೆ ವಿತರಣೆ ಮಾಡಬೇಕಿದೆ. ಅದರಲ್ಲಿ 3 ರಜಾ ದಿನಗಳಿವೆ. ಉಳಿದ 6 ದಿನದಲ್ಲಿ ಎಲ್ಲರಿಗೂ ಪಡಿತರ ವಿತರಣೆ ಮಾಡಲು ಕಷ್ಟವಾಗುತ್ತದೆ’ ಎನ್ನುತ್ತಾರೆ ಪಡಿತರ ವಿತರಕರು.

‘ಇದುವರೆಗೆ ಮೊಬೈಲ್ ಒಟಿಪಿ ಪಡೆದು ಪಡಿತರ ನೀಡುತ್ತಿದ್ದರು. ಈ ತಿಂಗಳು ಬೆರಳಚ್ಚು ಮೂಲಕ ಪಡೆಯುವಂತೆ ತಿಳಿಸಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಯಾವಾಗ ನ್ಯಾಯಬೆಲೆ ಅಂಗಡಿಗೆ ಹೋಗಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಕೊಳ್ಳೇನಹಳ್ಳಿ ಅಂಗವಿಕಲೆ ರೇಣುಕಾ ತಿಳಿಸಿದರು.

‘ಸೆಪ್ಟೆಂಬರ್ ತನಕ ಎನ್ಐಸಿ ಸರ್ವರ್ ಮೂಲಕ ವಿತರಣೆ ಮಾಡಲಾಗುತ್ತಿತ್ತು. ಈ ತಿಂಗಳಿನಿಂದ ಕೆಎಸ್‌ಡಿಸಿ ಸರ್ವರ್ ಮೂಲಕ ಪಡಿತರ ನೀಡಲು ಸರ್ಕಾರ ಕ್ರಮಕೈಗೊಂಡಿದ್ದು, ತಾಂತ್ರಿಕ ದೋಷ ಉಂಟಾಗಿದೆ’ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ಸರ್ವರ್ ಸಮಸ್ಯೆಯಿಂದ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಲು ಕಷ್ಟವಾಗುತ್ತದೆ. ಪಡಿತರ ವಿತರಣೆ ಮಾಡಲು ಪರ್ಯಾಯ ಕ್ರಮವನ್ನು ಇಲಾಖೆ ಕೈಗೊಳ್ಳಬೇಕಿದೆ.
-ಶ್ರೀಧರ್ ಹಿರೀಸಾವೆ ಅಂಗವಿಕಲ
ಇಲಾಖೆಯವರು ಪ್ರತಿ ಕ್ಷಣದ ಸರ್ವರ್ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಮೂಲಕ ತಿಳಿಸುತ್ತಿದ್ದಾರೆ. ಸರ್ವರ್ ಸರಿಯಿರುವ ಸಮಯದಲ್ಲಿ ಪಡಿತರ ವಿತರಣೆ ಮಾಡುತ್ತಿದ್ದೇವೆ.
-ಮಹೇಶ್ ಕೃಷಿ ಪತ್ತಿನ ಸಹಕಾರ ಸಂಘದ ಮಾರಾಟ ಗುಮಾಸ್ತ
ಸರ್ವರ್ ಸಮ್ಮಿಲನದಿಂದ ತಾಂತ್ರಿಕ ಸಮಸ್ಯೆಯಾಗಿದೆ. ಎರಡು ಮೂರು ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ. ಎಲ್ಲರಿಗೂ ಪಡಿತರ ವಿತರಣೆ ಮಾಡಲಾಗುವುದು.
-ಹೇಮಾವತಿ ಚನ್ನರಾಯಪಟ್ಟಣದ ಆಹಾರ ನಿರೀಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.