ADVERTISEMENT

ಚನ್ನಪಟ್ಟಣದ ಜನ ನಿಖಿಲ್‌ನನ್ನು ಅಭಿಮನ್ಯು ಮಾಡುವುದಿಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 13:48 IST
Last Updated 27 ಅಕ್ಟೋಬರ್ 2024, 13:48 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಹಾಸನ: ‘ಚನ್ನಪಟ್ಟಣದ ಜನರು ನಿಖಿಲ್ ಕುಮಾರಸ್ವಾಮಿಯನ್ನು ಅಭಿಮನ್ಯು ಮಾಡುವುದಿಲ್ಲ. ಅರ್ಜುನನ ಪಾತ್ರ ಕೊಡುತ್ತಾರೆ. ಕಾಂಗ್ರೆಸ್‌ ನಾಯಕರು ಏನೇ ಕುತಂತ್ರ ಮಾಡಿದರೂ ಅಲ್ಲಿನ ಜನರು ನಿಖಿಲ್‌ ಅವರನ್ನು ಗೆಲ್ಲಿಸಲಿದ್ದಾರೆ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್‌, ಡಿ.ಕೆ. ಸುರೇಶ್ ಹಾಗೂ ಅವರು ಕಣಕ್ಕಿಳಿಸಿರುವ ಅಭ್ಯರ್ಥಿ ಪರಸ್ಪರ ಏನು ಚರ್ಚೆ ಮಾಡಿಕೊಂಡಿದ್ದರು ಎಂಬುದನ್ನು ಗಮನಿಸಿದರೆ ಸಾಕು ಜನರೇ ತೀರ್ಮಾನಿಸುತ್ತಾರೆ’ ಎಂದರು.

‘ಹಾಸನಾಂಬೆ ದರ್ಶನ ಮಾಡಿ ಹೇಳುತ್ತಿದ್ದೇನೆ, ಬರೆದಿಟ್ಟುಕೊಳ್ಳಿ. ಚನ್ನಪಟ್ಟಣದಿಂದ ಅವರ (ಡಿ.ಕೆ.ಶಿವಕುಮಾರ್‌ ಸಹೋದರರು) ಅವನತಿ ಆರಂಭವಾಗುತ್ತದೆ’ ಎಂದರು.

ADVERTISEMENT

‘ಮೈತ್ರಿ ಮಾಡಿಸಿದ್ದು ನಾನೇ, ಕುಮಾರಸ್ವಾಮಿ ಗೆಲ್ಲಿಸಿದ್ದು ನಾನೇ, ಡಾಸಿ.ಎನ್. ಮಂಜುನಾಥ್ ಗೆಲ್ಲಿಸಿದ್ದು ನಾನೇ ಎಂದು ಸಿ.‍ಪಿ. ಯೋಗೇಶ್ವರ್ ಹೇಳುತ್ತಾರೆ. ಹಾಗಿದ್ದರೆ ಅವರು ಹೈಕಮಾಂಡ್‌ನಿಂದ (ಬಿಜೆಪಿ) ‘ಬಿ’ ಫಾರಂ ಪಡೆದು ಏಕೆ ಚುನಾವಣೆಗೆ ಸ್ಪರ್ಧಿಸಲಿಲ್ಲ’ ಎಂದು ಪ್ರಶ್ನಿಸಿದರು.

‘ಚನ್ನಪಟ್ಟಣದಲ್ಲಿ ನಾನು ಸ್ಪರ್ಧಿಸುತ್ತೇನೆಂದು ನಿಖಿಲ್ ಬಂದಿರಲಿಲ್ಲ. ಅನಿವಾರ್ಯವಾಗಿ ಅವರಿಗೆ ಅಭ್ಯರ್ಥಿ ಪಟ್ಟ ಕಟ್ಟಲಾಗಿದೆ. ಚನ್ನಪಟ್ಟಣ ಮೊದಲಿನಿಂದಲೂ ಜೆಡಿಎಸ್ ಭದ್ರಕೋಟೆ. ನಮ್ಮಲ್ಲಿನ ಕೆಲ ತಪ್ಪುಗಳನ್ನು ಸರಿ ಮಾಡಲು ನನ್ನನ್ನು ರಾಮನಗರದಿಂದ ಚನ್ನಪಟ್ಟಣಕ್ಕೆ ಕರೆದೊಯ್ದರು. ಈಗ ಎಲ್ಲವೂ ಸರಿಯಾಗಿದೆ. ಉಪ ಚುನಾವಣೆಯಲ್ಲಿ ನಾವು ಗೆಲ್ಲುವುದು ಶತಸಿದ್ಧ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.