ADVERTISEMENT

ಹಳೇಬೀಡು: ಹೊಯ್ಸಳರ ಇತಿಹಾಸ ತಿಳಿಸುವ ಚಿತ್ರಗಳು

ರಾಜರ ಹೆಸರಿನ ಕೊಠಡಿ; ಚಿತ್ರಕಲಾ ಶಿಕ್ಷಕರ ಶ್ರಮದಿಂದ ಹೆಚ್ಚಿದ ಶಾಲೆಯ ಅಂದ

ಎಚ್.ಎಸ್.ಅನಿಲ್ ಕುಮಾರ್
Published 14 ಮಾರ್ಚ್ 2024, 5:57 IST
Last Updated 14 ಮಾರ್ಚ್ 2024, 5:57 IST
ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಕಟ್ಟಡದ ಗೋಡೆಗಳ ಮೇಲೆ ಬಿಡಿಸಿರುವ ಚಿತ್ರಗಳು 
ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಕಟ್ಟಡದ ಗೋಡೆಗಳ ಮೇಲೆ ಬಿಡಿಸಿರುವ ಚಿತ್ರಗಳು    

ಹಳೇಬೀಡು: ಶಾಲೆ ಮಕ್ಕಳಿಗೆ ಆಕರ್ಷಣೀಯ ಆಗಿರಬೇಕು. ಸರ್ಕಾರಿ ಶಾಲೆ ಖಾಸಗಿ ಹೈಟೆಕ್ ಶಾಲೆಗಿಂತ ಕಡಿಮೆ ಇಲ್ಲ ಎಂಬುದು ಪೋಷಕರಿಗೆ ಮನವರಿಕೆ ಆಗಬೇಕೆಂಬ ಉದ್ದೇಶದಿಂದ ಚಿತ್ರಕಲಾ ಶಿಕ್ಷಕರು ಅಪರೂಪದ ಕಾರ್ಯ ಮಾಡಿದ್ದಾರೆ. ಇದರಿಂದಾಗಿ ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಕಟ್ಟಡ ಬಣ್ಣದ ಚಿತ್ರಗಳಿಂದ ಕಂಗೊಳಿಸುತ್ತಿದೆ.

ಶಾಲೆಯ ಚಿತ್ರಕಲಾ ಶಿಕ್ಷಕ ಎ.ಎಸ್.ಶಂಕರೇಗೌಡ ಅವರ ಆಸಕ್ತಿಗೆ ಸಹೋದ್ಯೋಗಿಗಳು ಪ್ರೋತ್ಸಾಹಿಸಿದ್ದರಿಂದ ಶಾಲೆಯ ಗೋಡೆಗಳು ಚಿತ್ರಗಳಿಂದ ಅಲಂಕೃತಗೊಂಡಿವೆ. ಗೋಡೆಗಳಲ್ಲಿ ಮೂಡಿರುವ ಚಿತ್ರಗಳು ಅಂದ ಹೆಚ್ಚಿಸಿರುವುದಲ್ಲದೇ ನೋಡಿದವರಿಗೆ ಜಾಗೃತಿ ಮೂಡಿಸುತ್ತಿವೆ.

ಪ್ರತಿ ತರಗತಿಗೂ ಹೊಯ್ಸಳ ರಾಜರ ಹೆಸರು ಇಡಲಾಗಿದೆ. ಕೊಠಡಿಯ ಬಾಗಿಲಿನ ಮೇಲೆ ರಾಜರ ಹೆಸರು, ಅಧಿಕಾರದ ಅವಧಿಯನ್ನು ಬರೆಯಲಾಗಿದೆ. ಶಾಲೆಯ ತರಗತಿ ಕೊಠಡಿಗಳ ಮುಂದೆ ಸಾಗಿದಾಗ ಹೊಯ್ಸಳ ವಂಶದ ಸ್ಥಾಪಕ ನೃಪಕಾಮನಿಂದ ಕೊನೆಯ ದೊರೆ ನಾಲ್ಕನೇ ಬಲ್ಲಾಳನವರೆಗೆ ಪರಿಚಯವಾಗುತ್ತದೆ.

ADVERTISEMENT

‘ಕೆಪಿಎಸ್ ಶಾಲೆ ಇರುವ ಸ್ಥಳ ಹೊಯ್ಸಳರ ಅರಮನೆ ಹಾಗೂ ರಾಜ ಪರಿವಾರದ ಪ್ರಮುಖರು ವಾಸ ಮಾಡುತ್ತಿದ್ದ ಸ್ಥಳದ ಸಮೀಪದಲ್ಲಿಯೇ ಇದೆ. ಹೀಗಾಗಿ ತರಗತಿ ಕೋಣೆಗಳನ್ನು ನೋಡಿದಾಕ್ಷಣ ಹೊಯ್ಸಳ ಇತಿಹಾಸವನ್ನು ಮೆಲುಕು ಹಾಕಿದಂತಾಗುತ್ತದೆ. ಹೊಯ್ಸಳರು ನಡೆದಾಡಿದ ಮಣ್ಣಿನಲ್ಲಿರುವ ಶಾಲೆಯಲ್ಲಿ ಓದುತ್ತಿರುವ ಮಕ್ಕಳೇ ಧನ್ಯರು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಬಣ್ಣಿಸುತ್ತಾರೆ.

ಚಿತ್ರಕಲಾ ಶಿಕ್ಷಕರು, ಕಟ್ಟಡದ ಗೋಡೆಗಳಿಗೆ ಬಣ್ಣ ಬಳಿದು, ಚಿತ್ರ ಬರೆಯಬೇಕು ಎಂಬ ನಿಯಮ ಇಲ್ಲ. ಮಕ್ಕಳಿಗೆ ಚಿತ್ರಕಲೆ ಪಾಠ ಹೇಳಿದರೆ ಸಾಕು. ಆದರೆ, ಎ.ಎಸ್.ಶಂಕರೇಗೌಡ ಅವರು ವಿಶೇಷ ಆಸಕ್ತಿ ವಹಿಸಿದ್ದರಿಂದ ಶಾಲೆ ಗೋಡೆಗಳಲ್ಲಿ ಜಾಗೃತಿ ಮೂಡಿಸುವ ಚಿತ್ತಾರ ಮೂಡಿದೆ.

‘ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಪೋಷಕರಿಗೆ ಮಾಹಿತಿ ನೀಡುವ ಚಿತ್ರ ಬಿಡಿಸಲು ತಯಾರಿ ನಡೆಯುತ್ತಿದೆ. ಶಾಲಾ ಕೊಠಡಿಗಳಲ್ಲಿಯೂ ಪಠ್ಯದ ಜೊತೆಗೆ ಜ್ಞಾನಾರ್ಜನೆ ನೀಡುವ ಮಾಹಿತಿಯೊಂದಿಗೆ ಚಿತ್ರ ಬಿಡಿಸುವ ಗುರಿ ಹೊಂದಲಾಗಿದೆ. ಪ್ರಾಯೋಜಕರು ಸಹಾಯ ಮಾಡಿದರೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಎಚ್.ಆರ್.ನಾಗರಾಜು.

ಹೈಟೆಕ್ ಖಾಸಗಿ ಶಾಲೆಯನ್ನೂ ಮೀರಿಸಿದ ಗೋಡೆ ಚಿತ್ರಗಳು ರೈತ, ಸೈನಿಕ, ಮಾತಾ–ಪಿತೃಗಳ ಮಹತ್ವ ತೋರಿಸುವ ಚಿತ್ರ ಸಾಮಾಜಿಕ ಪಿಡುಗಿನ ದುಷ್ಪಾರಿಣಾಮ ಬಿಂಬಿಸುವ ಕಲಾಕೃತಿ

ಮಕ್ಕಳು ಭಾವನೆ ಉತ್ತಮ ಅಲೋಚನೆಗಳೊಂದಿಗೆ ಬೆಳೆಯಬೇಕು. ಇದಕ್ಕಾಗಿ ಗೋಡೆಗಳಲ್ಲಿ ಭಾವನಾತ್ಮಕ ಚಿಂತನಾತ್ಮಕ ಜ್ಞಾನ ನೀಡುವ ಚಿತ್ರ ಬರೆಯಲಾಗಿದೆ.

-ಎ.ಎಸ್.ಶಂಕರೇಗೌಡ ಕೆಪಿಎಸ್ ಶಾಲೆ ಚಿತ್ರಕಲಾ ಶಿಕ್ಷಕ

ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಕೀಳರಿಮೆ ಇರಬಾರದು. ನಮ್ಮ ಶಾಲೆ ಕಡಿಮೆ ಅಲ್ಲ ಎಂಬ ಭಾವನೆ ಬರಬೇಕೆಂದು ವಿವಿಧ ಕೆಲಸ ಮಾಡುತ್ತಿದ್ದೇವೆ.

-ಎಚ್.ಆರ್.ನಾಗರಾಜ್ ಕೆಪಿಎಸ್‌ ಶಾಲೆ ಮುಖ್ಯಶಿಕ್ಷಕ

ಬದಲಾದ ಶಾಲೆಗೆ ಭೇಟಿ ನೀಡಿದಾಗ ಮನಸ್ಸಿಗೆ ಹಿತ ದೊರಕಿತು. ಚಿತ್ರಗಳಿಂದ ಶಾಲೆ ಜ್ಞಾನ ದೇಗುಲವಾಗಿದೆ. ಗೋಡೆಗಳಲ್ಲಿ ಜ್ಞಾನ ಭಂಡಾರ ಅಡಗಿದೆ.

-ಎಚ್.ಪಿ.ಬಸಪ್ಪ ಶಾಲೆಯ ಹಿರಿಯ ವಿದ್ಯಾರ್ಥಿ

ಸಂದೇಶ ನೀಡುವ ಚಿತ್ರಗಳು

‘ಜೀವದೊಡೆಯ’ ಶೀರ್ಷಿಕೆಯೊಂದಿಗೆ ರೈತ ಊಳುತ್ತಿರುವ ಚಿತ್ರ ರೈತನ ಶ್ರಮ ಹಾಗೂ ದೇಶಕ್ಕೆ ಅನ್ನ ಕೊಡುವ ಪ್ರಕ್ರಿಯೆಯನ್ನು ಬಿಂಬಿಸುತ್ತದೆ. ‘ನಮ್ಮನ್ನು ಕಾಯೋ ದೇವರು’ ಶೀರ್ಷಿಕೆಯ ಸೈನಿಕನ ಚಿತ್ರ ದೇಶಭಕ್ತಿ ಮೂಡಿಸುತ್ತದೆ. ‘ಮೊದಲ ಓದು’ ಶೀರ್ಷಿಕೆಯೊಂದಿಗೆ ಮೂಡಿರುವ ಚಿತ್ರ ಓದಿ ಜ್ಞಾನ ಸಂಪಾದಿಸದಿದ್ದರೆ ಆಗುವ ಸಮಸ್ಯೆಯನ್ನು ತಿಳಿಸುತ್ತದೆ. ಬಾಲ್ಯ ವಿವಾಹದ ಜಾಗೃತಿ ಮೂಡಿಸುವ ಚಿತ್ರಗಳು ಹದಿಹರೆಯದವರಲ್ಲಿ ಸಾಂಸಾರಿಕ ಜೀವನದ ಹೊರೆಯಿಂದ ಆಗುವ ದುಷ್ಪಾರಿಣಾಮ ‘ಜ್ಞಾನಮಂದಿರ’ ಚಿತ್ರವು ಪ್ರಾಚೀನ ಕಾಲದ ಗುರುಕುಲದಿಂದ ಈಗಿನ ಶಿಕ್ಷಣ ಪದ್ಧತಿ ಬೆಳೆದು ಬಂದ ಕಥೆಯನ್ನು ಪ್ರತಿಬಿಂಬಿಸುತ್ತದೆ. ‘ಅಪ್ಪನ ಪ್ರಪಂಚ ಅಮ್ಮನ ಪ್ರೀತಿ’ ಚಿತ್ರ ಹಾಗೂ ಶ್ರವಣಕುಮಾರನ ಪಿತೃ ಭಕ್ತಿಯ ಚಿತ್ರ ತಂದೆ–ತಾಯಿ ಬಗ್ಗೆ ಭಕ್ತಿಯನ್ನು ಹುಟ್ಟಿಸುವಂತಿವೆ. ಯಂತ್ರ ಇಲ್ಲದ ಕಾಲದಲ್ಲಿನ ಉತ್ತುವುದು ಬಿತ್ತುವುದು ಒಕ್ಕಣೆ ಮಾಡುವುದು ಹಾಗೂ ರಾಗಿ ಬೀಸುವುದು ಮೊದಲಾದ ಪರಂಪರೆ ಬಿಂಬಿಸುವ ಚಿತ್ರಗಳು ಹಳೆಯ ಪದ್ಧತಿಯನ್ನು ನೆನಪಿಸುತ್ತವೆ. ಜನಸಂಖ್ಯಾ ಸ್ಫೋಟದ ದುಷ್ಟಾರಿಣಾಮವನ್ನು ಚಿತ್ರಕಲಾ ಶಿಕ್ಷಕ ಎ.ಎಸ್.ಶಂಕರೇಗೌಡ ಕುಂಚದಿಂದ ಅರಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.