ಬಾಗೂರು (ನುಗ್ಗೇಹಳ್ಳಿ): ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂಚೆ ಚೀಟಿ ಹಾಗೂ ಹಳೆಯ ನಾಣ್ಯಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೋಬಳಿ ಘಟಕದ ಅಧ್ಯಕ್ಷ ಮರಗೂರು ಧರಣೇಶ್ ತಿಳಿಸಿದರು. ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಸಲುವಾಗಿ ಸಂಪನ್ಮೂಲ ವ್ಯಕ್ತಿಗಳಾದ ಎಚ್.ಕೆ. ಸತೀಶ್ ಅವರ ಸಹಕಾರದೊಂದಿಗೆ ಅಂಚೆ ಚೀಟಿ ಹಾಗೂ ಹಳೆಯ ನಾಣ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಅಂಚೆ ಚೀಟಿ ಹಾಗೂ ಹಳೆಯ ನಾಣ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪೋಷಕರು ಸರ್ಕಾರಿ ಶಾಲೆ ಉಳಿಸುವ ದೃಷ್ಟಿಯಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಎಚ್.ಕೆ. ಸತೀಶ್ ಮಾತನಾಡಿ, ತಾವು ಅಂಚೆ ಚೀಟಿ ಸೇರಿದಂತೆ ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹ ಮಾಡಿ ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಉಚಿತವಾಗಿ ಪ್ರದರ್ಶನ ನೀಡುತ್ತಿದ್ದೇನೆ. ನನ್ನ ಮೂಲ ಉದ್ದೇಶ ವಿದ್ಯಾರ್ಥಿಗಳು ಸೇರಿದಂತೆ ಜನರಲ್ಲಿ ಹಳೆಯ ನಾಣ್ಯ ಮತ್ತು ಅಂಚೆ ಚೀಟಿಗಳ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.
ಹೋಬಳಿ ಮಕ್ಕಳ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ ಘಟಕದ ಹೋಬಳಿ ಉಪಾಧ್ಯಕ್ಷ ಕೃಷ್ಣೇಗೌಡ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜ್ಯೋತಿ, ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.