ಅರಕಲಗೂಡು: ತಾಲ್ಲೂಕಿನಲ್ಲಿ ಹಾದು ಹೋಗಿರುವ ಮಲ್ಲಿಪಟ್ಟಣ ಮಾರ್ಗದ ಹಿರೀಸಾವೆ- ಚೆಟ್ಟಹಳ್ಳಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಕನಸು ಇಂದಿಗೂ ನನಸಾಗಿಲ್ಲ. ಬದಲಾಗಿ ರಸ್ತೆ ಡಾಂಬರ್ ಕಿತ್ತು ಅಧ್ವಾನವಾಗಿದ್ದು, ನಿತ್ಯ ಸಂಚರಿಸುವ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ.
ಚನ್ನರಾಯಪಟ್ಟಣ- ಹೊಳೆನರಸೀಪುರ ಮಾರ್ಗವಾಗಿ ತಾಲ್ಲೂಕಿನ ಬೂವನಹಳ್ಳಿ ಕ್ರಾಸ್ ಗಡಿ ಭಾಗದಿಂದ ಕಳ್ಳಿಮುದ್ದನಹಳ್ಳಿ, ಹೆತ್ತಗೌಡನಹಳ್ಳಿ, ಬೈಚನಹಳ್ಳಿ, ಚಿಕ್ಕಗಾವನಹಳ್ಳಿ, ದೇವರಹಳ್ಳಿ, ಹೊನ್ನವಳಿ ಬಳಿ ಅಲ್ಲಲ್ಲಿ ಹೆಜ್ಜೆಗೊಂದು ಗುಂಡಿ ಬಿದ್ದು ಹಾಳಾಗಿರುವ ರಸ್ತೆ, ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕೊಡಗು ಜಿಲ್ಲೆ ಹಾಗೂ ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಮಲ್ಲಿಪಟ್ಟಣ ಮಾರ್ಗದಲ್ಲಂತೂ ಪ್ರಯಾಣಿಕರು ನಿತ್ಯ ಹಿಡಿಶಾಪ ಹಾಕುತ್ತಾ ಓಡಾಡುವಂತಾಗಿದೆ.
ಬೆಂಗಳೂರು ಹಾಗೂ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು, ಕೊಡುಗು ಜಿಲ್ಲೆ ಹಾಗೂ ದಕ್ಷಿಣ ಕನ್ನಡದ ಕುಕ್ಕೆಸುಬ್ರಹ್ಮಣ್ಯಕ್ಕೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಶನಿವಾರ ಹಾಗೂ ಭಾನುವಾರದ ರಜಾ ದಿನಗಳಲ್ಲಿ ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ ಓಡಾಟ ಮತ್ತಷ್ಟು ಹೆಚ್ಚಳವಾಗುತ್ತದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಹೆಚ್ಚಾಗಿ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ಕಾರುಗಳು, ದ್ವಿಚಕ್ರ ವಾಹನಗಳ ದಟ್ಟಣೆಯಿಂದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯ ಹೆಚ್ಚಾಗುತ್ತಿದೆ.
ಚನ್ನರಾಯಪಟ್ಟಣದ ಗನ್ನಿಕಡದಿಂದ ಶುರುವಾಗುವ ಗುಂಡಿ ಹೊಂಡಗಳು ಹೊಳೆನರಸೀಪುರ ಹಾಗೂ ಅರಕಲಗೂಡು ಮಾರ್ಗವಾಗಿ ಮಲ್ಲಿಪಟ್ಟಣದಿಂದ ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ 65 ಕಿಮೀ ಉದ್ದದವರೆಗೆ ಕಾಣಿಸಿಕೊಂಡಿವೆ. ಇದು ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಅರಕಲಗೂಡಿನಿಂದ ಮಲ್ಲಿಪಟ್ಟಣ ತನಕ 12 ಕಿ.ಮೀ. ದೂರದವರೆಗೆ ಡಾಂಬರ್ ಸಂಪೂರ್ಣ ಹಾಳಾಗಿದೆ.
ಮಲ್ಲಿಪಟ್ಟಣ ಹೋಬಳಿ ಸುತ್ತಮುತ್ತಲ ಹಳ್ಳಿಗಳ ಜನರು ನಿತ್ಯದ ವ್ಯವಹಾರಗಳಿಗಾಗಿ ಅರಕಲಗೂಡಿಗೆ ಬರಬೇಕಾಗಿದೆ. ಬಿದುರುಮಳೆ ಕೊಪ್ಪಲು, ಅರೇಮಾದನಹಳ್ಳಿ, ಹೇಮಾವತಿ ಜಲಾಶಯ ಹಿನ್ನೀರಿನ ದಾರಿ ಕೊಂಗಳಲೆ, ಮೊಸರಂಗಾಲ ಗೇಟ್, ಬಬ್ಬಗಳಲೆ, ಚೌರಗಲ್ ಬಳಿ ಅಲ್ಲಲ್ಲಿ ಡಾಂಬರ್ ಸಂಪೂರ್ಣ ಕಿತ್ತು ಬಂದಿದೆ. ಬಬ್ಬಗಳಲೆ ಬಳಿ ರಸ್ತೆ ಕೊರಕಲು ಬಿದ್ದು, ಮಂಡಿಯುದ್ದದ ತನಕ ಪ್ರಪಾತಕ್ಕೆ ಕುಸಿದಿತ್ತು.
ತಿರುವಿನಿಂದ ಕೂಡಿರುವ ಈ ಮಾರ್ಗದ ರಸ್ತೆ ಬದಿ ಬೆಳೆದು ನಿಂತಿರುವ ಬೃಹತ್ ಮರಗಳ ಬೀಳಲುಗಳನ್ನೂ ತೆರವುಗೊಳಿಸುವ ಕಾರ್ಯ ನಡೆದಿಲ್ಲ. ರಸ್ತೆ ಬದಿಯವರೆಗೂ ನೇತು ಬಿದ್ದಿರುವ ಮರಗಳ ಬೀಳುಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿವೆ. ಗುಂಡಿಗಳನ್ನು ಮುಚ್ಚಿ ರಸ್ತೆ ಅಭಿವೃದ್ಧಿ ಪಡಿಸಬೇಕು. ಪ್ರಯಾಣಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕುರಿತು ಇಲಾಖೆಗೆ ಮಾಹಿತಿ ಬಂದಿಲ್ಲ. ರಾಜ್ಯ ಸರ್ಕಾರ ರಸ್ತೆ ಗುಂಡಿಗಳನ್ನು ಮುಚ್ಚಲು ₹25 ಲಕ್ಷ ನೀಡಿದೆ. ಡಿಸೆಂಬರ್‌ನಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.ಸಾಗರ್ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್
ಮಲ್ಲಿಪಟ್ಟಣ ಮಾರ್ಗದ ರಸ್ತೆ ಓಡಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಮರೆತಂತಿದೆ.ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.ದುಮ್ಮಿ ಕೃಷ್ಣ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಪ್ರಧಾನ ಸಂಚಾಲಕ
ಚನ್ನರಾಯಪಟ್ಟಣ ಮಾಕುಟ್ಟ ಮಾರ್ಗದ ಈ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರ ವಾಹನಗಳ ಓಡಾಟ ಹೆಚ್ಚಿದ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ 2022ರಲ್ಲಿ ಹಸಿರು ನಿಶಾನೆ ತೋರಿದೆ. ಚನ್ನರಾಯಪಟ್ಟಣ ಹೊಳೆನರಸೀಪುರ ಅರಕಲಗೂಡು ಮಲ್ಲಿಪಟ್ಟಣ ಶನಿವಾರಸಂತೆ ಕೊಡ್ಲಿಪೇಟೆ ಸೋಮವಾರಪೇಟೆ ಮಡಿಕೇರಿ ವಿರಾಜಪೇಟೆ ಮಾಕುಟ್ಟ ತಲುಪಿ ಪೆರುಂಬುದಿ ಚೆಕ್‌ಪೋಸ್ಟ್‌ನಿಂದ ಕೇರಳದ ಕಣ್ಣೂರು ತನಕ 191 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸರ್ವೆ ನಡೆಸಲು ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ₹1700 ಕೋಟಿ ಮಂಜೂರು ಮಾಡಿದೆ. ಡಿಸೆಂಬರ್‌ನಿಂದ ಸರ್ವೆ ಆರಂಭವಾಗುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು ಎನ್ನುತ್ತಾರೆ ಅರಕಲಗೂಡಿನ ಸಮಾಜ ಸೇವಕ ನಾಗೇಂದ್ರ ಪ್ರಸಾದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.