ADVERTISEMENT

ಹಾಸನ: ಗುಂಡಿ ತುಂಬಿದ ರಸ್ತೆಗಳಲ್ಲಿ ತಪ್ಪದ ಪರದಾಟ

ಚಿದಂಬರಪ್ರಸಾದ್
Published 7 ಅಕ್ಟೋಬರ್ 2024, 6:13 IST
Last Updated 7 ಅಕ್ಟೋಬರ್ 2024, 6:13 IST
<div class="paragraphs"><p>ಹಾಸನದ ಹೊಸ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್‌ ಬಳಿ ಬಿದ್ದಿರುವ ಆಳವಾದ ಗುಂಡಿ</p></div>

ಹಾಸನದ ಹೊಸ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್‌ ಬಳಿ ಬಿದ್ದಿರುವ ಆಳವಾದ ಗುಂಡಿ

   

ಹಾಸನ: ಅತಿಯಾದ ಮಳೆಯಿಂದಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳ ದುರಸ್ತಿ ಹೋಗಲಿ, ಗುಂಡಿ ಮುಚ್ಚುವ ಕಾರ್ಯವನ್ನಾದರೂ ಮಾಡಬೇಕು ಎನ್ನುವ ಒತ್ತಾಯ ಜನರದ್ದಾಗಿದೆ.

ಹಾಸನದ ಪ್ರಮುಖ ರಸ್ತೆ ಮತ್ತು ಬಹುತೇಕ ಬಡಾವಣೆ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಎಷ್ಟೋ ಸಂದರ್ಭದಲ್ಲಿ ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸಿವೆ.

ADVERTISEMENT

ನಗರದ ಸಾಲಗಾಮೆ ರಸ್ತೆ, ಸಂಪಿಗೆ, ಶಂಕರಮಠ ರಸ್ತೆ, ಹೆದ್ದಾರಿ ಸಂಪರ್ಕಿಸುವ ಜಿಲ್ಲಾ ಆಸ್ಪತ್ರೆ ರಸ್ತೆ, ಹಳೆ ಬಸ್ ನಿಲ್ದಾಣ ಸಮೀಪ ಮತ್ತು ಹಿಂಭಾಗದ ರಸ್ತೆ, ಪೊಲೀಸ್ ಇಲಾಖೆಯ ಡಿಆರ್ ಮೈದಾನ ಸಂಪರ್ಕ ರಸ್ತೆ, ಅರಳಿಪೇಟೆ, ಸಂತೇಪೇಟೆ ವೃತ್ತ ಸೇರಿದಂತೆ ಬಹುತೇಕ ಬಡಾವಣೆಗಳ ರಸ್ತೆಗಳು ಹಲವು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಂಡಿ ಬಿದ್ದಿವೆ. ಕೆಲವು ರಸ್ತೆಗಳಲ್ಲಿ ನಗರಸಭೆಯಿಂದ ಜಲ್ಲಿಕಲ್ಲು, ಮಣ್ಣು ಹಾಕಲಾಗಿದ್ದು, ಸುಗಮ ಸಂಚಾರಕ್ಕೆ ತೊಡಕಾಗಿದೆ.

ಗುಂಡಿಬಿದ್ದ ರಸ್ತೆ ಮುಚ್ಚಲು ನಗರಸಭೆಯಿಂದ ಕ್ರಮ ಕೈಗೊಳ್ಳಲಾಗಿದೆ. ಮಳೆಯಿಂದ ಕೆಲಸ ವಿಳಂಬವಾಗಿದ್ದು, 2–3 ದಿನದಲ್ಲಿ ಗುಂಡಿ ಮುಚ್ಚಲಾಗುವುದು. ₹50 ಲಕ್ಷ ಹಣ ಅನುದಾನ ಬಿಡುಗಡೆಯಾಗಿದ್ದು, ಹಾಸನಾಂಬ ದರ್ಶನೋತ್ಸವದ ಕಾರಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಎಂದು ನಗರಸಭೆ ಎಂಜಿನಿಯರ್ ಚನ್ನೇಗೌಡ ತಿಳಿಸಿದರು.

ಸಾಲಗಾಮೆ ರಸ್ತೆ, ಎನ್.ಆರ್. ವೃತ್ತ, ಹಾಸನಾಂಬ ದೇವಾಲಯ ಸುತ್ತಲಿನ ಬಡಾವಣೆ ರಸ್ತೆ, ಸಂಪರ್ಕ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳ ಗುಂಡಿ ಮುಚ್ಚಲಾಗುವುದು ಎಂದು ಹೇಳಿದರು.

ಬೇಲೂರು ಬಸ್ ನಿಲ್ದಾಣದ ಸಮೀಪದ ಸರ್ಕಾರಿ ನೌಕರರ ಭವನದ ರಸ್ತೆಯಲ್ಲಿ ದೊಡ್ಡದಾದ ಗುಂಡಿಗಳು ಬಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿದೆ. ಈ ರಸ್ತೆ ಕಿರಿದಾಗಿದ್ದು, ವಾಹನ ದಟ್ಟಣೆ ಅಧಿಕವಾಗಿದೆ. ಈ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಕಿರಿಕಿರಿಯಾಗಿದೆ. ಸ್ಟೇಷನರಿ ಅಂಗಡಿಗಳು ಹೆಚ್ಚಿರುವ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತಿರುಗಾಡುತ್ತಾರೆ. ಈ ಗುಂಡಿಗಳಿದಾಂಗಿ ಸಾಕಷ್ಟು ಅವಘಡಗಳು ಸಂಭವಿಸಿವೆ.

ಹಳೇಬೀಡು ಸಂಪರ್ಕ ರಸ್ತೆಗಳು ಗುಂಡಿಬಿದ್ದಿವೆ. ಹಗರೆ ಮಾರ್ಗದ ಹಾಸನ-ಬೇಲೂರು ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿದ್ದರೂ ಗುಂಡಿ ಮುಚ್ಚುವವರಿಲ್ಲದೆ, ವಾಹನ ಸಂಚಾರಕ್ಕೆ ತೊಡಕಾಗಿದೆ.  ಹಳೇಬೀಡು, ಬೇಲೂರು ಪ್ರವಾಸಿಗರು ಮಾತ್ರವಲ್ಲದೇ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ದೂರದಿಂದ ಬರುವವರಿಗೆ ತೊಂದರೆಯಾಗಿದೆ.

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ‌ ರಸ್ತೆ ಗುಂಡಿ ಮುಚ್ಚಿಲ್ಲ. ರಾಜನ ಹಿರಿಯೂರು ರಸ್ತೆ ಡಾಂಬರೀಕರಣ ವಿಳಂಬವಾಗಿದೆ. ಹಾಸನದಿಂದ ಹಳೇಬೀಡಿಗೆ ಸಂಪರ್ಕ ಕಲ್ಪಿಸುವ ಹಗರೆ ಹಾಗೂ ಅಡಗೂರು ಎರಡೂ ಮಾರ್ಗದ ರಸ್ತೆ ಸಮಸ್ಯೆಯಿಂದ ಪ್ರವಾಸಿಗರು ಹಾಗೂ ಪ್ರಯಾಣಿಕರು ಬಸವಳಿದಿದ್ದಾರೆ.

ಅರಕಲಗೂಡು ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿಗಳು ಹಾಗೂ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಪ್ರಯಾಣ ಪ್ರಯಾಸವಾಗಿ ಪರಿಣಮಿಸಿದೆ. ಅಪಘಾತಗಳಿಗೂ ಕಾರಣವಾಗುತ್ತಿದೆ.

ಅರಕಲಗೂಡಿನಿಂದ ಮಲ್ಲಿಪಟ್ಟಣ ತನಕ 12 ಕಿ.ಮೀ. ದೂರದವರೆಗೆ ರಾಜ್ಯ ಹೆದ್ದಾರಿಯಲ್ಲಿ ಡಾಂಬರು ಹಾಳಾಗಿ ಗುಂಡಿ ಹೊಂಡವಾಗಿ ಮಾರ್ಪಟ್ಟಿದೆ. ಕೊಡಗು, ಸಕಲೇಶಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ವಾರಾಂತ್ಯದಲ್ಲಿ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಿದ್ದು, ಪ್ರವಾಸಿಗರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಅರಕಲಗೂಡು ಹೊಳೇನರಸೀಪುರ ರಸ್ತೆ, ಮಲ್ಲಿಪಟ್ಟಣ ಕೊಣನೂರು ರಸ್ತೆ, ರಾಮನಾಥಪುರ ಹನ್ಯಾಳು, ಆಲೂರು ಸಿದ್ದಾಪುರ, ಬೆಮ್ಮತ್ತಿ, ಬರಗೂರು ರಸ್ತೆಗಳು ಹಾಳಾಗಿದ್ದು, ತುರ್ತಾಗಿ ದುರಸ್ತಿ ಮಾಡಬೇಕಿದೆ. ಮಾಗಡಿ ಸೋಮವಾರ ಪೇಟೆ  ಕೆ-ಶಿಫ್ ಯೋಜನೆಯಡಿ ನಿರ್ಮಾಣಗೊಂಡಿರುವ ರಸ್ತೆ ಸಹ  ಅವೈಜ್ಞಾನಿಕವಾಗಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಇತ್ತೀಚೆಗೆ ನಿರಂತರ ಧರಣಿ ನಡೆಸಲಾಗಿತ್ತು.

ಹಿರೀಸಾವೆಯಿಂದ ಕೊಳ್ಳೆನಹಳ್ಳಿ, ಕೊತ್ತನಹಳ್ಳಿ ಸೇರಿದಂತೆ ಮಂಡ್ಯ ಜಿಲ್ಲೆಗೆ ಸಂಪರ್ಕಿಸುವ ರಸ್ತೆಗೆ ಒಂದು ವರ್ಷದ ಹಿಂದೆ ಕೆರೆ ಏರಿ ಸೇರಿದಂತೆ ಡಾಂಬರ್ ಮತ್ತು ಸಿಮೆಂಟ್ ಹಾಕಲಾಗಿದೆ. ಆದರೆ ರೈಲ್ವೆ ಸೇತುವೆಯ ಕೆಳಭಾಗದಲ್ಲಿ  ಮಳೆಯ ನೀರು ಸರಿಯಾಗಿ ಹರಿಯದೇ, ರಸ್ತೆ ಮಧ್ಯದಲ್ಲಿ ಕೊಚ್ಚೆ ನೀರು ನಿಲ್ಲುತ್ತದೆ. ಈ ಮಾರ್ಗದಲ್ಲಿ ನಡೆದುಕೊಂಡು ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಕೊಳಚೆ ನೀರಿನಲ್ಲಿ ನಡೆದು ಬರಬೇಕಿದೆ.

ಹೋಬಳಿಯ ಮೂಕಿಕೆರೆಯಿಂದ ಬಿಳಿಕೆರೆಗೆ ಬರುವ ರಸ್ತೆಯ ಕೆಲವು ಭಾಗದಲ್ಲಿ ಡಾಂಬರ್ ಕಿತ್ತು ಹೋಗಿದೆ. ಕರಿಕ್ಯಾತನಹಳ್ಳಿ ಗ್ರಾಮದೊಳಗಿನ ಸಣ್ಣ ರಸ್ತೆ ಡಾಂಬರ್ ಕಿತ್ತು ಹೋಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರು ಗಮನ ಹರಿಸಿಲ್ಲ. ಇದೇ ಗ್ರಾಮದಿಂದ ಉಳ್ಳಾವಳಿಯ ಮತ್ತು ಡಿ.ತುಮಕೂರು ಗ್ರಾಮಗಳಿಗೆ ಸಂಪರ್ಕ ಕಲ್ಲಿಸುವ ರಸ್ತೆಗಳು ಹಾಳಾಗಿವೆ ಎನ್ನುತ್ತಾರೆ ಗ್ರಾಮದ ತುಳಸಿರಾಜ್.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಅಲ್ಲಲ್ಲಿ ರಸ್ತೆ ಹದಗೆಟ್ಟಿದೆ. ಕೆಲವು ಕಡೆ ಜಮೀನಿಗೆ ಪೈಪ್‍ಗಳನ್ನು ಅಳಡಿಸಲು ರಸ್ತೆ ಅಗೆಯಲಾಗಿದೆ. ಅದನ್ನು ಸಮರ್ಪಕವಾಗಿ ಮುಚ್ಚದಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. 

ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆಯಾಗುತ್ತಿದೆ. ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಐಟಿಐ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಗುಂಡಿ ಬಿದ್ದು ಮಳೆ ನೀರು ನಿಂತಿದೆ. ಅಲ್ಲಿಂದ 100 ಮೀಟರ್ ರಸ್ತೆ ಹದೆಗಟ್ಟಿದೆ.   ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ದುರಸ್ತಿ ಮಾಡಬೇಕು ಎನ್ನುತ್ತಾರೆ ಆ ಭಾಗದ ಜನತೆ.

ಆಲೂರು ತಾಲ್ಲೂಕಿನ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಗ್ರಾಮೀಣ ಪ್ರದೇಶದ ರಸ್ತೆಗಳ ಪರಿಸ್ಥಿತಿ ಹೇಳುತೀರದಾಗಿದೆ. ಜನಸಾಮಾನ್ಯರು, ವಾಹನಗಳು ಓಡಾಡಲು ತೊಂದರೆಯಾಗಿದೆ. ಪಟ್ಟಣ ವ್ಯಾಪ್ತಿಯ ಸಿಮೆಂಟ್ ರಸ್ತೆ ಹೊರತುಪಡಿಸಿದರೆ ಗ್ರಾಮೀಣ ಪ್ರದೇಶದ ಮಣ್ಣಿನ ರಸ್ತೆ, ಡಾಂಬರ್ ರಸ್ತೆಗಳು ಕಿತ್ತು ಹೋಗಿವೆ. ಗ್ರಾಮೀಣ ಪ್ರದೇಶದಲ್ಲೂ ನಿತ್ಯ ನೂರಾರು ವಾಹನಗಳು ಓಡಾಡುವುದರಿಂದ ರಸ್ತೆಗಳಲ್ಲಿರುವ ಗುಂಡಿಗಳು ದಿನದಿಂದ ದಿನಕ್ಕೆ ಆಳವಾಗಿ ವಾಹನಗಳು ಹಾಳಾಗುತ್ತಿವೆ.

ಪೂರಕ ಮಾಹಿತಿ: ಸಂತೋಷ್ ಸಿ.ಬಿ., ಜಿ. ಚಂದ್ರಶೇಖರ್‌, ಸಿದ್ದರಾಜು, ಹಿ.ಕೃ. ಚಂದ್ರು, ಎಂ.ಪಿ. ಹರೀಶ್‌, ಎಚ್‌.ಎಸ್‌. ಅನಿಲ್‌ಕುಮಾರ್, ಮಲ್ಲೇಶ್‌

ಗ್ಯಾರಂಟಿಗಾಗಿ ಗುಂಡಿ ಮರೆತ ಸರ್ಕಾರ

646 ಕಿ.ಮೀ. ರಸ್ತೆ ಹಾಳಾಗಿದೆ. 38 ಸೇತುವೆಗಳಿಗೆ ಹಾನಿಯಾಗಿದೆ. ರಸ್ತೆಗಳು ಗುಂಡಿಮಯವಾಗಿವೆ. ಗ್ಯಾರಂಟಿಗಳನ್ನು ಕೊಡುವುದರಲ್ಲಿ ನಿರತವಾಗಿರುವ ಸರ್ಕಾರ ರಸ್ತೆ ಗುಂಡಿಗಳನ್ನು ಮರೆತಿದೆ.

ಎಚ್.ಡಿ.ರೇವಣ್ಣ, ಶಾಸಕ

ಅನುದಾನ ಕೊಡದ ಸರ್ಕಾರ

ಹಾಸನ ನಗರ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚಲು ಅನುದಾನದ ಕೊರತೆ ಇದೆ. ಹಾಸನಾಂಬ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕೇವಲ ದೇವಾಲಯದ ಸುತ್ತ ಹಾಗೂ ಪ್ರಮುಖ ರಸ್ತೆಗಳ ಗುಂಡು ಮುಚ್ಚುವ ಕಾಮಗಾರಿ ಮಾಡುತ್ತಿದ್ದಾರೆ. ನಗರದಲ್ಲಿ ಅಭಿವೃದ್ಧಿ ಪೂರಕ ಹಣ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

ವೇಣುಗೋಪಾಲ್, ಬಿಜೆಪಿ ಮುಖಂಡ, ಹಾಸನ

ಗುಂಡಿ ಮುಚ್ಚಿ

ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಗುಂಡಿಗಳು ಮಳೆ ನೀರಿನಿಂದ ಅಕ್ಕಪಕ್ಕದ ಅಂಗಡಿಗಳಿಗೆ ನುಗ್ಗಿ ನಷ್ಟ ಸಂಭವಿಸಿದೆ. ಪುರಸಭೆಯವರು ಕೊಡಲೇ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಬೇಕು.

ಐ.ಎನ್. ಅರುಣ್ ಕುಮಾರ್, ಸ್ಟೇಷನರಿ ವ್ಯಾಪಾರಿ, ಬೇಲೂರು

ಕಾಂಕ್ರೀಟ್‌ ರಸ್ತೆ ನಿರ್ಮಾಣ

ಈ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲಿಯವರೆಗೆ ತೊಂದರೆ ಆಗದಂತೆ ಗುಂಡಿ ಮುಚ್ಚಿಸಲಾಗುವುದು.

ಎ.ಆರ್.ಅಶೋಕ್, ಬೇಲೂರು ಪುರಸಭೆ ಅಧ್ಯಕ್ಷ

ಪ್ರವಾಸಿಗರ ಸಂಖ್ಯೆ ಇಳಿಮುಖ

ರಸ್ತೆ ದುಸ್ಥಿತಿಯಿಂದ ಹಳೇಬೀಡಿಗೆ ಬರುವ ಪ್ರಯಾಣಿಕರು ಸಂಖ್ಯೆ ಇಳಿಮುಖವಾಗುತ್ತಿದೆ. ಸದ್ಯಕ್ಕೆ ರಸ್ತೆ ಗುಂಡಿ ‌ಮುಚ್ಚಿಸಿದರೆ, ಪ್ರವಾಸಿಗರು ನೆಮ್ಮದಿಯ ಪ್ರಯಾಣ ಮಾಡಬಹುದು.

ಮುನ್ನಾಭಾಯಿ, ರೈತ ಮುಖಂಡ, ಹಳೇಬೀಡು

ದುರಸ್ತಿಗೆ ಕ್ರಮ ಕೈಗೊಳ್ಳಿ

ಅರಕಲಗೂಡು ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಹಾಳಾಗಿರುವ ರಸ್ತೆ ದುರಸ್ತಿಗೆ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ಗಮನ ಹರಿಸಬೇಕು.

ಸೀಬಳ್ಳಿ ಯೋಗಣ್ಣ, ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ

ಶೀಘ್ರ ಕಾಮಗಾರಿ ಆರಂಭ

ಅರಕಲಗೂಡು ತಾಲ್ಲೂಕಿನಲ್ಲಿ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಸರ್ಕಾರ ಹಣ  ಬಿಡುಗಡೆ ಮಾಡಿದೆ. ರಾಜ್ಯ ಹೆದ್ದಾರಿಗೆ ₹80 ಲಕ್ಷ ಹಾಗೂ ಎಂಡಿಆರ್ ರಸ್ತೆಗೆ ₹1.20 ಕೋಟಿ ಮಂಜೂರಾಗಿದೆ. ಶೀಘ್ರ ದುರಸ್ಥಿ ಕಾರ್ಯ ನಡೆಯಲಿದೆ.

ಸಾಗರ್, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌

ನಿತ್ಯದ ತೊಂದರೆ

ಹಿರೀಸಾವೆಯಿಂದ ಕೊಳ್ಳೆನಹಳ್ಳಿ, ಕೊತ್ತನಹಳ್ಳಿ ರಸ್ತೆಯ ರೈಲ್ವೆ ಸೇತುವೆ ಕೆಳಗಡೆ ನೀರು ನಿಂತು, ಪಾದಚಾರಿಗಳು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಅಣ್ಣಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಕೊತ್ತನಹಳ್ಳಿ.

₹8 ಕೋಟಿ ಪ್ರಸ್ತಾವ

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸದಾಗಿ ₹8 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಇದುವರೆಗೆ ರಸ್ತೆ  ಅಭಿವೃದ್ದಿಗೆ ₹45 ಲಕ್ಷ ಬಿಡುಗಡೆಯಾಗಿದೆ ಅಷ್ಟೇ. ಪುರಸಭಾ ವ್ಯಾಪ್ತಿಯಲ್ಲಿ ಪುರಸಭಾ ತೆರಿಗೆ ಮತ್ತು 15ನೇ ಹಣಕಾಸು ಯೋಜನೆಯಡಿ ರಸ್ತೆ ಅಭಿವೃದ್ದಿ ಕೈಗೊಳ್ಳಲಾಗುತ್ತಿದೆ.

ಸಿ.ಎನ್.ಬಾಲಕೃಷ್ಣ, ಶಾಸಕ

ಸರ್ಕಾರಕ್ಕೆ ಅಂದಾಜು ಪಟ್ಟಿ

ಭಾರಿ ಮಳೆಯಲ್ಲಿ ರಸ್ತೆಗಳು ದುರಸ್ತಿಗಳಿಗಾಗಿ ಸರ್ಕಾರಕ್ಕೆ ಅಂದಾಜು ಪಟ್ಟಿಯೊಂದಿಗೆ ಮಾಹಿತಿ ನೀಡಲಾಗಿದೆ. ಸರ್ಕಾರದೊಡನೆ ಚರ್ಚಿಸಿ, ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲು ಶ್ರಮಿಸುತ್ತೇನೆ.

ಸಿಮೆಂಟ್ ಮಂಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.