ಹಾಸನ: ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಆಕ್ರೋಶ ಭುಗಿಲೆದ್ದಿದ್ದು, ಇಬ್ಬರನ್ನೂ ಬಂಧಿಸುವಂತೆ ಆಗ್ರಹಿಸಿ ಜನಪರ ಚಳವಳಿಗಳ ಒಕ್ಕೂಟದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಹಾರಾಜ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆಸಿದ ಸದಸ್ಯರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಮಾತನಾಡಿ, ‘ಅಶ್ಲೀಲ ವಿಡಿಯೊಗಳ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು. ಅಶ್ಲೀಲ ದೃಶ್ಯಗಳನ್ನು ಪೆನ್‌ಡ್ರೈವ್ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಪೆನ್‌ಡ್ರೈವ್‌ಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಹರಡುತ್ತಿರುವುದರಿಂದ ಸಂತ್ರಸ್ತ ಮಹಿಳೆಯರ ಗೋಪ್ಯತೆಗೆ ಧಕ್ಕೆ ಉಂಟಾಗುತ್ತಿದ್ದು, ಸಾರ್ವಜನಿಕವಾಗಿ ಈ ರೀತಿ ಮಾಹಿತಿ ಬಹಿರಂಗವಾದರೆ ಸಂತ್ರಸ್ತ ಕುಟುಂಬದಲ್ಲಿ ಆಘಾತ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು. ಅವರಿಗೆ ನೀಡಿರುವ ಸರ್ಕಾರದ ಭದ್ರತೆ ಹಿಂಪಡೆಯಬೇಕು’ ಎಂದು ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆಯ ರಾಜ್ಯ ಘಟಕದ ಸಹ ಸಂಚಾಲಕ ಮರಿ ಜೋಸೆಫ್ ಒತ್ತಾಯಿಸಿದರು.
ಪಾಪದ ಕೊಡ ತುಂಬಿದಾಗ ಹೊರಬರಲೇಬೇಕು:
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ‘ರಾಜ್ಯದಿಂದ ಎಸ್ಐಟಿ ರಚನೆಯಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು. ಶಿಶುಪಾಲನಿಗೆ ಕೃಷ್ಣ ನೂರು ತಪ್ಪು ಮಾಡಲು ಅವಕಾಶ ಕೊಟ್ಟ. 101ನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ರೇವಣ್ಣ ಕುಟುಂಬದ ವಿರುದ್ಧ ಆಕ್ರೋಶ ಹೊರಹಾಕಿದರು.
‘ಎಲ್ಲ ರೀತಿಯಲ್ಲೂ ನ್ಯಾಯ ಸಿಗುತ್ತದೆ. ಮನವಿಯನ್ನು ಪರಿಗಣಿಸಿದ್ದೇನೆ, ಸೂಕ್ತ ತನಿಖೆಯಾಗಿ ನ್ಯಾಯ ಸಿಗುತ್ತದೆ. ಇಂತಹ ಘಟನೆಯಾದಾಗ ನಾವು ಪ್ರತಿಭಟಿಸಬೇಕು. ತಮ್ಮನ್ನು ತಾವು ರಕ್ಷಣೆ ಮಾಡುವಷ್ಟು ಮಹಿಳೆ ಮುಂದುವರಿದಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ’ ಎಂದು ಹೇಳಿದರು.
ದೂರುದಾರ ಮಹಿಳೆ ಸರಿ ಇಲ್ಲ: ಅತ್ತೆಯ ಆರೋಪ ದೂರುದಾರ ಮಹಿಳೆಯ ಅತ್ತೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘5 ವರ್ಷದಿಂದ ಸುಮ್ಮನೆ ಇದ್ದು ಈಗ ದೂರು ನೀಡಿದ್ದಾರೆ. ಭವಾನಿ ಅಮ್ಮ ನಮ್ಮ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದ್ದಾರೆ. ಅವರು ನಮ್ಮ ಕುಟುಂಬದ ಜೊತೆ ಇದ್ದರು. ಹೆದರಿಸಿ ಇವರನ್ನು ಕರೆದುಕೊಂಡು ಹೋಗಿ ದೂರು ಕೊಡಿಸಿದ್ದಾರೆ’ ಎಂದು ಆರೋಪಿಸಿದರು. ‘ಚುನಾವಣೆ ಸಮಯದಲ್ಲಿ ಗೌಡರ ಮನೆಗೆ ಕಪ್ಪು ಚುಕ್ಕೆ ತರಲು ಈ ಕೆಲಸ ಮಾಡಿದ್ದಾರೆ. ಇದೆಲ್ಲ ಸುಳ್ಳು ದೂರು. ರೇವಣ್ಣ ಕುಟುಂಬ ನಮಗೆ ಸಂಬಂಧಿಕರು. ದೂರು ನೀಡಿರುವ ಮಹಿಳೆ ಸರಿಯಿಲ್ಲ. ತುಂಬಾ ಸಾಲ ಮಾಡಿಕೊಂಡಿದ್ದರು. ಜಮೀನು ಸಹ ಮಾರಾಟ ಮಾಡಿದ್ದಾರೆ. ಆ ಮಹಿಳೆ ಸುಳ್ಳು ಹೇಳುತ್ತಿದ್ದಾರೆ. ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡುತ್ತೇವೆ ಗೌಡರ ಕುಟುಂಬ ತಪ್ಪು ಮಾಡಿಲ್ಲ’ ಎಂದು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.