ಹಾಸನ: ಲೋಕಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣ ಎನ್‌ಡಿಎ ಅಭ್ಯರ್ಥಿ ಅಲ್ಲ. ಈ ಬಗ್ಗೆ ಸೀಟು ಹಂಚಿಕೆ ವೇಳೆಯಲ್ಲಿ ತೀರ್ಮಾನ ಆಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಜಿ ಪ್ರಧಾನಿ ಹಿರಿಯರಿದ್ದಾರೆ. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಗೆಲ್ಲಬೇಕು. ಮೋದಿಯವರು ಮತ್ತೆ ಪ್ರಧಾನಿ ಆಗಬೇಕೆಂಬ ಬದ್ಧತೆ ಅವರಿಗಿದೆ’ ಎಂದರು.
ಅವರ ನಿರ್ಧಾರ ಬಹುಶಃ ಮೈತ್ರಿಕೂಟಕ್ಕೆ ಒಳಗೊಂಡಂತೆ ಇರಬೇಕು. ಆ ಉದ್ದೇಶದಿಂದ ಜಿಲ್ಲಾ ಪ್ರವಾಸ ಮಾಡಿದ್ದಾರೆ. ಜೆಡಿಎಸ್‌ನಿಂದ ಪ್ರಜ್ವಲ್ ಅಭ್ಯರ್ಥಿ ಆಗುತ್ತಾರೆ ಎಂದು ಅವರು ಮತ ಹೇಳಿದ್ದು, ಅದು ಸ್ವಾಭಾವಿಕ. ಆದರೆ ಪ್ರಜ್ವಲ್ ಎನ್‌ಡಿಎ ಅಭ್ಯರ್ಥಿ ಎಂದು ಹಿರಿಯರು ಎಲ್ಲಿಯೂ ಹೇಳಿಲ್ಲ. ಅವರಿಗೂ ರಾಜಕೀಯ ಅನುಭವ ಇದೆ ಎಂದರು.
ಹಾಸನದಿಂದ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳುವುದಿಲ್ಲ. ಆದರೆ ಕೊಟ್ಟಿದ್ದಾರೆ ಎನ್ನುವ ಮಾತು ಸತ್ಯ ಅಲ್ಲ. ಅದು ಚರ್ಚೆ ಹಂತದಲ್ಲಿದೆ. ಯಾರಿಗೆ ಈ ಕ್ಷೇತ್ರ ಎಂದು ಹಿರಿಯರು ತೀರ್ಮಾನ ಮಾಡುತ್ತಾರೆ. ನಾವು ಅಭ್ಯರ್ಥಿ ಆಗಬೇಕು ಎಂದರೆ, ಜೆಡಿಎಸ್‌ನವರ ಅವರು ಅಭಿಪ್ರಾಯ ಕೇಳುತ್ತೇವೆ. ಅವರು ಅಭ್ಯರ್ಥಿ ಆಗುವುದಾದರೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಅಂತಿಮವಾಗಿ ಗೆಲುವೇ ಇಲ್ಲಿ ಮಾನದಂಡ ಎಂದು ಸ್ಪಷ್ಟಪಡಿಸಿದರು.
ನಿನ್ನೆ ಬೆಂಗಳೂರಿನಲ್ಲಿ ರಾಜ್ಯ ರಾಜಕಾರಣಿ ಸಭೆಯಾಗಿದೆ. ಮುಂದಿನ ತಿಂಗಳು ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಲಿದೆ. ಕಾರ್ಯಕರ್ತರ ಭಾವನೆ ಆಧರಿಸಿ ಲೋಕಸಭಾ ಅಭ್ಯರ್ಥಿ ಆಯ್ಕೆ ಅಂತಿಮ ಆಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು, ಡಿ.ಕೆ ಶಿವಕುಮಾರ್ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಯಾವಾಗ ಯಾರ‍್ಯಾರನ್ನು ಭೇಟಿ ಮಾಡುತ್ತಾರೆ ನನಗೆ ಮಾಹಿತಿ ಇಲ್ಲ ಎಂದರು.
ನಾನು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಯಾರೋ ವ್ಯಕ್ತಿ, ಇನ್ನೊಬ್ಬ ವ್ಯಕ್ತಿಯನ್ನು ಭೇಟಿಯಾದರೆ, ಆ ಬಗ್ಗೆ ಮಾತನಾಡಲ್ಲ. ಬಹುಶಃ ಜಿಲ್ಲೆಯ ಅಭಿವೃದ್ಧಿಗಾಗಿ ಪೂರಕವಾಗಿ ನೀರಾವರಿ ವಿಚಾರ ಮಾತನಾಡಲು ಹೋಗಿರಬೇಕು ಎನ್ನುವುದು ನನ್ನ ಭಾವನೆ ಎಂದರು.
ಅದಕ್ಕೂ ಮೀರಿ ಬೇರೆ ಏನಾದರೂ ಇದ್ದರೆ, ಅದನ್ನು ಅವರೇ ಹೇಳಬೇಕು. ಜೆಡಿಎಸ್ ರಾಜಕೀಯವಾಗಿ ಮಾತಿಗೆ ತಪ್ಪದೇ ಇರುವ ಪಕ್ಷ. ಅವರು ಮೋದಿಯವರನ್ನು ಭೇಟಿಯಾಗಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದ್ದಾರೆ. ಹಾಗಾಗಿ ಅವರು ಬೇರೆ ಯೋಚನೆ ಮಾಡುವುದಿಲ್ಲ ಎನ್ನುವ ನಂಬಿಕೆ ನನಗಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ನಿಂದ ಜನರು ದೂರ: ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಸಮಾರಂಭದಿಂದ ದೂರ ಉಳಿದ ಕಾಂಗ್ರೆಸ್ ನಿಲುವಿನಿಂದ ಜನರು ಬೇಸತ್ತಿದ್ದು, ಕಾಂಗ್ರೆಸ್‌ನಿಂದ ದೂರ ಆಗುತ್ತಿದ್ದಾರೆ. ಅವರೆಲ್ಲ ಬಿಜೆಪಿಯತ್ತ ಬರುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನವರು ರಾಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಬೇಕಿತ್ತು ಎನ್ನುವುದು ಜನರ ಭಾವನೆಯಾಗಿತ್ತು. ಆದರೆ, ಅವರು ತೆಗೆದುಕೊಂಡಿರುವ ನಿಲುವಿನಿಂದ ಜನರ ಭ್ರಮನಿರಸನಗೊಂಡಿದ್ದಾರೆ. ತಳಮಟ್ಟದಲ್ಲಿ ದೇಶದಾದ್ಯಂತ ಲಕ್ಷಾಂತರ ಜನರು ಬಿಜೆಪಿಯತ್ತ ಬರುತ್ತಿದ್ದಾರೆ.
ಜಗದೀಶ್ ಶೆಟ್ಟರ ಸೇರಿದಂತೆ ಬಿಜೆಪಿ ಬಿಟ್ಟು ಹೋದವರು, ಬೇರೆ ಪಕ್ಷದ ಅನೇಕರು ಬಿಜೆಪಿಗೆ ಬರಲಿದ್ದಾರೆ. ಶೆಟ್ಟರ ಅವರ ರೀತಿಯಲ್ಲಿ ಅನೇಕ ನಾಯಕರು ಪಕ್ಷಕ್ಕೆ ಬರುವವರಿದ್ದಾರೆ.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಭಾನುವಾರ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ನೂರಾರು ಮಂದಿ ಆಲಿಸಿದರು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ನೂರಾರು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಎಲ್ಈಡಿ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಪ್ರೀತಂ ಗೌಡ ಮಾತನಾಡಿ ನರೇಂದ್ರ ಮೋದಿ ಅವರ ಅಧಿಕಾರ ಅವಧಿಯಲ್ಲಿ 109 ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ದೇಶದಾದ್ಯಂತ ಇಂದು ಆಲಿಸಲಾಗುತ್ತಿದ್ದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುವ ವಿಚಾರಗಳನ್ನು ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ ಎಂದರು. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ರೇಡಿಯೋ ಮಾಧ್ಯಮವನ್ನು ಜೀವಂತವಾಗಿ ಇಡಲು ಮನ್ ಕೀ ಬಾತ್ ಸಹಕಾರಿಯಾಗಿದೆ. ಕೇವಲ ರಾಜಕೀಯವಾಗಿ ಅಲ್ಲದೆ ಸಾಮಾಜಿಕ ಕಳಕಳಿ ಹೊಂದಿರುವ ಮನ್ ಕೀ ಬಾತ್ ದೇಶದ ಜನರಿಗೆ ಉತ್ತಮ ಸಂದೇಶ ನೀಡುತ್ತಿದೆ ಎಂದರು. ಹುಡಾ ಮಾಜಿ ಅಧ್ಯಕ್ಷ ಲಲಾಟ್ ಮೂರ್ತಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಮುಖಂಡರಾದ ಕಿರಣ್ ಜಿ. ದೇವರಾಜೇಗೌಡ ಹರ್ಷಿತ್ ಅಮಿತ್ ಶೆಟ್ಟಿ ಐನೆಟ್ ವಿಜಯ್ ಕುಮಾರ್ ಪ್ರೀತಿವರ್ಧನ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.