ADVERTISEMENT

ಎಚ್‌ಡಿಡಿ ಕುಟುಂಬದ ತೇಜೋವಧೆ ಆರೋಪ: ಹಾಸನದಲ್ಲಿ ಜೆಡಿಎಸ್‌ ಪ್ರತಿಭಟನೆ

ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಹಂಚಿದ ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 13:55 IST
Last Updated 26 ಜೂನ್ 2024, 13:55 IST
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ರಾಜಕೀಯ ದುರುದ್ದೇಶದಿಂದ ತೇಜೋವಧೆ ಹಾಗೂ ಅಶ್ಲೀಲ ವಿಡಿಯೊ ಪೆನ್ ಡ್ರೈವ್ ಹಂಚಿದ ಆರೋಪಿಗಳನ್ನು ಬಂಧಿಸದೇ ಇರುವುದನ್ನು ಖಂಡಿಸಿ, ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಹಾಗೂ ಸದಸ್ಯರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ರಾಜಕೀಯ ದುರುದ್ದೇಶದಿಂದ ತೇಜೋವಧೆ ಹಾಗೂ ಅಶ್ಲೀಲ ವಿಡಿಯೊ ಪೆನ್ ಡ್ರೈವ್ ಹಂಚಿದ ಆರೋಪಿಗಳನ್ನು ಬಂಧಿಸದೇ ಇರುವುದನ್ನು ಖಂಡಿಸಿ, ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಹಾಗೂ ಸದಸ್ಯರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು   

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ರಾಜಕೀಯ ದುರುದ್ದೇಶದಿಂದ ತೇಜೋವಧೆ ಹಾಗೂ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಹಂಚಿದ ಆರೋಪಿಗಳನ್ನು ಬಂಧಿಸದೇ ಇರುವುದನ್ನು ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಹಾಗೂ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಎದುರು ಸೇರಿದ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮೆರವಣಿಗೆಯಲ್ಲಿ ಎನ್‌.ಆರ್. ವೃತ್ತದ ಮೂಲಕ ಸಾಗಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಜೆಡಿಎಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆರು ದಶಕಗಳ ಕಾಲ ರಾಜ್ಯ ಹಾಗೂ ದೇಶದ ರಾಜಕೀಯ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಸಂದರ್ಭದಲ್ಲಿಯೂ ದೇಶದ ಕಾನೂನಿಗೆ ಗೌರವ ಕೊಡುತ್ತಾ ಬಂದಿದ್ದಾರೆ. ಹಾಗೆಯೇ ಯಾರೇ ತಪ್ಪು ಮಾಡಿದರು ಕಾನೂನು ಪ್ರಕಾರ ಶಿಕ್ಷೆ ಆಗಲಿ ಎಂದು ಪ್ರತಿಪಾದಿಸಿದ್ದಾರೆ. ಆದರೆ ಇತ್ತೀಚಿನ ಕೆಲ ಪ್ರಕರಣಗಳಲ್ಲಿ ದೇವೇಗೌಡರ ಕುಟುಂಬವನ್ನು ಹಣಿಯಲು ಕಾಂಗ್ರೆಸ್ ಸರ್ಕಾರ ಹೊರಟಿದ್ದು ನಿಜವಾದ ಆರೋಪಿಗಳನ್ನು ಬಂಧಿಸದೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಶಾಸಕ ಎಚ್‌.ಡಿ.ರೇವಣ್ಣ ಸಹ ಕಾನೂನು ಪಾಲನೆ ಮಾಡುತ್ತಾ ಬಂದಿದ್ದಾರೆ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಆದರೂ ಕಾಂಗ್ರೆಸ್ ನವರು ರಾಜಕೀಯ ದುರುದ್ದೇಶ ದಿಂದ ದೇವೇಗೌಡರ ಕುಟುಂಬವನ್ನು ಹಣಿಯುವ ಕೆಲಸದಲ್ಲಿ ನಿರತವಾಗಿದೆ ಎಂದು ದೂರಿದರು.

ಅಶ್ಲೀಲ ದೃಶ್ಯಾವಳಿಯುಳ್ಳ ಪೆನ್ ಡ್ರೈವ್ ಹಂಚಿಕೆ ಮಾಡಿರುವ ಪ್ರಮುಖ ಆರೋಪಿಗಳ ವಿರುದ್ಧ ದೂರು ದಾಖಲಾಗಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕಾರ ಮಾಡಿದ್ದರೂ ಆರೋಪಿಗಳನ್ನು ಇದುವರೆಗೆ ಬಂಧಿಸಿಲ್ಲ ಏಕೆ? ಎಂದು ಪ್ರಶ್ನಿಸಿದ ಅವರು, ಆರೋಪಿಗಳು ರಾಜಾರೋಷವಾಗಿ ಕಾಂಗ್ರೆಸ್ ಜನ ಪ್ರತಿನಿಧಿಗಳು, ಮುಖಂಡರ ಜೊತೆ ಸಭೆ, ಸಮಾರಂಭ, ವಿಜಯೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪಕ್ಷಪಾತ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ಈ ನೆಲದ ಕಾನೂನಿಗೆ ಗೌರವ ಕೊಡುವ ನಿಟ್ಟಿನಲ್ಲಿ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಯಾವುದೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಂಡು ಪೆನ್ ಡ್ರೈವ್ ಹಂಚಿಕೆ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು, ನಿಷ್ಪಕ್ಷಪಾತ ತನಿಖೆಯನ್ನು ಕೈಗೊಂಡು ನ್ಯಾಯ ಒದಗಿಸಬೇಕು. ಸರ್ಕಾರ ಕ್ರಮವಹಿಸದೆ ಇದ್ದಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರಿಗೆ ಮನವಿಪತ್ರ ಸಲ್ಲಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜೆಡಿಎಸ್ ಜಿಲ್ಲಾ ಘಟಕದ ವಕ್ತಾರ ರಘು ಹೊಂಗೆರೆ, ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಮಂಜೇಗೌಡ, ಚಂದ್ರಶೇಖರ್, ಸತೀಶ್, ಮುಖಂಡರಾದ ಗಂಗಾಧರ್, ಬಾಣಾವರ ಅಶೋಕ್, ಹೊನ್ನಶೆಟ್ಟಹಳ್ಳಿ ಪುಟ್ಟಸ್ವಾಮಿ, ನವೀನ್,  ಗ್ಯಾರಹಳ್ಳಿ ರವೀಶ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ರಾಜಣ್ಣ , ಲಕ್ಷ್ಮಣಗೌಡ, ಸ್ವಾಮಿ ಗೌಡ , ರುದ್ರಪ್ಪ, ನಗರಸಭೆ ಸದಸ್ಯರಾದ ವಾಸು , ಮಂಜಣ್ಣ,  ಚಂದ್ರೇಗೌಡ, ರಫೀಕ್ , ವಕೀಲರಾದ ಲಿಂಗರಾಜು, ಸುದೀಪ್,  ಲೋಕೇಶ್, ವಾಸು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.